

ಬೆಂಗಳೂರು: ರಾಜ್ಯ ಸರ್ಕಾರ ತಮಿಳುನಾಡಿಗೆ ಯಾವುದೇ ಕಾರಣಕ್ಕೂ ಕಾವೇರಿ ನೀರು ಬಿಡುವುದಿಲ್ಲ ಎಂದು ಗಟ್ಟಿಯಾಗಿ ನಿಂತರೆ ನಾವೂ ಸರ್ಕಾರದ ಜೊತೆಗೆ ನಿಲ್ಲುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
CWRC ಪ್ರತಿ ದಿನ 5000 ಕ್ಯೂಸೆಕ್ಸ್ ನಂತೆ ತಮಿಳುನಾಡಿಗೆ ಮತ್ತೆ 15 ದಿನ ಕಾವೇರಿ ನೀರು ಹರಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ಮಾಡಿರುವ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ವಸ್ತು ಸ್ಥಿತಿ ನೋಡಿದರೆ ಕಾವೇರಿಯಲ್ಲಿ ಕುಡಿಯಲಿಕ್ಕೂ ನೀರಿಲ್ಲ ಮತ್ತೆ 7 ಟಿಎಂಸಿ ನೀರು ಬಿಡಲು ಹೇಳಿದ್ದಾರೆ. ಮಂಡ್ಯ ಜಿಲ್ಲೆ ಒಂದಕ್ಕೆ 32 ಟಿಎಂಸಿ ನೀರು ಬೇಕು. ಇದುವರೆಗೂ ಬಿಟ್ಟಿರುವುದು ಕೇವಲ 7 ಟಿಎಂಸಿ ಮಾತ್ರ. ಭತ್ತ ಕಬ್ಬು, ಮೆಕ್ಕೆಜೋಳ ಎಲ್ಲವೂ ಒಣಗುತ್ತಿದೆ.
ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಮೊದಲಿನಿಂದಲೂ ಎಡವುತ್ತಿದೆ. ನಾಳೆ CWMA ಸಭೆ ಇದೆ. ಅಲ್ಲಿ ರಾಜ್ಯ ಸರ್ಕಾರ ವಾಸ್ತವ ಹೇಳಬೇಕು. ಸಭೆಯಿಂದ ಹೊರಬರುತ್ತಾರೋ ಏನು ಮಾಡುತ್ತಾರೊ ಅವರಿಗೆ ಬಿಟ್ಟಿದ್ದು, ಮುಂದಿನ ವಾರ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ಇದೆ. ಅಲ್ಲಿಯೂ ಸರ್ಕಾರ ಬಲವಾಗಿ ವಾದ ಮಾಡಲಿ, ನಮ್ಮ ಕಾವೇರಿ ಮಕ್ಕಳ ಹಿತ ಬಲಿ ಕೊಟ್ಟು ನೀರು ಬಿಡಬೇಡಿ ಎಂದು ಆಗ್ರಹಿಸಿದ್ದಾರೆ.
ಕಾನೂನು ತಂಡ ಮರು ಚಿಂತನೆ ಮಾಡಬೇಕು. ನಾವು ಇದರಲ್ಲಿ ರಾಜಕಾರಣ ಮಾಡುತ್ತಿಲ್ಲ. ಇವರು ಗಟ್ಟಿಯಾಗಿ ನಿಲ್ಲಬೇಕು. ಅಂದರೆ ನಾವು ಸರ್ಕಾರದ ಜೊತೆ ನಿಲ್ಲುತ್ತೇವೆ. ಇವರು ಕೇಂದ್ರಕ್ಕೆ ಪತ್ರ ಬರೆದಿರುವುದಾಗಿ ಹೇಳುತ್ತಾರೆ. ಅದನ್ನು ಬಿಟ್ಡು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಮನವೊಲಿಕೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.