

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಪಾವತಿಸಲು ಫಾಸ್ಟ್ಯಾಗ್ ಕಡ್ಡಾಯ ಮಾಡಿದರೂ, ಅದರ ಬಗ್ಗೆ ನಿರ್ಲಕ್ಷ್ಯವಹಿಸಿದ ವಾಹನ ಮಾಲೀಕರು ಹೊಸ ವರ್ಷದಿಂದ ಟೋಲ್ ಪ್ಲಾಜಾ ದಾಟುವುದು ಕಷ್ಟವಾಗಲಿದೆ. 2021ರ ಜನವರಿ 1ರಿಂದ ಟೋಲ್ಪ್ಲಾಜಾಗಳಲ್ಲಿ ನಗದು ಶುಲ್ಕ ಪಾವತಿ ಪಥ ರದ್ದು ಮಾಡಲಾಗುತ್ತಿದ್ದು, ಫಾಸ್ಟ್ಯಾಗ್ ಮೂಲಕವೇ ಶುಲ್ಕ ಪಾವತಿಸಬೇಕಿದೆ.
ಟೋಲ್ಪ್ಲಾಜಾಗಳಲ್ಲಿನ ವಾಹನ ದಟ್ಟಣೆ ಕಡಿಮೆ ಮಾಡುವುದು, ಇಂಧನ ಉಳಿತಾಯ ಸೇರಿ ಇನ್ನಿತರ ಕಾರಣಗಳಿಂದಾಗಿ 2020ರ ಜನವರಿ 15ರಿಂದ ಟೋಲ್ ಶುಲ್ಕವನ್ನು ಫಾಸ್ಟ್ಯಾಗ್ ಮೂಲಕ ಪಾವತಿಸುವ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಫಾಸ್ಟ್ಯಾಗ್ ಇಲ್ಲದವರಿಗಾಗಿ ಟೋಲ್ಪ್ಲಾಜಾಗಳಲ್ಲಿ ಪ್ರತ್ಯೇಕ ಪಥವನ್ನು ನಿಗದಿ ಮಾಡಲಾಗಿದೆ. ಒಂದು ವೇಳೆ ಫಾಸ್ಟ್ಯಾಗ್ ಇಲ್ಲದ ವಾಹನಗಳು ಫಾಸ್ಟ್ಯಾಗ್ ಪಥದಲ್ಲಿ ಸಂಚರಿಸಿದರೆ, ದುಪ್ಪಟ್ಟು ಶುಲ್ಕ ಪಾವತಿಸಿ ತೆರಳುವ ನಿಯಮ ಜಾರಿಗೊಳಿಸಲಾಗಿದೆ. ಆದರೆ, ಇದೀಗ ಟೋಲ್ ಪ್ಲಾಜಾಗಳಲ್ಲಿನ ನಗದ ಶುಲ್ಕ ಪಾವತಿ ಪಥವನ್ನು ರದ್ದು ಮಾಡಲಾಗುತ್ತಿದ್ದು, ಜ. 1ರಿಂದ ಎಲ್ಲ ಪಥಗಳನ್ನು ಫಾಸ್ಟ್ಯಾಗ್ಪಥವನ್ನಾಗಿಸಲಾಗುತ್ತಿದೆ.
ಶೇ. 10-15 ವಾಹನಗಳಲ್ಲಿಲ್ಲ ಫಾಸ್ಟ್ಯಾಗ್: ಫಾಸ್ಟ್ಯಾಗ್ ಕಡ್ಡಾಯದ ನಂತರ ದೇಶದಲ್ಲಿ ಫಾಸ್ಟ್ಯಾಗ್ ಖರೀದಿ ಹೆಚ್ಚಳವಾಗಿದೆ. ಮೊದಲಿಗೆ 15 ಲಕ್ಷದಷ್ಟಿದ್ದ ಫಾಸ್ಟ್ಯಾಗ್ ಬಳಕೆದಾರರ ಸಂಖ್ಯೆ ಇದೀಗ 2 ಕೋಟಿಗೂ ಹೆಚ್ಚಿದೆ. ಆದರೆ ಇನ್ನೂ ಶೇ. 10ರಿಂದ 15 ವಾಹನಗಳು ಫಾಸ್ಟ್ಯಾಗ್ ವ್ಯಾಪ್ತಿಗೆ ಒಳಪಡಬೇಕಿವೆ. ಅಂತಹ ವಾಹನಗಳು ಈಗಲೇ ಫಾಸ್ಟ್ಯಾಗ್ ಖರೀದಿಸಿ, ನೋಂದಣಿ ಮಾಡಿಕೊಳ್ಳಬೇಕಿದೆ.
ಪಾವತಿಸಬೇಕಾಗುತ್ತದೆ ದುಪ್ಪಟ್ಟು ಶುಲ್ಕ: ಟೋಲ್ಪ್ಲಾಜಾಗಳಲ್ಲಿ ನಗದು ರೂಪದಲ್ಲಿ ಟೋಲ್ ಶುಲ್ಕ ಪಾವತಿ ವ್ಯವಸ್ಥೆ ರದ್ದು ಮಾಡುತ್ತಿರುವ ಹಿನ್ನೆಲೆಯಲ್ಲಿ, ಪ್ರತಿ ವಾಹನವೂ ಫಾಸ್ಟ್ಯಾಗ್ ಪಥದಲ್ಲಿಯೇ ಸಂಚರಿಸಬೇಕಿದೆ. ಒಂದು ವೇಳೆ ಫಾಸ್ಟ್ಯಾಗ್ಇಲ್ಲದ ವಾಹನಗಳು ನಿಯಮದಂತೆ ದುಪ್ಪಟ್ಟು ಶುಲ್ಕ ಪಾವತಿಸಿ ಟೋಲ್ಪ್ಲಾಜಾಗಳ ಮೂಲಕ ತೆರಳಬೇಕಿದೆ.
ಇದನ್ನೂ ಓದಿ: ಲೂಸ್ ಪ್ಯಾಕೆಟ್ಗಳಲ್ಲಿ ಈ ರಾಜ್ಯದಲ್ಲಿ ಇನ್ಮುಂದೆ ಎಣ್ಣೆ ಮಾರಾಟವಿಲ್ಲ- ಇದು ಹೈಕೋರ್ಟ್ ಆದೇಶ ಟೋಲ್ ಶುಲ್ಕ ವಸೂಲಿಯಲ್ಲಿ ಹೆಚ್ಚಳ: ಫಾಸ್ಟ್ಯಾಗ್ ಕಡ್ಡಾಯ ಆದೇಶ ಜಾರಿ ನಂತರ ಟೋಲ್ ಶುಲ್ಕ ಸಂಗ್ರಹದಲ್ಲೂ ಹೆಚ್ಚಳವಾಗಿದೆ. ಫಾಸ್ಟ್ಯಾಗ್ ಮುನ್ನ ದೇಶಾದ್ಯಂತ ಪ್ರತಿದಿನ ಸರಾಸರಿ 70 ಕೋಟಿ ರೂ. ಟೋಲ್ ಶುಲ್ಕ ವಸೂಲಿ ಆಗುತ್ತಿತ್ತು. ಆದರೀಗ ಅದು ಸರಾಸರಿ 92 ಕೋಟಿ ರೂ.ಗೆ ಏರಿಕೆಯಾಗಿದೆ. ಇದು 2021ರ ಜನವರಿಯಿಂದ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.
ಕೇಂದ್ರ ಸರ್ಕಾರ ನಿಯೋಜಿಸಿರುವ 22 ಬ್ಯಾಂಕ್ಗಳ ಶಾಖೆಗಳು, ನಿಗದಿತ ಪೆಟ್ರೋಲ್ ಬಂಕ್ಗಳು, ಟೋಲ್ ಪ್ಲಾಜಾದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತೆರೆದಿರುವ ಕೇಂದ್ರಗಳಲ್ಲಿ ಫಾಸ್ಟ್ಯಾಗ್ ಸ್ಟಿಕ್ಕರ್ಗಳು ದೊರೆಯುತ್ತವೆ. ಸ್ಟಿಕ್ಕರ್ ಖರೀದಿಗೆ ವಾಹನದ ನೋಂದಣಿ ಪ್ರಮಾಣ ಪತ್ರ (ಆರ್.ಸಿ.), ವಾಹನ ಮಾಲೀಕರು ವಾಹನ ಚಾಲನ ಪರವಾನಗಿ (ಡಿಎಲ್), 2 ಪಾಸ್ಪೋರ್ಟ್ ಸೈಜ್ ಫೋಟೋ, ಮತದಾರರ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್ ಸೇರಿ ಯಾವುದಾದರೊಂದು ಗುರುತಿನ ಪ್ರಮಾಣಪತ್ರ ನೀಡಬೇಕು. ಅದನ್ನು ದೃಢೀಕರಿಸಿದ ನಂತರ ಫಾಸ್ಟ್ಯಾಗ್ ಸ್ಟಿಕ್ಕರ್ ನೀಡಲಾಗುತ್ತದೆ. ಶಾಪಿಂಗ್ ವೆಬ್ಸೈಟ್ಸ್ ಮೂಲಕವೂ ಫಾಸ್ಟ್ಯಾಗ್ ಖರೀದಿ ಮಾಡಬಹುದಾಗಿದೆ.