ಭಾರಿ ಮಳೆಗೆ ರೈತರು ಕಂಗಾಲು

Kin_Farmers
Published on

ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ

ಕರಾವಳಿಯಲ್ಲಿ ನಿರಂತರ ಮಳೆಯಾಗುವ ಕಾರಣ ಭತ್ತದ ಕೃಷಿ ಬೆಳೆದ ರೈತರು ಕಂಗಾಲಾಗಿದ್ದಾರೆ. ಜೂನ್ ತಿಂಗಳ ಮೊದಲಿಗೆ ನಾಟಿ ಕಾರ್ಯ ಮಾಡಿದ ರೈತರ ಭತ್ತ ಕೃಷಿ ಇದೀಗ ಕಟಾವಿಗೆ ಬಂದಿದ್ದು, ಮಳೆ ಕಾರಣ ಕಟಾವು ಮಾಡಲು ಅಸಾಧ್ಯವಾಗಿದೆ.

ಜುಲೈ ತಿಂಗಳ ನಂತರ ನಿರಂತರ ಮಳೆ ಬಂದು ಭತ್ತದ ಕೃಷಿಗೆ ನೆರೆ ಆವರಿಸಿದ ಕಾರಣ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದರು. ಜೂನ್ ತಿಂಗಳಲ್ಲಿ ನಾಟಿ ಮಾಡಿದ ರೈತರ ಭತ್ತದ ಸಸಿ ನೀರಿನಿಂದ ಮುಳುಗಿದರೆ, ಹೆಚ್ಚಿನ ರೈತರು ಅದೇ ಸಂದರ್ಭದಲ್ಲಿ ನಾಟಿ ಕಾರ್ಯ ಆರಂಭಿಸಿದರು.

ಇದೀಗ ಭತ್ತದ ಕೃಷಿ ಕಟಾವಿಗೆ ಮಳೆ ಅಡ್ಡಿಯಾಗಿದೆ. ಗದ್ದೆಯಲ್ಲಿ ನೀರು ತುಂಬಿದ್ದು ಕಟಾವು ಯಂತ್ರ ಗದ್ದೆಗೆ ಇಳಿಯದಂತಾಗಿದೆ. ಒಂದು ವೇಳೆ ಕಟಾವು ಮಾಡಿದರೂ ಬೈ ಹುಲ್ಲು ಸಂಪೂರ್ಣ ಕೊಳೆತು ಹೋಗುತ್ತದೆ. ಈ ಎಲ್ಲ ಕಾರಣದಿಂದ ಕಟಾವಿಗೆ ವಿಳಂಬವಾಗುತ್ತಿದೆ. ಪಕ್ಷಿಕೆರೆ ಸಮೀಪದ ಪಂಜ ಗ್ರಾಮದ ಹೆಚ್ಚಿನ ರೈತರು ಜೂನ್ ತಿಂಗಳಲ್ಲಿ ನಾಟಿ ನಡೆಸಿದ ಕಾರಣ ಇದೀಗ ಕಟಾವಿಗೆ ಬಂದಿದೆ. ಸ್ಥಳೀಯ ರೈತರೊಬ್ಬರ 5 ಎಕರೆ ಭತ್ತದ ಕೃಷಿ ಕಟಾವಿಗೆ ಬಂದಿದ್ದರೂ ಮಳೆ ಕಾರಣ ಕಟಾವು ಬಾಕಿ ಇದೆ.

ಭತ್ತದ ಬೆಲೆ ಇಳಿಕೆ

ಒಂದು ಕಡೆ ಕಟಾವಿಗೆ ಮಳೆ ಅಡ್ಡಿಯಾದರೆ ಮತ್ತೊಂದು ಕಡೆ ಭತ್ತಕ್ಕೆ ಬೆಲೆ ಇಳಿಮುಖವಾದ ಕಾರಣ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಳೆದ ಬಾರಿ ಭತ್ತದ ಬೆಲೆ ಕಿಲೋಗೆ 25 ರೂ. ಇದ್ದರೆ ಈ ಬಾರಿ 21ರಿಂದ 23 ರೂ.ವರೆಗೆೆ ಇಳಿದಿದೆ. ಈ ಬಗ್ಗೆ ವಿಚಾರಿಸಿದರೆ ಉತ್ತರ ಕರ್ನಾಟಕದಿಂದ ನಮಗೆ ಬೇಕಾದಷ್ಟು ಭತ್ತ ಬರುತ್ತಿದೆ ಎನ್ನುತ್ತಾರೆ ಭತ್ತದ ಮಿಲ್ ಮಾಲೀಕರು. ಸರ್ಕಾರ ರೈತರ ಸಂಕಷ್ಟ ಅರಿತು ಭತ್ತಕ್ಕೆ ಬೆಲೆ ನಿಗದಿಗೊಳಿಸಬೇಕು ಎಂದು ಆಂತಕಕ್ಕೀಡಾದ ರೈತರು ಆಗ್ರಹಿಸಿದ್ದಾರೆ.

ಒಂದು ಕಡೆ ಮಳೆಯಿಂದ ಸಮಸ್ಯೆಯಾದರೆ, ಮತ್ತೊಂದು ಕಡೆ ಭತ್ತಕ್ಕೆ ಬೆಲೆ ಇಳಿಮುಖವಾದ ಕಾರಣ ಆತಂಕ. ಈ ಬಾರಿ ಪ್ರಾರಂಭದಿಂದ ರೈತರು ಒಂದಲ್ಲ ಒಂದು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ಸತೀಶ್ ಶೆಟ್ಟಿ ಬೈಲಗುತ್ತು, ರೈತರು, ಪಂಜ, ಪಕ್ಷಿಕೆರೆ

ಸತೀಶ್ ಶೆಟ್ಟಿ ಬೈಲಗುತ್ತು, ರೈತರು, ಪಂಜ, ಪಕ್ಷಿಕೆರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net