ಅಪಾಯಕಾರಿ ಮರಗಳಿಂದ ಸಂಚಕಾರ : ಕೊಂಬೆ ಮುರಿದು ಬೀಳುವ ಭೀತಿ ; ತೆರವಿಗೆ ಮನವಿ

trees
ಗಂಗೊಳ್ಳಿಯ ಬಾವಿಕಟ್ಟೆ ಮತ್ತು ಗುಜ್ಜಾಡಿ ಬೆಣ್ಗೆರೆ ಬಳಿ ಮುಖ್ಯರಸ್ತೆಗೆ ವಾಲಿಕೊಂಡು ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳು
Published on

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

ಮುಂಗಾರು ಆರಂಭವಾಗಿದ್ದು ಗಾಳಿ ಮಳೆ ಅಬ್ಬರಕ್ಕೆ ಎಲ್ಲೆಂದರಲ್ಲಿ ಮರಗಳು, ವಿದ್ಯುತ್ ಕಂಬಗಳು ಮುರಿದು ಬೀಳುವುದು ಸಹಜ. ರಸ್ತೆ ಬದಿಯಲ್ಲಿ ಬೆಳೆದು ನಿಂತಿರುವ ಅಪಾಯಕಾರಿ ಮರಗಳು ವಾಹನ ಸವಾರರು, ಪಾದಚಾರಿಗಳು ಹಾಗೂ ವಿದ್ಯಾರ್ಥಿಗಳಿಗೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ.
ತ್ರಾಸಿಯಿಂದ ಗಂಗೊಳ್ಳಿವರೆಗೆ ಮುಖ್ಯರಸ್ತೆ ಇಕ್ಕೆಲಗಳಲ್ಲಿ ಬೃಹತ್ ಗಾತ್ರದ ಮರಗಳು ಬೆಳೆದು ನಿಂತಿದ್ದು, ಪ್ರತಿ ವರ್ಷ ಮಳೆಗಾಲದಲ್ಲಿ ಮರಗಳ ಕೊಂಬೆ ಮುರಿದು ಬೀಳುತ್ತಿದೆ. ನಾಯಕವಾಡಿ ತಿರುವು, ಗುಜ್ಜಾಡಿ ಬಸ್ ನಿಲ್ದಾಣ, ಬೆಣ್ಗೆರೆ ಕ್ರಾಸ್, ಬಾವಿಕಟ್ಟೆ, ಗಂಗೊಳ್ಳಿ ಶ್ರೀ ರಾಮ ಮಂದಿರ, ಪೋಸ್ಟ್ ಆಫೀಸ್ ಬಳಿ ಹಾಗೂ ಬಂದರು ಬಸ್ ನಿಲ್ದಾಣದ ಸಮೀಪ ಅಪಾಯಕಾರಿ ಮರಗಳಿದ್ದು ಯಾವ ಸಂದರ್ಭ ಮುರಿದು ರಸ್ತೆಗೆ ಬೀಳುತ್ತದೆ ಎಂದು ಹೇಳಲಾಗದು. ಕೆಲವು ಮರಗಳು ಸಂಪೂರ್ಣವಾಗಿ ರಸ್ತೆಗೆ ವಾಲಿದ್ದು ಇಂದಲ್ಲ ನಾಳೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವಂತಿದೆ. ತ್ರಾಸಿ-ಗಂಗೊಳ್ಳಿ ಮುಖ್ಯರಸ್ತೆಯಲ್ಲಿ ಪ್ರತಿನಿತ್ಯ ನೂರಾರು ವಾಹನಗಳು, ವಿದ್ಯಾರ್ಥಿಗಳು, ಮೀನುಗಾರರು, ಕಾರ್ಮಿಕರು ಸೇರಿದಂತೆ ಅನೇಕ ಮಂದಿ ಪ್ರತಿನಿತ್ಯ ಸಂಚರಿಸುತ್ತಿದ್ದು, ಮುಖ್ಯರಸ್ತೆಯಲ್ಲಿರುವ ಇಂತಹ ಅಪಾಯಕಾರಿ ಮರಗಳು ಭೀತಿ ತಂದೊಡ್ಡುತ್ತಿದೆ.

ಮನವಿಗೆ ಸ್ಪಂದನೆಯಿಲ್ಲ

ಕಳೆದ ಕೆಲವರ್ಷಗಳ ಹಿಂದೆ ಗಂಗೊಳ್ಳಿ ರಾಮ ಮಂದಿರ ಬಳಿ ಭಾರಿ ಗಾತ್ರದ ಮರ ರಸ್ತೆಗೆ ಉರುಳಿ ಬಿದ್ದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗಂಗೊಳ್ಳಿ ಬಸ್ ನಿಲ್ದಾಣದ ಸಮೀಪ ಮರದ ಭಾರಿ ದೊಡ್ಡ ಕೊಂಬೆ ಮುರಿದು ಬಿದ್ದು ಸಮೀಪದ ಅಂಗಡಿ ಮುಂಗಟ್ಟುಗಳಿಗೆ ಹಾನಿಯಾಗಿತ್ತು, ಅಲ್ಲದೆ ಅಲ್ಲಲ್ಲಿ ಮರಗಳು ಮುರಿದು ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿಯಾದ ಘಟನೆಗಳೂ ನಡೆದಿದೆ. ಗಂಗೊಳ್ಳಿಯಿಂದ ತ್ರಾಸಿವರೆಗಿನ ಮುಖ್ಯರಸ್ತೆಯಲ್ಲಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ 2-3 ವರ್ಷಗಳಿಂದ ನಿರಂತರವಾಗಿ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸ್ಥಳೀಯಾಡಳಿತದ ಮನವಿಗೂ ಇಲಾಖೆ ಸ್ಪಂದಿಸಿಲ್ಲ.

ಹೀಗಾಗಿ ಸಾರ್ವಜನಿಕರ ಸುರಕ್ಷೆ ದೃಷ್ಟಿಯಿಂದ ರಸ್ತೆ ಬದಿಯ ಅಪಾಯಕಾರಿ ಮರಗಳನ್ನು ತೆರವುಗೊಳಿಸಿ ಜನರು ಹಾಗೂ ವಾಹನ ಸವಾರರು ನಿರ್ಭೀತಿಯಿಂದ ಸಂಚರಿಸುವಂತೆ ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ರಸ್ತೆ ಬದಿ ಕೆಲವು ಮರಗಳು ಸಂಪೂರ್ಣವಾಗಿ ರಸ್ತೆಗೆ ವಾಲಿಕೊಂಡಿದ್ದು ಅಪಾಯಕಾರಿ ಸ್ಥಿತಿಯಲ್ಲಿದೆ. ಸಂಬಂಧಪಟ್ಟವರು ಅಪಾಯಕಾರಿ ಮರಗಳನ್ನು ತೆರವುಗೊಳಿಸಿದರೆ ಮಳೆಗಾಲದಲ್ಲಿ ಜನರು, ವಿದ್ಯಾರ್ಥಿಗಳು ಹಾಗೂ ವಾಹನ ಸವಾರರು ನಿರ್ಭೀತಿಯಿಂದ ಸಂಚರಿಸಬಹುದು. ಅವಘಡ ಸಂಭವಿಸುವ ಮೊದಲೇ ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಕಾರ್ಯಪ್ರವೃತವಾಗಬೇಕು.-ನವೀನ್ ದೊಡ್ಡಹಿತ್ಲು, ಸಾಮಾಜಿಕ ಕಾರ್ಯಕರ್ತ, ಗಂಗೊಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net