ಬಿರಿಯಾನಿ ತಿನ್ನಲು ಹೋಗಿ ಸಿಕ್ಕಿಬಿದ್ದ ಖೋಟಾ ನೋಟು ಬಾಯ್ಸ್​; ಆರೋಪಿಗಳಿಗೆ ಫುಲ್​ ಮೀಲ್ಸ್​ ಕೊಟ್ಟ ಪೊಲೀಸರು

ವಿಜಯವಾಣಿ (25)
Published on

ರಾಯಚೂರು: ಹೋಟೆಲ್​ನಲ್ಲಿ ಬಿರಿಯಾನಿ ತಿಂದು 500 ರೂ. ಮುಖಬೆಲೆಯ ಖೋಟಾ ನೋಟು ನೀಡಿದ ಇಬ್ಬರು ಆರೋಪಿಗಳನ್ನು ಪೊಲೀಸರು ಗುರುವಾರ (ಮಾ.20) ಬಂಧಿಸಿದ್ದಾರೆ.

ಮಂಜುನಾಥ ಹಾಗೂ ರಮೇಶ್ ಬಂಧಿತ ಆರೋಪಿಗಳು. ನಗರದ ಬಿರಿಯಾನಿ ಹೋಟೆಲ್​ನಲ್ಲಿ ಚಿಕನ್ ಬಿರಿಯಾನಿ ತಿಂದು ಬಿಲ್ ಪಾವತಿಸುವಾಗ ಮಾಲೀಕನಿಗೆ ಖೋಟಾ ನೋಟು ನೀಡಿದ್ದಾರೆ. ಈ ನೋಟು ನೋಡಿದ ತಕ್ಷಣ ಅನುಮಾನ ವ್ಯಕ್ತಪಡಿಸಿದ ಹೋಟೆಲ್ ಮಾಲೀಕ, ನೋಟನ್ನು ಸರಿಯಾಗಿ ಪರಿಶೀಲಿಸಿದ್ದಾರೆ. ಈ ವೇಳೆ ಅದು ನಕಲಿ ನೋಟು ಎಂಬುದು ಸ್ಪಷ್ಟವಾಗಿದೆ.

ನೋಟಿನಲ್ಲಿ ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ ಎಂದು ನಮೂದಿಸಿದ್ದು, ಆರೋಪಿಗಳು ಮನೋರಂಜನೆಗಾಗಿ ಬಳಸುವ ನಕಲಿ ನೋಟನ್ನು ಚಲಾವಣೆಗೆ ಯತ್ನಿಸಿದ್ದರು. ಕೂಡಲೇ ಹೋಟೆಲ್ ಮಾಲೀಕ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಸ್ಥಳಕ್ಕೆ ಅಗಮಿಸಿದ ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಜಿಲ್ಲೆಯಲ್ಲಿ ಇತೀಚೆಗೆ ಖೋಟಾ ನೋಟು ಜಾಲ ಪತ್ತೆಯಾದ ಬೆನ್ನಲ್ಲೇ ಮತ್ತೊಂದು ಪ್ರಕರಣ ದಾಖಲಾಗಿದೆ. ಖೋಟಾ ನೋಟು ದಂಧೆಗೆ ಮುಂದಾಗಿದ್ದ ನಾಲ್ವರನ್ನು ಇತ್ತೀಚೆಗೆ ಬಂಧಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net