

ಕಲ್ಕತ್ತಾ: ಜಿಲ್ಲಾ ಮಟ್ಟದ ನಾಯಕರು ಕಾರ್ಯಕರ್ತರ ಮೇಲೆ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಕೇಂದ್ರ ಸಚಿವರನ್ನು ಕೆಲಹೊತ್ತು ಕೂಡಿ ಹಾಕಿರುವ ಘಟನೆ ಪಶ್ಚಿಮ ಬಂಗಾಳದ ಬಂಕುರಾದಲ್ಲಿ ನಡೆದಿದೆ.
ಬಂಕುರಾ ಲೋಕಸಭೆ ಕ್ಷೇತ್ರದ ಸಂಸದ, ಕೇಂದ್ರ ಸಚಿವ ಸುಭಾಷ್ ಸರ್ಕಾರ್ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಮಧ್ಯಾಹ್ನ ಸಭೆ ನಡೆಸುತ್ತಿದ್ದರು. ಈ ವೇಳೆ ಪಕ್ಷದ ನಾಯಕರ ವಿರುದ್ಧ ಘೊಷಣೆಗಳನ್ನು ಕೂಗುತ್ತಾ ಬಮದ ಕಾರ್ಯಕರ್ತರು ಕೇಂದ್ರ ಸಚಿವರು ಸೇರಿದಂತೆ ಅನೇಕರನ್ನು ಕಚೇರಿಯೊಳಗೆ ಕೂಡಿ ಹಾಕಿ ಆಕ್ರೋಶ ಹೊರಹಾಕಿದ್ದಾರೆ.
ಈ ಕುರಿತು ಮಾತನಾಡಿದ ಕಾರ್ಯಕರ್ತ ಮೋಹಿತ್ ಕೇಂದ್ರ ಸಚಿವ ಸರ್ಕಾರ್ ಕಾರ್ಯಕರ್ತರಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿಲ್ಲ. ತಮ್ಮ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವವರಿಗೆ ಜಿಲ್ಲಾ ಘಟಕದಲ್ಲಿ ಸ್ಥಾನಮಾನ ನೀಡಲಾಗುತ್ತಿದೆ. ನಾವು ಪಕ್ಷವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇಂದು ಪ್ರತಿಭಟನೆ ಮಾಡುತ್ತಿದ್ದೇವೆ.
ಕಳೆದ ನಪುರಸಭೆ ಚುನಾವಣೆಯಲ್ಲಿ ಬಂಕುರಾದಲ್ಲಿ ನಾವು ಎರಡು ಸ್ಥಾನ ಗೆದ್ದಿದ್ದೆವು. ಆದರೆ, ಈ ಬಾರಿ ಸಂಸದರ ಅದಕ್ಷೆತಯಿಂದಾಗಿ ನಾವು ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಹಲವು ಪಂಚಾಯಿತಿ ಚುನಾವನೆಯಲ್ಲೂ ನಾವು ನಿರೀಕ್ಷತಿ ಮಟ್ಟದಲ್ಲಿ ಸಾಧನೆ ಮಾಡಿಲ್ಲ. ಇದು ಅವಮಾನಕರ ಸಂಗತಿಯಾಗಿದೆ. ಇದನ್ನು ಪ್ರಶ್ನಿಸಿದವರಿಗೆ ವಿವರಣೆ ನೀಡುವಂತೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಕಾರ್ಯಕರ್ತ ಮೋಹಿತ್ ಆರೋಪಿಸಿದ್ದಾರೆ.
ಘಟನೆಯ ಮಾಹಿತಿ ಪಡೆದ ಸಚಿವರ ಬೆಂಬಲಿಗರು ಹಾಗೂ ಪ್ರತಿಭಟನಾ ನಿರತರ ನಡುವೆ ಮಾತಿನ ಚಕಮಕಿಯಾಗಿದೆ. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ ಕೇಂದ್ರ ಸಚಿವ ಸುಭಾಷ್ ಸರ್ಕಾರ್ರನ್ನು ಸುರಕ್ಷಿತವಾಗಿ ಹೊರಕ್ಕೆ ತಂದಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿದ ರಾಜ್ಯ ಘಟಕದ ಅಧ್ಯಕ್ಷ ಸಮೀಕ್ ಭಟ್ಟಾಚಾರ್ಯ ಇದೂಂದು ದುರದೃಷ್ಟಕರ ಘಟನೆಯಾಗಿದ್ದು, ಈ ರೀತಿ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ಸಮಸ್ಯೆಗಳಿದ್ದರೆ ಅದನ್ನು ಸರಿಯಾದ ರೀತಿಯಲ್ಲಿ ಬಗೆಹರಿಸಿಕೊಳ್ಳಬೇಕು. ಪಕ್ಷ ಸಂಘಟನೆಗೂ ಸರ್ಕಾರ್ ಅವರಿಗೂ ಯಾವುದೇ ಸಂಬಂಧವಿಲ್ಲ. ಕೆಲವರ ತಪ್ಪು ಗ್ರಹಿಕೆ ಅಥವಾ ಪ್ರಚೋದನೆಯಿಂದಾಗಿ ಅವರ ಮೇಲೆ ಆರೋಪ ಮಾಡಲಾಗಿದೆ. ಘಟನೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಹಂಚಿಕೊಂಡಿರುವ ತೃಣಮೂಲ ಕಾಂಗ್ರೆಸ್ ಬಿಜೆಪಿಯನ್ನು ಟೀಕಿಸಿದೆ. ದುರ್ಬಲ ಅಡಿಪಾಯ ಹಾಗೂ ಕೆಲವರಿಗಷ್ಟೇ ಮನ್ನಣೆ ನೀಡಿದರೆ ಈಗೆ ಆಗುವುದು ಎಂದು ವ್ಯಂಗ್ಯವಾಡಿದೆ.