Fact Check| ಮಧುರ ಕಂಠದ ಈ ಗಾಯಕಿ ದಿಗ್ಗಜ ಗಾಯಕ ಯೇಸುದಾಸ್​ ಮೊಮ್ಮಗಳಲ್ಲ, ಮತ್ಯಾರು?

Yesudas
Published on

ನವದೆಹಲಿ: ಹುಡುಗಿಯೊಬ್ಬಳು ತನ್ನ ಸುಮಧುರ ಕಂಠದಲ್ಲಿ ಪ್ರಸಿದ್ಧ ಭಕ್ತಿ ಗೀತೆ "ಹರಿವರಾಸನಂ" ಹಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಆಕೆ ದಿಗ್ಗಜ ಗಾಯಕ ಕೆ.ಜೆ. ಯೇಸುದಾಸ್​ ಮೊಮ್ಮಗಳಾದ ಅಮ್ಮೇಯಾ ಯೇಸುದಾಸ್​ ಎಂದು ಜಾಲತಾಣದಲ್ಲಿ ವಾದಿಸಲಾಗಿದೆ.

ಭಕ್ತಿ ಗೀತೆಯನ್ನು ಭಕ್ತಿಯಿಂದ ಹಾಡಿದಾಗ ಮೋಡಿಮಾಡುವ ಹಾಡು ಹೊರಬರುತ್ತದೆ. ಈ ಹುಡುಗಿ ಹೆಸರಾಂತ ಗಾಯಕ ಯೇಸುದಾಸ್​ ಅವರ ಮೊಮ್ಮಗಳು ಎಂಬ ಅಡಿಬರಹ ಇರುವ ವಿಡಿಯೋವನ್ನು ಸಾಕಷ್ಟು ಫೇಸ್​ಬುಕ್​ ಬಳಕೆದಾರರು ಶೇರ್​ ಮಾಡಿಕೊಂಡಿದ್ದಾರೆ.

ಇದು ಎಷ್ಟು ಸತ್ಯ ಎಂದು ತಿಳಿಯಲು ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಮ್​ ಫ್ಯಾಕ್ಟ್​ಚೆಕ್​ ನಡೆಸಿದ್ದು, ವೈರಲ್​ ವಿಡಿಯೋದಲ್ಲಿ ಇರುವುದು ಯೇಸುದಾಸ್​ ಅವರ ಮೊಮ್ಮಗಳಲ್ಲ ಎಂದು ಸಾಬೀತು ಮಾಡಿದ್ದಾರೆ. ವಿಡಿಯೋದಲ್ಲಿರುವ ಹುಡುಗಿ ಆಂಧ್ರ ಪ್ರದೇಶ ಮೂಲದ ಶ್ರೀಲಲಿತಾ ಭಾಮಿದಿಪತಿ ಎಂದು ತಿಳಿದುಬಂದಿದೆ.

ಅಂದಹಾಗೆ ಹರಿವಾರಸನಂ ಹಾಡು ಕೇರಳದ ಶಬರಿಮಲೆ ದೇವಸ್ಥಾನದಲ್ಲಿ ಅಯ್ಯಪ್ಪ ಸ್ವಾಮಿಗೆ ಹಾಡುವ ವಿಶೇಷ ಭಕ್ತಿ ಗೀತೆಯಾಗಿದೆ. ಈ ಹಾಡಿನ ಅನೇಕ ಆವೃತ್ತಿಗಳಿವೆ. ಆದರೆ, ಯೇಸುದಾಸ್​ ಮಧುರ ಕಂಠದಲ್ಲಿ ಮೂಡಿಬಂದ ಹಾಡು ಎಲ್ಲರ ಮನಸೂರೆಗೊಂಡಿದ್ದು, ತುಂಬಾ ಖ್ಯಾತಿ ಪಡೆದಿದೆ.

ವೈರಲ್​ ವಿಡಿಯೋದಲ್ಲಿರುವ ಸುಳಿವು ತೆಗೆದುಕೊಂಡು ಕೀವರ್ಡ್​ ಮೂಲಕ ಸರ್ಚ್​ ಮಾಡಿದಾಗ ಇದೇ ವಿಡಿಯೋ 2019ರ ಡಿಸೆಂಬರ್​ 17ರಂದು ಯೂಟ್ಯೂಬ್​ನಲ್ಲಿ ಅಪ್​ಲೋಡ್​ ಆಗಿರುವುದು ಪತ್ತೆಯಾಗಿದೆ. ಅಲ್ಲದೆ, ಅದೇ ವಿಡಿಯೋವನ್ನು ಶ್ರೀಲಲಿತಾ ತನ್ನ ಫೇಸ್​ಬುಕ್​ ಪೇಜ್​ನಲ್ಲಿಯು ಶೇರ್​ ಮಾಡಿಕೊಂಡಿದ್ದಾರೆ. ಅವರ ಫೇಸ್​ಬುಕ್​ ಖಾತೆಯ ಪ್ರಕಾರ ಅವರು ಆಂಧ್ರದ ನಿವಾಸಿ.

ಸ್ವತಃ ಶ್ರೀಲಲಿತಾರನ್ನು ಇಂಡಿಯಾ ಟುಡೆ ಸಂಪರ್ಕಿಸಿ ಸ್ಪಷ್ಟನೆಯನ್ನು ಪಡೆದಿದೆ. ಇಂಡಿಯಾ ಟುಡೆ ಈಮೇಲ್​ಗೆ ಪ್ರತಿಕ್ರಿಯೆ ನೀಡಿರುವ ಶ್ರೀಲಲಿತಾ, ಅನೇಕ ಫೇಸ್​​ಬುಕ್​ ಪೇಜ್​ಗಳು ಮತ್ತು ಯೂಟ್ಯೂಬ್​ ಚಾನೆಲ್​ಗಳು ನಾನು ಯೇಸುದಾಸ್​ ಅವರ ಮೊಮ್ಮಗಳು ಎಂದು ಹೇಳಿ ನನ್ನ ಹಾಡನ್ನು ಪೋಸ್ಟ್​ ಮಾಡಿದ್ದಾರೆ. ಅಂತಹ ಅನೇಕ ಪೇಜ್​ಗಳಲ್ಲಿ ನಾನು ಶ್ರೀಲಲಿತಾ, ಅಮ್ಮೆಯಾ ಯೇಸುದಾಸ್​ ಅಲ್ಲ ಎಂದು ಕಾಮೆಂಟ್​ ಮಾಡಿದ್ದೇನೆ. ನಿಜವಾಗಿಯೂ ನಾನು ಯೇಸುದಾಸ್​ ಅವರ ದೊಡ್ಡ ಅಭಿಮಾನಿ ಆದರೆ, ಅವರ ಮೊಮ್ಮಗಳಲ್ಲ ಎಂದು ಶ್ರೀಲಲಿತಾ ಸ್ಪಷ್ಟನೆ ನೀಡಿದ್ದಾರೆ.

ಕೆ.ಜೆ.ಯೆಸುದಾಸ್ ಅವರಿಗೆ 1975 ರಲ್ಲಿ ಪದ್ಮಶ್ರೀ, 2002 ರಲ್ಲಿ ಪದ್ಮಭೂಷಣ್ ಮತ್ತು 2017 ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅವರು ಹಲವಾರು ಭಾಷೆಗಳಲ್ಲಿ 50,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅಮ್ಮೇಯಾ ಯೇಸುದಾಸ್​ ಮಗ ವಿಜಯ್​ ಅವರ ಮಗಳು. ತಮ್ಮ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಯೇಸುದಾಸ್​ ಅಮ್ಮೇಯಾ ಫೋಟೋವನ್ನು ಶೇರ್​ ಮಾಡಿಕೊಂಡಿದ್ದಾರೆ.

ಜನವರಿ 2017ರಲ್ಲಿ, ಮಾತೃಭೂಮಿ ವೆಬ್‌ಸೈಟ್, ಅಮ್ಮೆಯಾ ಅವರೊಂದಿಗೆ ಕೆ.ಜೆ.ಯೆಸುದಾಸ್ ಹಾಡುವ ವೀಡಿಯೊವನ್ನು ರೆಕಾರ್ಡ್ ಮಾಡಿದೆ. ವೀಡಿಯೊವನ್ನು ನೀವಿಲ್ಲಿ ನೋಡಬಹುದಾಗಿದೆ. ಹೀಗಾಗಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿರುವುದು ಯೇಸ್​ದಾಸ್​ ಮೊಮ್ಮಗಳಲ್ಲ, ಅವರು ಆಂಧ್ರ ಶ್ರೀಲಲಿತಾ ಎಂದು ಖಚಿತವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net