ಕುತೂಹಲ ಕೆರಳಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ-ಕೇಂದ್ರ ಗೃಹ ಸಚಿವ ಅಮಿತ್​​ ಷಾ ಭೇಟಿ

Bommai Amit Shah
Published on

ನವದೆಹಲಿ: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್​ ಷಾರನ್ನು ಭೇಟಿ ಮಾಡಿ ರಾಜ್ಯದ ಹಲವು ವಿಷಯಗಳ ಕುರಿತು ಮಾತುಕತೆ ನಡೆಸಿದ್ದಾರೆ. ಬಿಜೆಪಿ ವರಿಷ್ಠರ ಭೇಟಿಗಾಗಿ ಮಾಜಿ ಸಿಎಂ ಬೊಮ್ಮಾಯಿ ಸೋಮವಾರ ದೆಹಲಿಯತ್ತ ಪ್ರಯಾಣ ಬೆಳೆಸಿದ್ದರು. ಆದರೆ, ರಾಷ್ಟ್ರೀಯ ನಾಯಕರ ಭೇಟಿ ಸಾಧ್ಯವಾಗಿರಲಿಲ್ಲ

ರಾಜ್ಯ ವಿಧಾನಸಭೆ ಹಾಗೂ ವಿಧಾನಪರಿಷತ್​ ವಿಪಕ್ಷ ನಾಯಕ ಆಯ್ಕೆ ವಿಳಂಬ ಬೆನ್ನಲ್ಲೇ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೇಂದ್ರ ಗೃಹ ಸಚಿವ ಅಮಿತ್​ ಷಾರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ. ಉಭಯ ಸದನಗಳಿಗೆ ವಿಪಕ್ಷ ನಾಯಕರ ಹೆಸರನ್ನೂ ಅಂತಿಮಗೊಳಿಸುವ ನಿಟ್ಟಿನಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ದೆಹಲಿಗೆ ಬರುವಂತೆ ಬುಲಾವ್​ ಬಂದಿತ್ತು ಎಂದು ಹೇಳಲಾಗಿದೆ.

ಸೂಕ್ತ ಸಮಯದಲ್ಲಿ ನಿರ್ಧಾರ

ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ನನಗೆ ವರಿಷ್ಠರು ದೆಹಲಿಗೆ ಬರುವಂತೆ ಹೇಳಿರಲಿಲ್ಲ. ಸಂಸತ್​ ಅಧಿವೇಶನದ ಸಮಯದಲ್ಲಿ ದೆಹಲಿಗೆ ಬರುವಂತೆ ರಾಜ್ಯದ ಸಂಸದರು ಆಹ್ವಾನಿಸಿದ ಮೇರೆಗೆ ನಾನು ಬಂದಿದ್ದೇನೆ. ನಾನು ಕೆಲಸದ ನಿಮಿತ್ತ ಸಂಸದರನ್ನೂ ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಆ ಸಮಯದಲ್ಲಿ ರಾಷ್ಟ್ರೀಯ ನಾಯಕರ ಜೊತೆ ಭೇಟಿ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ವಿಪಕ್ಷ ನಾಯಕರ ಆಯ್ಕೆಯಲ್ಲಿ ವಿಳಂಬ ಕುರಿತು ಪ್ರತಿಕ್ರಿಯಿಸಿ ಈಗ ಸಂಸತ್​ ಅಧಿವೇಶನ ನಡೆಯುತ್ತಿದ್ದು, ಆ ನಂತರ ಪಂಚ ರಾಜ್ಯ ಚುನಾವಣೆಗೆ ತಯಾರಾಗಬೇಕಿದೆ. ನಮ್ಮ ಪಕ್ಷದ ರಾಷ್ಟ್ರೀಯ ನಾಯಕರು ಸೂಕ್ತ ಸಮಯದಲ್ಲಿ ನಿರ್ಧಾರವನ್ನೂ ತೆಗೆದುಕೊಳ್ಳುತ್ತಾರೆ. ಮುಂದಿನ ದಿನಗಳಲ್ಲಿ ರಾಜ್ಯದ ಬಗ್ಗೆ ಗಮನ ಹರಿಸಲಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ದೆಹಲಿ ಭೇಟಿ ಕುರಿತು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net