

ಥಾಣೆ: ಆಧಾರ್, ಪಡಿತರ ಚೀಟಿ ಬೇಕಾದ್ರೆ ತಲೆನೋವೇ ಇಲ್ಲ ಕೂಡ್ಲೇ ಕೊಟ್ಟು ಬಿಡ್ತೇವೆ ಎಂದು ಹೇಳುತ್ತಿದ್ದ ಎಐಎಂಐಎಂ ನಾಯಕನ ಮನೆ ನಕಲಿ ಆಧಾರ್, ನಕಲಿ ಪಡಿತರ ಚೀಟಿಗಳ ಮುದ್ರಣ ಕೇಂದ್ರವಾಗಿತ್ತು! ಪೊಲೀಸ್ ದಾಳಿ ನಡೆಸಿದಾಗ ಆ ಮನೆಯಲ್ಲಿ ಸೀಲು ಹೊಂದಿದ್ದ 38 ಖಾಲಿ ರೇಷನ್ ಕಾರ್ಡ್, 30 ಆಧಾರ್ ಕಾರ್ಡ್ಗಳು ಪತ್ತೆಯಾಗಿದ್ದವು. ಅವೆಲ್ಲವನ್ನೂ ಪೊಲೀಸರು ವಶಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳನ್ನು ಕಳೆದ ತಿಂಗಳೇ ಪೊಲೀಸರು ಬಂಧಿಸಿದ್ದರು. ಬಂಧಿತರನ್ನು ಖಾಲಿದ್ ಗುಡ್ಡು ಮತ್ತು ಆತನ ಸಹೋದರ ಬಬ್ಲು ಎಂದು ಗುರುತಿಸಲಾಗಿದೆ. ಖಾಲಿದ್ ಗುಡ್ಡು ಎಐಎಂಐಎಂನ ಭಿವಾಂಡಿ ಘಟಕದ ಅಧ್ಯಕ್ಷ. ಇವರ ವಿರುದ್ಧ ಒತ್ತೆ ಹಣಕ್ಕಾಗಿ ಅಪಹರಣ, ಸುಲಿಗೆ, ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಪ್ರಕರಣವೂ ಸೇರಿ ಅನೇಕ ಪ್ರಕರಣಗಳನ್ನು ಪೊಲೀಸರು ದಾಖಲಿಸಿರುವುದಾಗಿ ಝೋನ್ ಎರಡರ ಡಿಸಿಪಿ ರಾಜ್ ಕುಮಾರ್ ಶಿಂಧೆ ತಿಳಿಸಿದ್ದಾರೆ.
ವಿಚಾರಣೆ ಸಂದರ್ಭದಲ್ಲಿ ನಕಲಿ ಆಧಾರ್, ನಕಲಿ ಪಡಿತರ ಚೀಟಿ ವಿಚಾರ ಬಾಯ್ಬಿಟ್ಟ ಖಾಲಿದ್, ಚುನಾವಣೆಯ ಉದ್ದೇಶಕ್ಕಾಗಿ ಇವನ್ನೆಲ್ಲ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಗೂಂಡಾಗಿರಿ ರಾಜಕೀಯ ಮಾಡುತ್ತಿದ್ದ ಖಾಲಿದ್ ನೀಡಿರುವ ಮಾಹಿತಿ ಪ್ರಕಾರವೇ ಪೊಲೀಸರು ಆತನ ಮನೆಯ ಮೇಲೆ ದಾಳಿ ನಡೆಸಿ ನಕಲಿ ಗುರುತಿನ ಚೀಟಿಗಳನ್ನು ವಶಪಡಿಸಿಕೊಂಡಿದ್ದಾರೆ. ವಿಚಾರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)