ಮೂಡುಬಿದಿರೆ: ಕಾರ್ಕಳ – ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಬನ್ನಡ್ಕ ಪೆಟ್ರೋಲ್ ಪಂಪ್ ಬಳಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಸತತ ಮಳೆಯಿಂದ ಭೂ ಕುಸಿತ ಸಂಭವಿಸುತ್ತಲೇ ಇದೆ. ಮಳೆಗಾಲದಲ್ಲಿ ಈ ಭಾಗದಲ್ಲಿ ಭೂ ಕುಸಿತ ಸಂಭವಿಸಿದ್ದು, ಹೆದ್ದಾರಿ ಕಾಮಗಾರಿ ನಡೆಸುವ ವೇಳೆ ಇಲ್ಲಿ ನಡೆಸಲಾದ ಅವೈಜ್ಞಾನಿಕ ಕಾಮಗಾರಿಯೇ ಕುಸಿತಕ್ಕೆ ಕಾರಣ ಎನ್ನುವ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ವಿದ್ಯುತ್ ಟ್ರಾನ್ಸ್‌ಫಾರ್ಮರ್ ರಸ್ತೆಗುರುಳುವ ಸಂಭವ

ಕೆಲವು ಬಾರಿ ಭೂ ಕುಸಿತ ಸಂಭವಿಸಿದ್ದರೂ ಹೆದ್ದಾರಿ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಗುತ್ತಿಗೆದಾರರು ಇಲ್ಲಿ ಯಾವುದೇ ಮುನ್ನೆಚ್ಚರಿಕೆ ವಹಿಸಿಲ್ಲ. ಭೂ ಕುಸಿತ ಮಾತ್ರವಲ್ಲದೆ, ಭೂ ಕುಸಿತವಾಗುತ್ತಿರುವ ಭೂಮಿಯ ಪಕ್ಕದಲ್ಲೇ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಒಂದು ಕುಸಿತದ ಭೀತಿ ಎದುರಿಸುತ್ತಿದೆ. ರಸ್ತೆ ಆಳವಾಗಿ ಕಡಿಯುವಾಗ ಮೊದಲಿದ್ದ ರಸ್ತೆಯ ಸಮಾನಾಂತರಕ್ಕೆ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಇದೆ. ಆ ಟ್ರಾನ್ಸ್‌ಫಾರ್ಮರ್ ಪಕ್ಕದಲ್ಲೇ ಭೂಮಿ ಕುಸಿತವಾಗುತ್ತಿರುವುದರಿಂದ ಮಳೆ ಹೆಚ್ಚಾದರೆ, ಮಣ್ಣು ಸಹಿತ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಕೂಡ ಕುಸಿದು ಬೀಳುವ ಸಾಧ್ಯತೆಯಿದೆ. ಅಲ್ಲದೆ ಇಲ್ಲಿ ಭೂ ಕುಸಿತವಾಗುತ್ತಿರುವ ರಸ್ತೆ ಬದಿಯಲ್ಲೇ ಹಲವು ವಿದ್ಯುತ್ ಕಂಬಗಳಿದ್ದು, ಇವುಗಳೂ ಉರುಳಿ ಬೀಳುವ ಸಾಧ್ಯತೆಯಿದೆ. ಹೀಗಾಗಿ ಈ ರಸ್ತೆಯಲ್ಲಿ ಪ್ರಯಾಣಿಸುವ ವಾಹನ ಸವಾರರು ಇಲ್ಲಿ ಬರುವಾಗ ಮುನ್ನೆಚ್ಚರಿಗೆ ವಹಿಸುವ ಅಗತ್ಯವಿದೆ.
ಹೆದ್ದಾರಿ ವಿಸ್ತರಣೆ ವೇಳೆ ಅವೈಜ್ಞಾನಿಕ ರೀತಿ ಅಗೆತ

ಹೆದ್ದಾರಿ ಅಗಲ ಮಾಡುವಾಗ ಇಲ್ಲಿ ಮೊದಲಿದ್ದ ರಸ್ತೆಯನ್ನು ಕಡಿಯಲಾಗಿದೆ. ಎಸ್‌ಕೆಎಫ್ ಮತ್ತು ಪೆಟ್ರೋಲ್ ಪಂಪ್ ನಡುವಿನ ರಸ್ತೆಯನ್ನು ಅಗಲಗೊಳಿಸುವಾಗ ಸರ್ವಿಸ್ ರಸ್ತೆಯನ್ನು ಒಂದು ಕಡೆ ಹಾಗೇ ಎತ್ತರವಾಗಿ ಉಳಿಸಿಕೊಂಡು, ಇನ್ನೊಂದು ಬದಿಯಲ್ಲಿ ಒಂದು ಕಡೆ ಪೆಟ್ರೋಲ್ ಪಂಪ್‌ಗೆ ತೆರಳುವವರಿಗೆಂದು ಕಡಿಯಲಾಗಿದೆ. ಆದರೆ, ಎರಡೂ ಬದಿಯಲ್ಲಿ ಆಳವಾಗಿ ಅಗೆದಿರುವ ಪ್ರದೇಶದಲ್ಲಿ ಭೂಮಿ ಕುಸಿಯದಂತೆ ಯಾವುದೇ ಮುನ್ನೆಚ್ಚರಿಕೆ ವಹಿಸಿಲ್ಲ. ಗುತ್ತಿಗೆದಾರರು, ಸ್ಥಳೀಯಾಡಳಿತ ಮುನ್ನೆಚ್ಚರಿಕೆ ವಹಿಸದಿದ್ದಲ್ಲಿ ಅಪಾಯ ಸಂಭವಿಸುವುದು ಖಚಿತ ಎಂದು ಸ್ಥಳೀಯರು ಹೇಳುತ್ತಿದ್ದಾರೆ.