ಅದ್ದೂರಿ ಲವ್ವರ್ ಕೈಬಿಟ್ಟ ಸಂಜನಾ; ಅರ್ಜುನ್ ಸಮ್ಮತಿ ಪಡೆದುಕೊಂಡೇ ಚಿತ್ರದಿಂದ ಹೊರಕ್ಕೆ

Sanjana
Published on

ಬೆಂಗಳೂರು: ಕಳೆದ ಎರಡು ವರ್ಷದ ಹಿಂದೆ ‘ಅದ್ದೂರಿ’ ಖ್ಯಾತಿಯ ನಿರ್ದೇಶಕ ಎ.ಪಿ. ಅರ್ಜುನ್ ‘ಅದ್ದೂರಿ ಲವ್ವರ್’ ಸಿನಿಮಾ ಘೋಷಣೆ ಮಾಡಿದ್ದರು. ಮಾರ್ಚ್​ನಲ್ಲಿ ಸಿನಿಮಾ ಮುಹೂರ್ತವೂ ನೆರವೇರಿತ್ತು. ಫೋಟೋಶೂಟ್ ಸಹ ಮಾಡಿಸಿದ್ದರು ನಿರ್ದೇಶಕರು. ಆದರೆ, ಸಿನಿಮಾ ಮಾತ್ರ ಸೆಟ್ಟೇರಿರಲಿಲ್ಲ. ಈಗ ಶುರುವಾಗಲಿದೆ, ಆಗ ಶುರುವಾಗಲಿದೆ ಎನ್ನುತ್ತಲೇ ನಿರ್ದೇಶಕ ಎ.ಪಿ. ಅರ್ಜುನ್ ಹೇಳಿಕೊಂಡೇ ದಿನ ದೂಡಿದ್ದರು. ಇದೀಗ ಆ ಚಿತ್ರದಿಂದ ಸುದ್ದಿಯೊಂದು ಹೊರಬಂದಿದೆ. ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದ ನಟಿ ಸಂಜನಾ ಆನಂದ್ ಚಿತ್ರದಿಂದ ಹೊರಬಂದಿದ್ದಾರೆ!

ಹೌದು, ಕಳೆದ ಎರಡು ವರ್ಷಗಳಿಂದ ‘ಅದ್ದೂರಿ ಲವರ್’ ಚಿತ್ರಕ್ಕಾಗಿ ಸಂಜನಾ ಡೇಟ್ಸ್ ನೀಡಿದ್ದರು. ಅದರಂತೆ ಎಲ್ಲವೂ ನಡೆದಿದ್ದರೆ, ಇಷ್ಟೊತ್ತಿಗಾಗಲೇ ಸಿನಿಮಾ ಚಿತ್ರೀಕರಣವೇ ಮುಗಿದಿರಬೇಕಿತ್ತು. ಆದರೆ, ಲಾಕ್​ಡೌನ್​ನಿಂದ ಅದ್ಯಾವುದೂ ಈಡೇರಲಿಲ್ಲ. ಈ ನಡುವೆ ನಿರ್ದೇಶಕ ಅರ್ಜುನ್, ಧ್ರುವ ಸರ್ಜಾ ಜತೆ ಮತ್ತೊಂದು ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ. ಅರ್ಜುನ್, ಧ್ರುವ ಸರ್ಜಾ ಚಿತ್ರ ನಿರ್ದೇಶಿಸುವುದಕ್ಕೆ ಹೊರಟರೆ, ಇತ್ತ ‘ಅದ್ದೂರಿ ಲವರ್’ ಕಥೆ ಏನು? ಈ ಬಗ್ಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಇನ್ನು ಚಿತ್ರದಿಂದ ಹೊರಬಂದಿರುವ ನಟಿ ಸಂಜನಾ ಈ ಬಗ್ಗೆ ‘ವಿಜಯವಾಣಿ’ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಈ ಸಿನಿಮಾಕ್ಕೆ ಸಹಿ ಹಾಕಿ ಎರಡು ವರ್ಷಗಳೇ ಆಗಿವೆ. ಈ ನಡುವೆ ನಿರ್ದೇಶಕರು ಬೇರೆ ಸಿನಿಮಾದತ್ತ ಗಮನಹರಿಸಿದರು. ಇತ್ತ ನನಗೆ ಬೇರೆ ಸಿನಿಮಾಗಳಿಗೆ ಡೇಟ್ಸ್ ನೀಡಲು ಸಮಸ್ಯೆ ಆಗುತ್ತಿತ್ತು. ಹಾಗಾಗಿ ಎ.ಪಿ. ಅರ್ಜುನ್ ಅವರ ಸಮ್ಮತಿ ಪಡೆದುಕೊಂಡೇ ನಾನು ಚಿತ್ರದಿಂದ ಹೊರಬಂದಿದ್ದೇನೆ. ಮುಂದೆ ಮತ್ತೆ ಸಮಯ ಕೂಡಿಬಂದರೆ ಅವರ ಸಿನಿಮಾದಲ್ಲಿ ನಟಿಸುತ್ತೇನೆ’ ಎಂದಿದ್ದಾರೆ ಸಂಜನಾ. ಸದ್ಯ ಸಂಜನಾ ನಟಿಸಿರುವ ‘ಸಲಗ’, ‘ವಿಂಡೋ ಸೀಟ್’ ಸೇರಿ ಹಲವು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಹೊಸದಾಗಿ ಮೂರ್ನಾಲ್ಕು ಕಥೆಗಳನ್ನು ಅವರು ಕೇಳಿದ್ದು, ಈ ಪೈಕಿ ಸದ್ಯದಲ್ಲೇ ಇನ್ನೊಂದು ಹೊಸ ಚಿತ್ರ ಒಪ್ಪಲಿದ್ದಾರಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net