ಹರಿಪ್ರಸಾದ್ ನಂದಳಿಕೆ ಕಾರ್ಕಳ
ಮುಂಗಾರು ಪೂರ್ವ ಮುಂಜಾಗ್ರತಾ ಸಭೆಯಲ್ಲಿ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಲಾಗಿತ್ತಾದರೂ ತಾಲೂಕು ವ್ಯಾಪ್ತಿಯ ರಸ್ತೆಬದಿ ಬುಡ ಕಳೆದುಕೊಂಡ ಹಾಗೂ ಸಾರ್ವಜನಿಕ ಪ್ರದೇಶದಲ್ಲಿರುವ ಅಪಾಯಕಾರಿ ಮರಗಳ ತೆರವು ಕಾರ್ಯ ಇನ್ನೂ ನಡೆದಿಲ್ಲ. ಹಲವು ದಿನಗಳಿಂದ ತಾಲೂಕಾದ್ಯಂತ ನಿರಂತರವಾಗಿ ಗಾಳಿ ಮಳೆ ಸುರಿಯುತ್ತಿದ್ದು, ಅಪಾಯಕಾರಿ ಮರಗಳು ಧರೆಗೆ ಉರುಳುವ ಸ್ಥಿತಿಯಲ್ಲಿವೆ.
ಕಾರ್ಕಳದ ಬೈಪಾಸ್ ರಸ್ತೆಯಿಂದ ಬಜಗೋಳಿ ಮಾಳ ಸಾಗುವ ಹೆದ್ದಾರಿ ವಿಸ್ತರಣೆ ಕಾಮಗಾರಿ ಸಂದರ್ಭ ಸಾವಿರಾರು ಮರಗಳನ್ನು ಕಡಿದು ಹಾಕಲಾಗಿತ್ತು ಹಾಗೂ ಸಾಣೂರುನಿಂದ ಬಿಕರ್ನಕಟ್ಟೆ ಹೆದ್ದಾರಿ ಕಾಮಗಾರಿಗಾಗಿ ಸಾಕಷ್ಟು ಮರಗಳು ಧರಶಾಯಿ ಮಾಡಲಾಗಿತ್ತು. ಅದರೆ ಕೆಲವೊಂದು ಪ್ರದೇಶದಲ್ಲಿ ಸಮತಟ್ಟು ಮಾಡುವ ಸಲುವಾಗಿ ಮರಗಳ ಬುಡವನ್ನು ಅಗೆದ ಪರಿಣಾಮ ಇನ್ನೂ ನೂರಾರು ಮರಗಳು ಬುಡ ಕಳೆದುಕೊಂಡು ಇಂದೋ ನಾಳೆಯೋ ಬೀಳುವ ಸ್ಥಿತಿಯಲ್ಲಿವೆ. ಹೀಗಾಗಿ ಮಳೆಗಾಲದಲ್ಲಿ ಜೋರಾಗಿ ಬೀಸುವ ಗಾಳಿ ಮಳೆಯ ನಡುವೆ ಪ್ರಯಾಣಿಕರು ಹಾಗೂ ಸಾರ್ವಜನಿಕರು ಪ್ರಾಣಭಯದಲ್ಲೇ ಸಂಚಾರ ನಡೆಸುವಂತಾಗಿದೆ.
ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಮಾಳ ಗೇಟ್‌ನಿಂದ ಕಾರ್ಕಳ ನಡುವಿನ ದ್ವಿಪಥ ರಸ್ತೆಯನ್ನು ಚತುಷ್ಪಥವಾಗಿ ಪರಿವರ್ತಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಸಚಿವಾಲಯ 15.27 ಕಿ.ಮೀ ದೂರದ ರಸ್ತೆಯನ್ನು ಪ್ರಸ್ತುತ ಎರಡು ಪಥದಿಂದ ನಾಲ್ಕು ಪಥಗಳಾಗಿ ಪರಿವರ್ತಿಸಲು 177.84 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಚಿಕ್ಕಮಗಳೂರು ಮೂಲದ ಏಜೆನ್ಸಿಯೊಂದು ಗುತ್ತಿಗೆ ಪಡೆದುಕೊಂಡಿದೆ. ಹೆದ್ದಾರಿಯಲ್ಲಿ ರಸ್ತೆ ವಿಸ್ತರಣೆಯ ಕಾಮಗಾರಿಯನ್ನು 2 ತಿಂಗಳ ಹಿಂದೆಯೇ ಆರಂಭಿಸಿದೆ. ಕಾಮಗಾರಿ ಆರಂಭಕ್ಕೂ ಮೊದಲು ಹೆದ್ದಾರಿ ಬದಿಯ ರಸ್ತೆಗಳಲ್ಲಿನ ಮರಗಳ ತೆರವು ಕಾರ್ಯ ನಡೆಸಬೇಕಿತ್ತು. ತೆರವುಗೊಳಿಸದೆ ಕಾಮಗಾರಿ ನಡೆಸಿದ್ದರಿಂದ ಇದೀಗ ಸಮಸ್ಯೆ ಎದುರಾಗಿದೆ. ಹೀಗಾಗಿ ಮರಗಳು ಯಾವುದೇ ಸಂದರ್ಭದಲ್ಲಿ ಧರೆಗೆ ಉರುಳುವ ಸಾಧ್ಯತೆಯಿದೆ.
ಗ್ರಾಮೀಣ ಭಾಗದಲ್ಲೂ ಸಮಸ್ಯೆ
ಬೆಳ್ಮಣ್, ಮುಂಡ್ಕೂರು, ಇನ್ನಾ, ಬೋಳ. ಸೇರಿದಂತೆ ಕೆರ್ವಾಶೆ, ಶಿರ್ಲಾಲು, ಅಂಡಾರು ಭಾಗದಲ್ಲಿಯೂ ಬೃಹತ್ ಗಾತ್ರದ ಅಪಾಯಕಾರಿ ಮರಗಳು ರಸ್ತೆಯ ಬದಿಯಲ್ಲಿದ್ದು ಸಮಸ್ಯೆಯನ್ನು ಸೃಷ್ಟಿಸುತ್ತಿದೆ. ಅಜೆಕಾರು, ಶಿರ್ಲಾಲು, ಕೆರ್ವಾಶೆ ಬಳಿಯಲ್ಲಿ ಸೋಮವಾರ ಬೀಸಿದ ಭಾರಿ ಗಾಳಿಗೆ ಮರಗಳು ಧರೆಗೆ ಉರುಳಿದ ಪರಿಣಾಮ ಹತ್ತಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಶಾಯಿಯಾಗಿವೆ. ಮುಂಡ್ಕೂರು ಗ್ರಾಪಂನ ಪೊಸ್ರಾಲು, ಪೇರೂರು ಕಿರು ಸೇತುವೆ ಬಳಿ ರಸ್ತೆಗೆ ಬಾಗಿ ಬೃಹದಾಕಾರದ ಆಲದ ಮರವಿದ್ದು, ಅದು ಸಣ್ಣ ಮಳೆ ಗಾಳಿಗೆ ಬೀಳುವ ಸಾಧ್ಯತೆ ಇದೆ. ಈ ಬಗ್ಗೆ ಕಳೆದ ವರ್ಷವೇ ಮುಂಡ್ಕೂರು ಗ್ರಾಪಂ ಆಡಳಿತ ಮರ ಕಡಿಯುವ ಬಗ್ಗೆ ನಿರ್ಣಯ ಮಂಡಿಸಿ ತಹಸೀಲ್ದಾರರ ಮೂಲಕ ಆರಣ್ಯ ಇಲಾಖೆಗೆ ಮನವಿ ಮಾಡಿತ್ತು. ಆದರೆ ಆ ಮರ ಇನ್ನೂ ತೆರವು ಕಾರ್ಯ ನಡೆದಿಲ್ಲ.
ಹೆದ್ದಾರಿಯುದ್ದಕ್ಕೂ ಬುಡವನ್ನು ಕಳೆದುಕೊಂಡ ಬೃಹತ್ ಗಾತ್ರದ ಮರಗಳಿವೆ. ರಸ್ತೆ ವಿಸ್ತರಣೆ ಸಂದರ್ಭ ಕೆಲವೊಂದು ಮರಗಳನ್ನು ತೆರವು ಮಾಡಿದರೂ ಇನ್ನೂ ಸಾಕಷ್ಟು ಮರಗಳು ಅಪಾಯಕಾರಿಯಾಗಿವೆ.
-ಪ್ರಕಾಶ್ ಪೂಜಾರಿ, ಗ್ರಾಮಸ್ಥರು ಕಾರ್ಕಳ
ಮುಂಡ್ಕೂರು ಗ್ರಾಮದ ಪೊಸ್ರಾಲು ರಸ್ತೆಯ ಬದಿಯ ಬೃಹತ್ ಮರಗಳ ತೆರವಿನ ಬಗ್ಗೆ ಈಗಾಗಲೇ ನಿರ್ಣಯ ಮಾಡಿ ತಹಸೀಲ್ದಾರರಿಗೆ ಕಳುಹಿಸಲಾಗಿದೆ. ಆದರೂ ವಿಳಂಬವಾಗುತ್ತಿದೆ.
-ಭಾಸ್ಕರ ಎಂ.ಶೆಟ್ಟಿ, ಮುಂಡ್ಕೂರು ಗ್ರಾಮ ಪಂಚಾಯಿತಿ ಸದಸ್ಯ
ಮುಂಡ್ಕೂರು ಗ್ರಾಮದಲ್ಲಿರುವ ಅಪಾಯಕಾರಿ ಮರಗಳ ತೆರವಿನ ಬಗ್ಗೆ ಗಂಭೀರವಾಗಿ ಪರಿಗಣಿಸಿ ಇಲಾಖೆಯ ಮೂಲಕ ಸಾರ್ವಜನಿಕರ ಸಹಯೋಗದಲ್ಲಿ ಕ್ರಮ ಕೈಗೊಳ್ಳಲಾಗುವುದು.
-ನಾಗೇಶ್ ಬಿಲ್ಲವ, ಮೂಡುಬಿದಿರೆ ವಲಯ ಅರಣ್ಯಾಧಿಕಾರಿ