

ನವದೆಹಲಿ : ನಿನ್ನೆ ತಾನೇ ಬಾಲಿವುಡ್ ನಟ ಆಮೀರ್ ಖಾನ್ ಅವರಿಗೆ ಕರೊನಾ ಸೋಂಕು ದೃಢಪಟ್ಟಿತ್ತು. ಇದೀಗ ಅವರೊಂದಿಗೆ 3 ಇಡಿಯಟ್ಸ್ ಚಿತ್ರದಲ್ಲಿ ಸಹನಟರಾಗಿ ನಟಿಸಿದ್ದ ತಮಿಳು ನಟ ಆರ್.ಮಾಧವನ್ ಕೂಡ ಕರೊನಾ ಪಾಸಿಟೀವ್ ಆಗಿದ್ದಾರೆ. ಈ ಬಗ್ಗೆ ಟ್ವಿಟರ್ ಖಾತೆಯಲ್ಲಿ ತಿಳಿಸಿರುವ ಮಾಧವನ್ ತಮ್ಮ ಚಿತ್ರದ ಪಾತ್ರಗಳನ್ನು ಉಲ್ಲೇಖಿಸುತ್ತಾ ತಮಾಷೆಯ ಕಾಮೆಂಟ್ ಮಾಡಿದ್ದಾರೆ.
ರಾಜು ಹಿರಾನಿ ಅವರ ಚಿತ್ರವಾದ 3 ಇಡಿಯಟ್ಸ್ ಭಾರೀ ಜನಪ್ರಿಯತೆ ಗಳಿಸಿದ ಚಿತ್ರ. ಈ ಚಿತ್ರದಲ್ಲಿ ರಾಂಚೋ(ಆಮೀರ್), ಫರಹಾನ್(ಮಾಧವನ್) ಮತ್ತು ರಾಜು(ಶರ್ಮನ್ ಜೋಶಿ) ಎಂಬ ಮೂವರು ಆಪ್ತ ಕಾಲೇಜು ಸ್ನೇಹಿತರಿರುತ್ತಾರೆ. ವೈರಸ್ ಎಂಬ ಅಡ್ಡಹೆಸರು ಹೊಂದಿದ ವೀರು ಸಹಸ್ರಬುದ್ಧಿ (VIRU S.) ಎಂಬ ಐಐಟಿ ಪ್ರಾಂಶುಪಾಲರು ಈ ಮೂವರ ಹಿಂದೆ ಬಿದ್ದಿರುತ್ತಾರೆ. ಅದನ್ನು ನೆನಪಿಸುತ್ತಾ ಮಾಧವನ್ ಫನ್ನಿ ಕಾಮೆಂಟ್ ಬರೆದಿದ್ದಾರೆ.
"ರಾಂಚೋನ ಫರಹಾನ್ ಫಾಲೋ ಮಾಡಲೇಬೇಕು. ವೈರಸ್ ನಮ್ಮ ಹಿಂದೆ ಯಾವಾಗಲೂ ಇದ್ದು, ಇದೀಗ ಗಟ್ಟಿಗೆ ಹಿಡಿದುಕೊಂಡುಬಿಟ್ಟಿದ್ದಾನೆ" ಎಂದಿರುವ ಮಾಧವನ್, ಜೊತೆಗೇ ನಿರಾತಂಕವಾಗಿರಬೇಕು ಎಂದು ಹೇಳಲು ಆ ಚಿತ್ರದಲ್ಲಿ ಕ್ಯಾಚ್ ಫ್ರೇಸ್ ಆಗಿ ಬಳಸಲ್ಪಡುವ 'ಆಲ್ ಇಸ್ ವೆಲ್' ಅನ್ನೂ ತಮ್ಮ ಸಂದೇಶದಲ್ಲಿ ಅಡಕಗೊಳಿಸಿದ್ದಾರೆ. "ಆಲ್ ಇಸ್ ವೆಲ್ ಅಂಡ್ ದ ಕೋವಿಡ್ ವೈರಸ್ ವಿಲ್ ಬಿ ಇನ್ ದ ವೆಲ್ ಸೂನ್" ಎಂದು ಬರೆದು ತಾವು ಚೇತರಿಸಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ಈ ಜಾಗದಲ್ಲಿ ನಾವು ರಾಜು ನಮ್ಮ ಜೊತೆಗಿರಬೇಕೆಂದು ಬಯಸುವುದಿಲ್ಲ ಎಂದಿದ್ದಾರೆ! (ಏಜೆನ್ಸೀಸ್)