IPL ಹರಾಜಿನಲ್ಲಿ ಅನ್​ಸೋಲ್ಡ್​; ಟಿ20 ಕ್ರಿಕೆಟ್​ನಲ್ಲಿ ಹೊಸ ವಿಶ್ವದಾಖಲೆ ನಿರ್ಮಿಸಿದ ಯುವ ಬ್ಯಾಟರ್​

Urvil Patel
Published on

ಇಂದೋರ್​: ನವೆಂಬರ್​ 24-25ರಂದು ನಡೆದ ಐಪಿಎಲ್ (IPL)​ ಮೆಗಾ ಹರಾಜು ಪ್ರಕ್ರಿಯೆಯಲ್ಲಿ 62 ವಿದೇಶಿಯರು ಸೇರಿದಂತೆ ಒಟ್ಟು 182 ಮಂದಿ ಆಟಗಾರರು ತಂಡಗಳಿಗೆ ಮಾರಾಟವಾಗಿದ್ದು,  10 ತಂಡಗಳು ಒಟ್ಟಾರೆ 639.15 ಕೋಟಿ ರೂ. ವ್ಯಯಿಸಿದ್ದು, ಒಟ್ಟು 8 ಆರ್​ಟಿಮ್​ ಬಳಕೆ ಮಾಡಲಾಗಿದೆ. ಅದರಂತೆ ಈ ಬಾರಿಯ ಟೂರ್ನಿಯಲ್ಲಿ ಫ್ರಾಂಚೈಸಿಗಳು ಅನುಭವಿ ಜತೆಗೆ ಹೊಸ ಮುಖಗಳಿಗೂ ಮಣೆ ಹಾಕಿದ್ದು, ಅನೇಕ ಆಟಗಾರರು ಹರಾಜಿನಲ್ಲಿ ಮಾರಾಟವಾಗದೆ ಉಳಿದಿದ್ದಾರೆ. ಇದರಲ್ಲಿ ಪ್ರಮುಖವಾಗಿ ಗುಜರಾತ್​ ಮೂಲದ ಯುವ ಬ್ಯಾಟರ್​ ಉರ್ವಿಲ್​ ಪಟೇಲ್​ ಕೂಡ ಒಬ್ಬರಾಗಿದ್ದಾರೆ.

ಈಚೆಗೆ ಮುಕ್ತಾಯಗೊಂಡ ಐಪಿಎಲ್​ (IPL) ಮೆಗಾ ಹರಾಜಿನಲ್ಲಿ ಗುಜರಾತ್​ ಮೂಲದ ಯುವ ಬ್ಯಾಟರ್​ ಉರ್ವಿಲ್​ ಪಟೇಲ್​ರನ್ನು ಖರೀದಿಸಲು ಯಾವ ಫ್ರಾಂಚೈಸಿಯು ಮುಂದೆ ಬಂದಿರಲಿಲ್ಲ. ಇದೀಗ ಈ ಯುವ ಬ್ಯಾಟರ್​ ದೇಶೀಯ ಕ್ರಿಕೆಟ್​ನಲ್ಲಿ ತನ್ನ ಸಿಡಿಲಬ್ಬರದ ಬ್ಯಾಟಿಂಗ್​ನಿಂದಾಗಿ ಎಲ್ಲರ ಗಮನ ಸೆಳೆಯುತ್ತಿದ್ದು, ಟಿ20 ಕ್ರಿಕೆಟ್​ನಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ.

ಇಂದೋರ್​ನ ಎಮೆರಾಲ್ಡ್​ ಹೈಸ್ಕೂಲ್​ ಕ್ರೀಡಾಂಗಣದಲ್ಲಿ ನಡೆದ ಸೈಯದ್​ ಮುಷ್ತಾಕ್​ ಅಲಿ ಟ್ರೋಫಿ ಪಂದ್ಯದಲ್ಲಿ ಉತ್ತರಾಖಂಡದ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಗುಜರಾತ್​ ಪರ ಕಣಕ್ಕಿಳಿದಿದ್ದ ಉರ್ವಿಲ್​ ಪಟೇಲ್​ 36 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ. ಇದಕ್ಕೂ ಮುನ್ನ ತ್ರಿಪುರಾದ ವಿರುದ್ಧ ಇದೇ ಕ್ರೀಡಾಂಗಣದಲ್ಲಿ 28 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಈ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಟಿ20 ಕ್ರಿಕೆಟ್​​ನಲ್ಲಿ ಭಾರತದ ಪರ 40 ಕ್ಕಿಂತ ಕಡಿಮೆ ಎಸೆತಗಳಲ್ಲಿ 2 ಶತಕ ಬಾರಿಸಿದ ಏಕೈಕ ಬ್ಯಾಟರ್ ಎಂಬ ದಾಖಲೆ ಉರ್ವಿಲ್ ಪಾಲಾಯಿತು. ಹಾಗೆಯೇ ಈ ಸಾಧನೆ ಮಾಡಿದ ವಿಶ್ವದ 2ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟರ್​ ಡೇವಿಡ್​ ಮಿಲ್ಲರ್​ ಈ ಸಾಧನೆ ಮಾಡಿದ್ಧಾರೆ.

ಇದೀಗ ಡೇವಿಡ್​ ಮಿಲ್ಲರ್​ ಹೆಸರಿನಲ್ಲಿದ್ದ ಈ ಸಾಧನೆಯನ್ನು ಉರ್ವಿಲ್​ ಪಟೇಲ್​ ಸರಿಗಟ್ಟಿದ್ದು, ಈ ಮೂಲಕ ಟಿ20 ಕ್ರಿಕೆಟ್​ ಇತಿಹಾಸದಲ್ಲಿ 40 ಕ್ಕಿಂತ ಕಡಿಮೆ ಎಸೆತಗಳಲ್ಲಿ 2 ಶತಕ ಸಿಡಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಉತ್ತರಾಖಂಡ ವಿರುದ್ಧದ ಪಂದ್ಯದಲ್ಲಿ 41 ಎಸೆತಗಳಲ್ಲಿ 11 ಸಿಕ್ಸ್ ಹಾಗೂ 8 ಬೌಂಡರಿ ಒಳಗೊಂಡಂತೆ 111 ರನ್​ ಸಿಡಿಸಿದರು. ಈ ಪಂದ್ಯದಲ್ಲಿ ಗುಜರಾತ್ ತಂಡವು 13.1 ಓವರ್​​ಗಳಲ್ಲಿ 185 ರನ್ ಬಾರಿಸಿ 8 ವಿಕೆಟ್​​ಗಳ ಅಮೋಘ ಗೆಲುವು ದಾಖಲಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net