

ಮುಂಬೈ: ನಾಳೆ (ನ.19) ನಡೆಯಲಿರುವ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಇಡೀ ಜಗತ್ತೇ ತುದಿಗಾಲಲ್ಲಿ ನಿಂತು ಕಾಯುತ್ತಿದೆ. ಬಲಿಷ್ಠ ತಂಡಗಳಾದ ಭಾರತ ಮತ್ತು ಆಸ್ಟ್ರೇಲಿಯಾ ಟ್ರೋಫಿಗಾಗಿ ಕಾದಾಡಲಿದ್ದು, ನಾಳಿನ ಪಂದ್ಯ ರಣ ರೋಚಕತೆಯಿಂದ ಕೂಡಿರುವುದರಲ್ಲಿ ಯಾವುದೇ ಸಂದೇಹವಿಲ್ಲ. ರೋಹಿತ್ ಶರ್ಮ ಪಡೆ ಗೆಲ್ಲಲಿ ದೇಶಾದ್ಯಂತ ಜನರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇದರ ಮಧ್ಯೆ ಬಾಲಿವುಡ್ ದಿಗ್ಗಜ ಅಮಿತಾಭ್ ಬಚ್ಚನ್ ಅವರನ್ನು ಫೈನಲ್ ಪಂದ್ಯ ವೀಕ್ಷಿಸಬಾರದೆಂದು ಅಭಿಮಾನಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ. ಅದರ ಹಿಂದೆ ಒಂದು ವಿಚಿತ್ರ ಕಾರಣವೂ ಇದೆ.
ಗುಜರಾತಿನ ಅಹಮದಾಬಾದ್ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಾಳೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಜಕೀಯ, ಕ್ರೀಡೆ ಹಾಗೂ ಸಿನಿಮಾ ಕ್ಷೇತ್ರ ಗಣ್ಯರು ಸಾಕ್ಷಿಯಾಗಲಿದ್ದಾರೆ. ಆದರೆ, ಫೈನಲ್ ಪಂದ್ಯಕ್ಕೆ ಹಾಜರಾಗಬೇಕೋ? ಬೇಡವೋ? ಎಂಬ ಗೊಂದಲ ಸ್ವತಃ ಅಮಿತಾಭ್ಗೆ ಕಾಡುತ್ತಿದೆ. ಅಭಿಮಾನಿಗಳನ್ನು ಕೇಳಿದರೆ, ಹೋಗೋದೆ ಬೇಡ ಎಂದು ಹೇಳುತ್ತಿದ್ದಾರೆ.
ನ.15ರಂದು ಅಮಿತಾಭ್ ತಮ್ಮ ಎಕ್ಸ್ (ಈ ಹಿಂದೆ ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ನಾನು ವೀಕ್ಷಣೆ ಮಾಡದ ಪಂದ್ಯಗಳನೆಲ್ಲ ಭಾರತ ಗೆದ್ದಿದೆ ಎಂದಿದ್ದರು. ನಿನ್ನೆ (ನ.17) ಮತ್ತೊಂದು ಪೋಸ್ಟ್ ಶೇರ್ ಮಾಡಿರುವ ಅಮಿತಾಭ್, ಫೈನಲ್ ಪಂದ್ಯ ನೋಡಲು ಹೋಗಬೇಕೋ ಬೇಡವೋ? ಎಂದು ಬರೆದುಕೊಂಡಿದ್ದಾರೆ.
ಅಮಿತಾಭ್ ಪೋಸ್ಟ್ಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದ್ದು, ಬಹುತೇಕರು ಫೈನಲ್ ಪಂದ್ಯಕ್ಕೆ ಹೋಗದಂತೆ ಬಾಲಿವುಡ್ ಸಿನಿಮಾ ದಿಗ್ಗಜನ ಬಳಿ ಮನವಿ ಮಾಡಿದ್ದಾರೆ. ದಯವಿಟ್ಟು ಹೋಗಬೇಡಿ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಅಮಿತಾಭ್ ಭಾರತದ ಫೈನಲ್ ಪಂದ್ಯವನ್ನು ನೋಡಿ ತಂಡವು ಸೋಲಲಿದೆ ಎಂದು ಅಮಿತಾಭ್ ಪುತ್ರ ಅಭಿಷೇಕ್ ಬಚ್ಚನ್ ಸಹ ಹೇಳಿದ್ದಾರೆ.
ಅಂದಹಾಗೆ ಏಕದಿನ ವಿಶ್ವಕಪ್ ಇತಿಹಾದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಫೈನಲ್ನಲ್ಲಿ ಮುಖಾಮುಖಿಯಾಗುತ್ತಿರುವುದು ಇದು ಎರಡನೇ ಬಾರಿ. 2003ರ ವಿಶ್ವಕಪ್‌ನಲ್ಲಿ ಮೊದಲ ಬಾರಿ ಮುಖಾಮುಖಿಯಾಗಿದ್ದವು. ರಿಕಿ ಪಾಂಟಿಂಗ್ ನೇತೃತ್ವದ ಆಸ್ಟ್ರೇಲಿಯಾ ತಂಡ ಸೌರವ್ ಗಂಗೂಲಿ ನಾಯಕತ್ವದ ಭಾರತವನ್ನು ಸೋಲಿಸಿ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ವಿಶ್ವಕಪ್‌ನಲ್ಲಿ ಭಾರತ ಫೈನಲ್ ಪ್ರವೇಶಿಸುತ್ತಿರುವುದು ಇದು ನಾಲ್ಕನೇ ಬಾರಿ. 1983, 2003 ಮತ್ತು 2011 ರಲ್ಲಿ ಫೈನಲ್ ತಲುಪಿದೆ ಮತ್ತು 1983 ಮತ್ತು 2011 ರಲ್ಲಿ ಪ್ರಶಸ್ತಿಯನ್ನು ಗೆದ್ದಿದೆ.
ಭಾರತ ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಲೀಗ್ ಹಂತದಲ್ಲಿ 9 ಮತ್ತು ಒಂದು ಸೆಮಿಫೈನಲ್ ಸೇರಿ ಆಡಿದ 10 ಪಂದ್ಯಗಳಲ್ಲೂ ಜಯ ಸಾಧಿಸಿದೆ. ಪ್ರತಿಯಾಗಿ ಆಸ್ಟ್ರೇಲಿಯಾ ತಂಡ 10 ಪಂದ್ಯಗಳಲ್ಲಿ ಎರಡರಲ್ಲಿ ಸೋತು ಉಳಿದ ಎಂಟು ಪಂದ್ಯಗಳಲ್ಲಿ ಜಯಸಿದೆ. ಅ.8ರಂದು ಚೆನ್ನೈ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಲೀಗ್ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿತು. ಇದೀಗ ನಾಳೆ (ನ.19) ಗುಜರಾತಿನ ಅಹಮದಾಬಾದ್ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿದ್ದು, ಟ್ರೋಫಿ ಯಾರ ಪಾಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಭಾರತ ಗೆಲ್ಲಲಿ ಎಂದು ನಾವೆಲ್ಲರು ಪ್ರಾರ್ಥಿಸೋಣ. (ಏಜೆನ್ಸೀಸ್)