ಬೆಂಗಳೂರು: ಫೆಂಗಲ್ ಚಂಡಮಾರುತದ ಆರ್ಭಟಕ್ಕೆ ಜನರು ಕಂಗಾಲಾಗಿದ್ದಾರೆ. ಸತತ ಮೂರನೇ ದಿನ ಮಂಗಳವಾರವೂ ದಕ್ಷಿಣ ಹಾಗೂ ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಸಾವಿರಾರು ಎಕರೆಯಲ್ಲಿ ಬೆಳೆಯಲಾಗಿದ್ದ ಭತ್ತ, ರಾಗಿ ಮತ್ತಿತರ ಬೆಳೆಗಳಿಗೆ ಹಾನಿಯಾಗಿದ್ದರೆ, ಬಯಲುಸೀಮೆಯಲ್ಲಿ ತೋಟಗಾರಿಕೆ ಬೆಳೆಗಳು ನೆಲಕಚ್ಚಿವೆ. ಇನ್ನೂ ನಾಲ್ಕು ದಿನ (ಡಿ.8) ಮಳೆ ಮುಂದುವರಿಯುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರಿಂದ ರೈತರು ಆತಂಕಕ್ಕೀಡಾಗಿದ್ದಾರೆ. ಮತ್ತೊಂದೆಡೆ ಮಳೆಯಿಂದಾಗಿ ಚಳಿ ಕೂಡ ಹೆಚ್ಚಾಗಿದ್ದು, ಜನರಲ್ಲಿ ಅನಾರೋಗ್ಯ ಭೀತಿ ಕಾಡುತ್ತಿದೆ. ಮಳೆ ಪೀಡಿತ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ಸತತ ರಜೆ ಕೊಡುತ್ತಿರುವುದರಿಂದ ಪರೀಕ್ಷೆ ಸಮೀಪದಲ್ಲಿರುವಾಗ ಮಕ್ಕಳ ಕಲಿಕೆ ಮೇಲೂ ಕಾಮೋಡ ಕವಿಯುವಂತೆ ಮಾಡಿದೆ.
ಎಲ್ಲೆಲ್ಲಿ ಮಳೆ ಆರ್ಭಟ?: ಮಂಗಳವಾರ ಬೆಂಗಳೂರು ನಗರ, ಮಂಗಳೂರು, ದಾವಣಗೆರೆ, ಕೊಡಗಿನ ಗೋಣಿಕೊಪ್ಪ, ಮಂಡ್ಯದ ಕೆವಿಕೆ, ಮೈಸೂರಿನ ಹುಣಸೂರು, ರಾಮನಗರ, ಹಾಸನ ಮತ್ತು ಚಿಕ್ಕಮಗಳೂರಿನ ಮೂಡಿಗೆರೆ ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ವರ್ಷಧಾರೆಯಾಗಿದೆ. ಇನ್ನೂ ಕೆಲವು ಜಿಲ್ಲೆಗಳಲ್ಲಿ ಜಿಟಿಜಿಟಿ ಮಳೆ ಬಿದ್ದಿದೆ.
ಯೆಲ್ಲೋ ಅಲರ್ಟ್: ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರಿನಲ್ಲಿ ಡಿ.4ರಂದು ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ನೀಡಲಾಗಿದೆ. ಸಮುದ್ರದಲ್ಲಿ ಎತ್ತರದ ಅಲೆಗಳ ಅಬ್ಬರ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಸೂಚಿಸಿದೆ.
4 ದಿನ ಮಳೆ ಅಲರ್ಟ್: ಬೆಂಗಳೂರು ನಗರ, ಬೆಂ.ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು,ಹಾಸನ, ಶಿವಮೊಗ್ಗ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ವಿಜಯನಗರ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಡಿ.4ರಿಂದ ಡಿ.8ರವರೆಗೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಎಲ್ಲೆಲ್ಲಿ, ಏನು ಹಾನಿ?
- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ
- ಮಂಗಳವಾರ ಎಡೆಬಿಡದೆ ಸುರಿದ ಮಳೆ
- ಮಳೆಯಿಂದ ಹಲವೆಡೆ ಬೆಳೆಗಳಿಗೆ ಹಾನಿ
- ಶಿವಮೊಗ್ಗ, ಚಿಕ್ಕಮಗಳೂರು ಮಳೆಗೆ ತತ್ತರ
- ಭತ್ತದ ಕೊಯ್ಲು ಮುಂದೂಡಿದ ರೈತರು
- ಕಾಫಿ ಫಸಲಿಗೂ ಗಂಡಾಂತರದ ಆತಂಕ
- ಬಿಸಲಲ್ಲಿಟ್ಟಿದ್ದ ಕಾಫಿಗೆ ಫಂಗಸ್ ಆತಂಕ
- ಮಂಗಳೂರಲ್ಲಿ 10 ಬೋಟ್ ನೀರುಪಾಲು
ಭತ್ತ ಬೆಳೆಗಾರರಿಗೆ ಶಾಕ್
- ಬಳ್ಳಾರಿ, ಕೊಪ್ಪಳ, ವಿಜಯನಗರದಲ್ಲಿ ಮಳೆ
- ಭತ್ತದ ಕಟಾವಿಗೆ ಕಾಡುತ್ತಿದೆ ಮಳೆ ಭೀತಿ
- ಗದ್ದೆಗೆ ಇಳಿಯಲಾಗದ ಸ್ಥಿತಿಯಲ್ಲಿ ರೈತರು
- ಕಟಾವು ಮಾಡಿದ ಭತ್ತ, ಜೋಳಕ್ಕೆ ಆತಂಕ
- ಒಣಗಿಸುವುದಕ್ಕೆ ಕಷ್ಟ ಪಡುತ್ತಿರುವ ಅನ್ನದಾತ
- ಭತ್ತದ ದರ ಕುಸಿಯಬಹುದೆಂಬ ಆತಂಕ
- ಹಾಸನ ಜಿಲ್ಲೆಯಲ್ಲೂ ನೆಲ ಕಚ್ಚಿದ ಭತ್ತ
- ಚಾಮರಾಜನಗರದಲ್ಲೂ ಬೆಳೆ ಹಾನಿ
- ರಾಗಿ, ಮೆಕ್ಕೆಜೋಳ, ತೊಗರಿ ಜಲಾವೃತ
ಕುಸಿಯುತ್ತಿವೆ ಮನೆಗಳು
- ಚಿತ್ರದುರ್ಗ ಜಿಲ್ಲೆಯಲ್ಲಿ 16 ಮನೆಗಳಿಗೆ ಹಾನಿ
- ಮಂಡ್ಯ ಜಿಲ್ಲೆ ಮದ್ದೂರಲ್ಲಿ 3 ಮನೆ ಕುಸಿತ
- ಮೈಸೂರಿನಲ್ಲಿ ರಸ್ತೆಗೆ ಉರುಳಿದ ಬಂಡೆ
- ದ.ಕನ್ನಡ ಜಿಲ್ಲೆಯಲ್ಲಿ 6 ಮನೆಗೆ ಹಾನಿ
- ನೆಲಕ್ಕುರುಳಿದ 30 ವಿದ್ಯುತ್ ಕಂಬಗಳು
ತರಕಾರಿಗೆ ಕೊಳಕು ರೋಗ
- ಚಿಕ್ಕಬಳ್ಳಾಪುರದಲ್ಲಿ ತರಕಾರಿಗೆ ಹಾನಿ
- ಮಳೆಗೆ ಮುದುಡಿದ ಹೂವು, ಹಣ್ಣು
- ಬಿತ್ತನೆಯ ಆಲೂಗಡ್ಡೆ ಜಲಾವೃತ
- ಕೊಳಕು ಮಚ್ಚೆ ರೋಗದ ಆತಂಕ
- ಕಟಾವಿಗೆ ಬಂದಿದ್ದ ರಾಗಿಗೆ ಹಾನಿ
- ತೆನೆ ಬಾಗಿ ಮೊಳಕೆಯೊಡೆದ ರಾಗಿ
- ಚೆಂಡು, ಗುಲಾಬಿ, ಸೇವಂತಿಗೆ ನಾಶ
- ಗಿಡಗಳಲ್ಲೇ ಉದುರಿದ ಹೂ ದಳ
ಫೆಂಗಲ್ ಚಂಡಮಾರುತ ದುರ್ಬಲಗೊಂಡಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಹೊರತುಪಡಿಸಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ 2 ದಿನದಲ್ಲಿ ಮಳೆ ಕ್ಷೀಣವಾಗಲಿದೆ. ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ, ಕರಾವಳಿ ವ್ಯಾಪ್ತಿಯ ಪ್ರದೇಶಗಳಲ್ಲಿ ಡಿ.6ರಿಂದ ಡಿ.8ರವರೆಗೆ ಗುಡುಗು ಸಹಿತ ಮಳೆಯಾಗಲಿದೆ.
| ಡಾ.ಶ್ರೀನಿವಾಸರೆಡ್ಡಿ ಹವಾಮಾನ ತಜ್ಞ
IPL ಹರಾಜಿನಲ್ಲಿ ಅನ್ಸೋಲ್ಡ್; ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವದಾಖಲೆ ನಿರ್ಮಿಸಿದ ಯುವ ಬ್ಯಾಟರ್
ಭಾರತವು ಲ್ಯಾಬೋರೇಟರಿಯಂತೆ ಹೊಸ ಪ್ರಯೋಗಗಳನ್ನು ಮಾಡಬಹುದು; ವಿವಾದದ ಕಿಡಿ ಹೊತ್ತಿಸಿದ Bill Gates ಹೇಳಿಕೆ