

ಚೆನ್ನೈ: ತಮಿಳುನಾಡಿನಲ್ಲಿ ಫೆಂಗಲ್ ಚಂಡಮಾರುತದ (Fengal Cyclone ) ಅಬ್ಬರ ದಿನ ಕಳೆದಂತೆ ಜೋರಾಗುತ್ತಿದ್ದು, ಭಾರಿ ಮಳೆಯ ಪರಿಣಾಮದಿಂದ ತಿರುವಣ್ಣಾಮಲೈಯಲ್ಲಿ ಭೂಕುಸಿತವಾಗಿದ್ದು ಏಳು ಮಂದಿ ಮೃತಪಟ್ಟಿದ್ಧಾರೆ. ಅವಶೇಷಗಳ ಅಡಿಯಿಂದ ಮೃತದೇಹವನ್ನು ಹೊರತೆಗೆಯಲಾಗಿದ್ದು, ಮೃತರ ಕುಟುಂಬಕ್ಕೆ ತಲಾ ಐದು ಲಕ್ಷ ರೂಪಾಯಿ ಪರಿಹಾರವನ್ನು ಸರ್ಕಾರ ಘೋಷಿಸಿದೆ.
ಮೃತರನ್ನು ಮೀನಾ (27), ಗೌತಮ್ (8), ವಿನಿಯಾ (5), ರಮ್ಯಾ (7), ವಿನೋದಿನಿ (16), ಮಹಾ (7) ಎಂದು ಗುರುತಿಸಲಾಗಿದ್ದು, ಎನ್ಡಿಆರ್ಎಫ್ ಸಿಬ್ಬಂದಿ ಆರು ಮೃತದೇಹಗಳನ್ನು ಹೊರತೆಗೆದಿದ್ದಾರೆ. ಇನ್ನೊಂದು ಮೃತದೇಹಕ್ಕಾಗಿ ಶೋಧ ಕಾರ್ಯ ನಡೆದಿದ್ದು, ಅದಿಕಾರಿಗಳು ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ. ಫೆಂಗಲ್ ಚಂಡಮಾರುತದ ಕಾರಣ ನಿರಂತರ ಮಳೆಯಾಗುತ್ತಿದ್ದು, ಸ್ಥಳಕ್ಕೆ ಮದ್ರಾಸ್ ಐಐಟಿಯ ತಜ್ಞರು ಆಗಮಿಸಿದ್ದಾರೆ. ಎನ್‌ಡಿಆರ್ ಎಫ್ ಸಿಬ್ಬಂದಿ, ಕಮಾಂಡೋ ಮತ್ತು ತಮಿಳುನಾಡು ಅಗ್ನಿಶಾಮಕ ಸಿಬ್ಬಂದಿ 170ಕ್ಕೂ ಅಧಿಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ.