More

    ಭಗವದನುಭವ ಕಷ್ಟವಲ್ಲ ಬಹಳ ಸುಲಭ!

    ಭಗವದನುಭವ ಕಷ್ಟವಲ್ಲ ಬಹಳ ಸುಲಭ!ಸಾಧನೆಯ ಪಥದಲ್ಲಿ ಭಗವತ್ತತ್ವ ಹಾಗೂ ಭಗವದನುಭವದ ಬಗ್ಗೆ ಸ್ವಲ್ಪ ಭ್ರಮನಿರಸನಗೊಂಡ ಒಬ್ಬ ಯುವಕ ಇತ್ತೀಚೆಗೆ ನನ್ನಲ್ಲಿ ಒಂದು ಪ್ರಶ್ನೆ ಕೇಳಿದ. ‘ನಾನು ನನ್ನ ಅಂತರಂಗದಲ್ಲಿ ಭಗವಂತನೊಡನೆ ಸಂಪರ್ಕದಲ್ಲಿದ್ದೇನೆಯೇ ಅಥವಾ ಇಲ್ಲವೇ ಎಂಬುದನ್ನು ಹೇಗೆ ತಿಳಿಯಬಹುದು?’ ಅವನ ಭಕ್ತಿಯ ಜೀವನದಲ್ಲಿ ಯಾವುದೇ ಅಲೌಕಿಕ ವಿದ್ಯಮಾನಗಳಾಗಲೀ ಅಥವಾ ಪವಾಡಗಳಾಗಲೀ ನಡೆಯದಿದ್ದುದರಿಂದ ಅವನಲ್ಲಿ ಈ ಪ್ರಶ್ನೆ ಉದ್ಭವವಾಗಿತ್ತು! ಭಗವಂತನನ್ನು ನಂಬುವ ಹಲವು ಜನರು ಜೀವನದಲ್ಲಿ ಇಂತಹ ಪವಾಡಗಳನ್ನು ಹಾಗೂ ಅಲೌಕಿಕ ವಿದ್ಯಮಾನಗಳನ್ನು ನಿರೀಕ್ಷಿಸುತ್ತಾರೆ. ಅಲ್ಲದೆ, ಭಗವಂತನು ತಮ್ಮ ಸಮಸ್ಯೆ/ಸಂಕಟಗಳನ್ನು ಪವಾಡಸದೃಶವಾಗಿ ನಿವಾರಿಸುತ್ತಾನೆಂದೂ ನಂಬುತ್ತಾರೆ. ಇದುವೇ ಭಗವಂತನ ಮುಖ್ಯ ಕರ್ತವ್ಯವೆಂಬುದು ಅವರ ಭಾವನೆ! ಇಂತಹ ಭಗವಂತನನ್ನು ಅರಸಲು ಕೆಲವು ವಿಶೇಷ ಸ್ಥಳಗಳಿಗೆ ಹೋಗಿ, ಅಲ್ಲಿ ಕೆಲವು ವಿಶಿಷ್ಟ ದೈನಂದಿನ ಸಾಧನಾಕ್ರಿಯೆಗಳಲ್ಲಿ ತೊಡಗುವುದರಿಂದ ಜೀವನಾಂತ್ಯದಲ್ಲಿ ಭಗವಂತನ ಸಾನ್ನಿಧ್ಯವು ಲಭ್ಯವಾಗುವುದೆಂಬುದು ಅವರ ಕಲ್ಪನೆ! ಕೇವಲ ಸಂಪ್ರದಾಯಬದ್ಧ ಶುಷ್ಕ ಆಚರಣೆಗಳನ್ನೇ ಅವಲಂಬಿಸಿರುವ ಹಲವು ಪಂಥಗಳಲ್ಲಿ, ಸಜ್ಜನರ ಮೇಲೆ ಕರುಣೆದೋರಿ ದುರ್ಜನರನ್ನು ಶಿಕ್ಷಿಸುವುದೇ ಕರ್ತವ್ಯವಾದ ಇಂತಹ ದೇವರುಗಳನ್ನು ನಾವು ನೋಡಬಹುದು.

    ಮೂಲಭೂತ ಮಾನವ ಪ್ರವೃತ್ತಿಗಳಾದ ಭಯ ಹಾಗೂ ಲೋಭಗಳ ಆಧಾರದ ಮೇಲೆಯೇ ರೂಪಿತವಾಗಿರುವ ಇಂತಹ ಪಂಥಗಳು ಭೋಳೆ ಸ್ವಭಾವದ ಜನರನ್ನು ಸುಲಭವಾಗಿ ಆಕರ್ಷಿಸುತ್ತಾ ನೂರಾರು ವರ್ಷಗಳಿಂದ ಸೊಂಪಾಗಿ ಬೆಳೆದುಬಂದಿವೆ. ಆದರೆ, ಭಗವಂತನ ಅಸ್ತಿತ್ವವನ್ನು ವರ್ತಮಾನದಲ್ಲಿಯೇ ಸ್ವಂತ ಅನುಭವದ ಮೂಲಕವೇ ಅರಿಯಬೇಕೆಂದು ಆಶಿಸುವ ಹೊಸ ತಲೆಮಾರಿನ ಸಾಧಕರಿಗೆ ಇಂತಹ ಪಂಥಗಳು ರುಚಿಸುವುದಿಲ್ಲ. ಜೀವನವನ್ನೆಲ್ಲಾ ಹಲವು ನಿಯಮಿತ ಆಚರಣೆಗಳಲ್ಲಿಯೇ ಕಳೆದು, ಜೀವನಾಂತ್ಯದಲ್ಲಿ ಪಡೆಯುವ ಭಗವತ್ಸಾನ್ನಿಧ್ಯದ ಆದರ್ಶವು ಅವರಿಗೆ ಆಕರ್ಷಕವಾಗಿ ತೋರುವುದಿಲ್ಲ. ಈಗಲೇ ಇಲ್ಲಿಯೇ ಭಗವಂತನ ಅನುಭವವನ್ನು ಪಡೆದುಕೊಳ್ಳಬೇಕೆಂದು ಅವರ ತೀವ್ರ ಆಕಾಂಕ್ಷೆ. ಅದಕ್ಕೆ ಅಗತ್ಯವಾದ ತ್ಯಾಗ-ತಪಸ್ಸುಗಳಿಗೆ ಅವರು ಸಿದ್ಧರಾಗಿರುತ್ತಾರೆ, ಇಂತಹ ವ್ಯಕ್ತಿಗಳನ್ನು ಉಪನಿಷತ್ತುಗಳು ‘ಧೀರ’ರೆಂದು ಕರೆದಿವೆ. ಇವರಿಗೆ ಪ್ರತ್ಯಕ್ಷ ಜಗತ್ತಿನ ಹೊರಗಿರುವ ಭಗವಂತನ ಕಲ್ಪನೆ ರುಚಿಸುವುದಿಲ್ಲ. ನಮಗೆ ಕಾಣುವ ಜಗತ್ತಿನ ಕಣಕಣದಲ್ಲಿಯೂ ಇರುವ ಭಗವಂತನನ್ನು ಅಂತರಂಗದಲ್ಲಿಯೇ ಈಗಿಂದೀಗಲೇ ಅನುಭವಿಸಬೇಕೆಂಬುದೇ ಅವರ ಜೀವನದ ಹಂಬಲ. ಇಂತಹ ಸತ್ಯಾನ್ವೇಷಕರಿಗೆ ಕೇನೋಪನಿಷತ್ತು ದಾರಿದೀಪವಾಗಿದೆ.

    ಪ್ರತಿಬೋಧವಿದಿತಂ ಮತಂ ಅಮೃತತ್ವಂ ಹಿ ವಿಂದತೇ

    ಆತ್ಮನಾ ವಿಂದತೇ ವೀರ್ಯು ವಿದ್ಯಯಾ ವಿಂದತೇ ಅಮೃತಮ್

    (ಕೇನೋಪನಿಷತ್ತು 2.4)

    ‘ಸದಾ ಸರ್ವತ್ರ ಜೀವನದ ಪ್ರತಿ ವಿದ್ಯಮಾನ ಮತ್ತು ಅನುಭವಗಳ ಹಿನ್ನೆಲೆಯಲ್ಲಿರುವ ಪರಬ್ರಹ್ಮವಸ್ತುವಿನ ಕುರಿತಾಗಿ ಸತತ ಚಿಂತನೆ ಮಾಡುವ ವ್ಯಕ್ತಿಯು ಪ್ರತ್ಯಕ್ಷ ಬ್ರಹ್ಮಾನುಭವವನ್ನು ಪಡೆದು ಅಮೃತತ್ವ ಹೊಂದುತ್ತಾನೆ. ಬ್ರಹ್ಮಜ್ಞಾನವನ್ನು ಸಾಧಿಸಲು ಅಗತ್ಯವಾದ ಶಕ್ತಿಯನ್ನು ಅವನು ತನ್ನ ಅಂತರಂಗದಿಂದಲೇ ಪಡೆಯುತ್ತಾನೆ ಹಾಗೂ ಆ ಜ್ಞಾನವೇ ಅವನಿಗೆ ಅಮೃತತ್ವವನ್ನು ಪ್ರಸಾದಿಸುತ್ತದೆ.’

    ಕೇನೋಪನಿಷತ್ತು ಸಾಮವೇದದ ತಾಲವಕಾರ ಬ್ರಾಹ್ಮಣದಲ್ಲಿ ಕಂಡುಬರುತ್ತದೆ. ಈ ಉಪನಿಷತ್ತಿನ ಮೇಲಿನ ಶ್ಲೋಕವು ಒಬ್ಬ ಸಾಧಕನನ್ನು ತನ್ನ ಜೀವನದ ಪ್ರತಿ ಆಗು-ಹೋಗುಗಳ ಹಿನ್ನೆಲೆಯಲ್ಲಿರುವ ಬ್ರಹ್ಮನ ಅರಿವನ್ನು ಅರಸಲು ಉತ್ತೇಜಿಸಿ, ಸತತ ಸಾಧನೆಯ ಮೂಲಕ ಅಮೃತತ್ವ ಪಡೆಯಲು ಹುರಿದುಂಬಿಸುತ್ತದೆ. ಕೇನೋಪನಿಷತ್ತು ಈ ಕೆಳಗಿನ ಪ್ರಶ್ನೆಯೊಂದಿಗೆ ಪ್ರಾರಂಭವಾಗುತ್ತದೆ: ಕೇನೇಷಿತಂ ಪತತಿ ಪ್ರೇಷಿತಂ ಮನಃ ಕೇನ ಪ್ರಾಣಃ ಪ್ರಥಮಃ ಪ್ರೈತಿ ಯುಕ್ತಃ M ಕೇನೇಷಿತಾಂ ವಾಚಮಿಮಾಂ ವದಂತಿ ಚಕ್ಷುಃ ಶ್ರೋತ್ರಂ ಕ ಉ ದೇವೋ ಯುನಕ್ತಿ (ಕೇನೋಪನಿಷತ್ತು 1.1)

    ‘ನಮ್ಮ ಎಲ್ಲಾ ಚಟುವಟಿಕೆಗಳಿಗೆ ಮೂಲವಾದ ಮನಸ್ಸನ್ನು ಯಾರು ಪ್ರೇರೇಪಿಸುತ್ತಾರೆ? ನಮ್ಮ ಅರಿವಿಗೆ ಮೂಲವಾದ ಪ್ರಾಣವನ್ನು ಪ್ರಥಮವಾಗಿ ನಿಯುಕ್ತಿಗೊಳಿಸಿದವರು ಯಾರು? ನಮ್ಮವಾಕ್ಕುಗಳನ್ನು ಪ್ರಚೋದಿಸುವರಾರು? ಯಾವ ದೇವನು ನಮ್ಮ ಕಣ್ಣು-ಕಿವಿ (ಇಂದ್ರಿಯ) ಗಳನ್ನು ಪ್ರೇರಿಸುತ್ತಾನೆ?’ ಈ ಪ್ರಶ್ನೆಗೆ ಉತ್ತರವನ್ನು ಎರಡನೆಯ ಶ್ಲೋಕವು ನೀಡುತ್ತದೆ:

    ಶ್ರೋತ್ರಸ್ಯ ಶ್ರೋತ್ರಂ ಮನಸೋ ಮನೋ ಯತ್ ವಾಚೋ ಹ ವಾಚಂ ಸ ಉ ಪ್ರಾಣಸ್ಯ ಪ್ರಾಣಃ M ಚಕ್ಷುಷಃ ಚಕ್ಷುಃ ಅತಿಮುಚ್ಯ ಧೀರಾಃ ಪ್ರೇತ್ಯ ಅಸ್ಮಾತ್ ಲೋಕಾತ್ ಅಮೃತಾ ಭವಂತಿ (ಕೇನೋಪನಿಷತ್ತು 1.2) ‘ಅದು ಕಿವಿಗೆ ಕಿವಿ, ಮನಸ್ಸಿಗೆ ಮನಸ್ಸು, ವಾಕ್ಕಿಗೆ ವಾಕ್ಕು; ಅದು ಪ್ರಾಣಕ್ಕೆ ಪ್ರಾಣ, ಕಣ್ಣಿಗೆ ಕಣ್ಣು. ಇದನ್ನರಿತ ಧೀರರು (ಜ್ಞಾನಿಗಳು) ಅಜ್ಞಾನದಿಂದ ಪಾರಾಗಿ, ಅನಿತ್ಯವಾದ ಲೋಕವನ್ನು ತಮ್ಮ ಮನಸ್ಸಿನಿಂದ ದೂರಮಾಡಿ ಅಮೃತರಾಗುತ್ತಾರೆ.’

    ಇಲ್ಲಿ ಅದು ಎಂದರೆ ‘ದಿವ್ಯಪ್ರಜ್ಞೆ.’ ಆ ದಿವ್ಯಪ್ರಜ್ಞೆಯೇ ದೇಹದ, ಇಂದ್ರಿಯಗಳ ಎಲ್ಲಾ ಚಟುವಟಿಕೆಗಳಿಗೆ ಮೂಲ ಹಾಗೂ ಪ್ರೇರಕ ಶಕ್ತಿ. ನಮ್ಮ ಜೀವನದ ಎಲ್ಲಾ ಅನುಭವಗಳನ್ನು (ಒಳ್ಳೆಯದಾಗಿರಲಿ ಅಥವಾ ಕೆಟ್ಟದ್ದಾಗಿರಲಿ) ಅನುಭವಿಸಲು ಆಧಾರವಾಗಿರುವುದು ಈ ಪ್ರಜ್ಞೆಯೇ. ಆದ್ದರಿಂದ ನಮ್ಮ ಜೀವನದ ಎಲ್ಲಾ ಅನುಭವಗಳಲ್ಲಿಯೂ ದಿವ್ಯತ್ವವು ಇದ್ದೇ ಇದೆ!

    ಅದನ್ನು ಬಿಟ್ಟು ನಾವು ಇಲ್ಲ. ಆದರೆ, ಕಣ್ಣು ಎಲ್ಲವನ್ನೂ ನೋಡಿದರೂ, ತನ್ನನ್ನು ತಾನು ನೋಡಲು ಸಾಧ್ಯವಿಲ್ಲ. ಅದೇ ರೀತಿ, ಈ ದಿವ್ಯಪ್ರಜ್ಞೆಯು ತಾನು ಸುಪ್ತವಾಗಿದ್ದು, ಎಲ್ಲರಿಗೂ ಎಲ್ಲವನ್ನೂ ಅನುಭವಿಸಲು ಅನುವು ಮಾಡಿಕೊಡುತ್ತದೆ. ಒಂದು ಕ್ಷಣವಾದರೂ, ನಾವು ಅದರೊಂದಿಗೆ ಸಂಪರ್ಕವಿಲ್ಲದಿರಲು ಅಥವಾ ಅದರಿಂದ ದೂರವಾಗಿರಲು ಸಾಧ್ಯವಿಲ್ಲ. ಆದರೂ, ನಮ್ಮ ಎಲ್ಲಾ ಅನುಭವಗಳಿಗೂ ಮೂಲವಾದ ಈ ದಿವ್ಯಪ್ರಜ್ಞೆಯು ನಮ್ಮ ಅನುಭವಕ್ಕೆ ಎಟಕುವುದಿಲ್ಲ. ಅದನ್ನು ಅರಿತು ಅನುಭವಿಸಬೇಕಾದರೆ, ದೃಢವಾಗಿ ಏಕಾಗ್ರ ಸಾಧನೆಯನ್ನು ಮಾಡಬೇಕಾಗುತ್ತದೆ. ಈ ದಿವ್ಯಪ್ರಜ್ಞೆಯ ಅರಿವೇ ನಿಜವಾದ ಜ್ಞಾನ. ಅದನ್ನೇ ‘ಪ್ರಜ್ಞಾನ’ವೆಂದು ಕರೆಯುತ್ತಾರೆ. ಈ ಅರ್ಥದಲ್ಲಿಯೇ ಉಪನಿಷತ್ತುಗಳು, ‘ಪ್ರಜ್ಞಾನಂ ಬ್ರಹ್ಮ’ ಎಂದು ಸಾರಿವೆ. ನಮ್ಮ ಎಲ್ಲಾ ದೈನಂದಿನ ಅನುಭವಗಳಲ್ಲಿಯೂ ಸದಾ ಸರ್ವತ್ರ ಈ ದಿವ್ಯಪ್ರಜ್ಞೆಯನ್ನು ಅರಸಿ ಅನುಭವಿಸುವುದೇ ನಿರಂತರ ದೈವ ಸಾಕ್ಷಾತ್ಕಾರದ ಸಾಧನೆಯಾಗಿದೆ. ಇದನ್ನು ಇನ್ನೂ ಸರಳವಾಗಿ ಹೇಳಬೇಕೆಂದರೆ, ದೈನಂದಿನ ಜೀವನದಲ್ಲಿ ನಾವು ಆಚರಿಸುವ ಒಳ್ಳೆಯತನವೇ (GOOD) ದಿವ್ಯತ್ವ (GOD) ವಾಗಿದೆ! ಇದು ಅಕ್ಷರಶಃ ನಿಜ.

    GOOD has GOD in it! ‘GOOD’ನಲ್ಲಿ ‘GOD’ ಇದೆಯಲ್ಲವೇ? ಒಳ್ಳೆಯತನವೆಂದರೆ ನಿಜಾರ್ಥದಲ್ಲಿ ನಿಸ್ವಾರ್ಥವೇ ಆಗಿದೆ. ನಿಸ್ವಾರ್ಥತೆಯ ಆಚರಣೆಯಲ್ಲಿಯೇ ನಮಗೆ ದಿವ್ಯತ್ವದ ಅಥವಾ ಭಗವಂತನ ಅನುಭವವಾಗುತ್ತದೆ. ನಮ್ಮ ಎಲ್ಲಾ ಅನುಭವಗಳೂ ಸುಪ್ತವಾಗಿರುವ ದಿವ್ಯಪ್ರಜ್ಞೆಯ/ದಿವ್ಯತ್ವದ ಅನುಭವವೇ ಆಗಿದ್ದರೂ, ನಿಸ್ವಾರ್ಥತೆಯಿಂದ ತುಂಬಿದ ಒಳ್ಳೆಯತನದಲ್ಲಿ ನಮಗೆ ಸುಲಭವಾಗಿ ದಿವ್ಯತ್ವದ ಪ್ರತ್ಯಕ್ಷ ಅನುಭವವಾಗುತ್ತದೆ. ಇನ್ನೊಬ್ಬರ ಸಂತೋಷ ಅಥವಾ ಒಳಿತಿಗಾಗಿ ನಿಸ್ವಾರ್ಥವಾದ ತ್ಯಾಗವನ್ನು ಮಾಡಿದಾಗ ನಮಗೆ ಸುಲಭವಾಗಿ ಶಾಂತಿಆನಂದಗಳ ರೂಪದಲ್ಲಿ ಭಗವಂತನ ಅನುಭವವಾಗುತ್ತದೆ. ಇದು ಕೇವಲ ವಸ್ತುಗಳ/ಧನದ ತ್ಯಾಗವೇ ಆಗಬೇಕಾಗಿಲ್ಲ. ಇನ್ನೊಬ್ಬರ ಸುಖ/ಒಳಿತನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಿದ ಅಹಂಕಾರ ತ್ಯಾಗವಾಗಲೀ ಅಥವಾ ಅಭ್ಯಾಸ ತ್ಯಾಗವಾಗಲೀ ನಿಸ್ವಾರ್ಥ ತ್ಯಾಗವೇ.

    ಈ ವಿವರಣೆ ನೋಡಿ, ಭಗವಂತನ ಅನುಭವ ಇಷ್ಟು ಸುಲಭ ಸಾಧ್ಯವೇ, ಸರಳವೇ? ಎಂದು ಯಾರಾದರೂ ಪ್ರಶ್ನಿಸಬಹುದು. ನನ್ನ ಪ್ರಕಾರ, ಭಗವತ್ತತ್ವದಷ್ಟು ಸರಳವಾದುದು ಬೇರೆ ಯಾವುದೂ ಇಲ್ಲ! ಇಂತಹ ಸುಲಭ ಸುಲಭ್ಯ ಭಗವಂತನನ್ನು ಎಲ್ಲೋ ಎತ್ತರದ ವೇದಿಕೆಯ ಮೇಲೆ ಪ್ರತಿಷ್ಠಾಪಿಸಿ, ಭಗವಂತನು ಕೆಲವು ವಿಶಿಷ್ಟ ವ್ಯಕ್ತಿಗಳಿಗೆ ಅಥವಾ ಮಹಾತ್ಮರಿಗೆ ಮಾತ್ರ ಲಭ್ಯನೆಂದು ಸಾರುತ್ತಾ, ನಾವೇ ಅವನಿಂದ ದೂರವಾಗಿದ್ದೇವೆ!

    ಭಗವಂತನನ್ನು ಕೇವಲ ಮಂದಿರ, ಮಸೀದಿ, ಇಗರ್ಜಿ ಯಾ ಗುರುದ್ವಾರಗಳಿಗೆ ಸೀಮಿತಗೊಳಿಸುವುದು, ನಾವು ಅವನಿಗೆ ಮಾಡುವ ಪರಮ ಅಪಚಾರವೇ ಸರಿ. ದೈನಂದಿನ ಜೀವನದಲ್ಲಿ ಇತರರ ಒಳಿತಿಗಾಗಿ ಸತತ ನಿಸ್ವಾರ್ಥ ಕಾರ್ಯಗಳನ್ನು ಮಾಡುವ ಮೂಲಕ, ನಾವು ಅವನನ್ನು ಪೂಜಾಸ್ಥಾನಗಳಿಂದ ವಿಮುಕ್ತಿಗೊಳಿಸಿ ಜನಸಾಮಾನ್ಯರಿಗೆ ಲಭ್ಯವಾಗುವಂತೆ ಮಾಡಬೇಕಾದ ಮತ್ತು ಮತ-ಧರ್ಮಗಳನ್ನು ಗುಡಿ-ಗುಂಡಾರಗಳ ಹಾಗೂ ಶುಷ್ಕ ಕಂದಾಚಾರಗಳ ಬಂಧನದಿಂದ ವಿಮೋಚನೆ ಮಾಡಿ ಅವುಗಳನ್ನು ಜೀವಂತ ಅನುಭವಗಳನ್ನಾಗಿ ಪರಿವರ್ತಿಸುವ ಕಾಲವು ಈಗ ಬಂದಿದೆ. ಇದುವೇ ಸನಾತನ ಧರ್ಮದ ಹಾಗೂ ಮಾನವತೆಯ ಸರ್ವಶ್ರೇಷ್ಠ ಜ್ಞಾನ-ಭಂಡಾರಗಳಾದ ಉಪನಿಷತ್ತುಗಳ ಸಂದೇಶವಾಗಿದೆ!

    (ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)

    ಸುಮ್ಮನಿರುವ ಇವರಿಗಿದೆ ಚುನಾವಣಾ ಫಲಿತಾಂಶವನ್ನೇ ಬದಲಿಸುವ ಶಕ್ತಿ!; ಇವರ್ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts