

ಪಟನಾ: ಬಿಹಾರದ ಮಾಜಿ ಮುಖ್ಯಮಂತ್ರಿ ದಿ. ಕರ್ಪೂರಿ ಠಾಕೂರ್ ಅವರು ದೇಶದ ಅತ್ಯುನ್ನತ ಗೌರವ ಭಾರತ ರತ್ನ (ಮರಣೋತ್ತರ) ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮುರವರು ಇಂದು ಸಂಜೆ ಪ್ರಶಸ್ತಿಯನ್ನು ಘೋಷಣೆ ಮಾಡಿದರು.
ಠಾಕೂರ್ ಅವರು ನಿಧನರಾಗಿ 35 ವರ್ಷಗಳ ಬಳಿಕ ಈ ಪ್ರಶಸ್ತಿ ಒಲಿದಿದೆ. 1988, ಫೆಬ್ರವರಿ 17ರಂದು ಠಾಕೂರ್ ವಿಧಿವಶರಾದರು. ಜನನಾಯಕ ಎಂದೇ ಪ್ರಖ್ಯಾತಿ ಪಡೆದಿದ್ದ ಠಾಕೂರ್ ಅವರು ಅಲ್ಪಾವಧಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. 1970ರ ಡಿಸೆಂಬರ್ನಿಂದ 1971ರ ಜೂನ್ ವರೆಗೆ ಮತ್ತು 1977ರ ಡಿಸೆಂಬರ್ನಿಂದ 1979ರ ಏಪ್ರಿಲ್ ವರೆಗೆ ಮುಖ್ಯಮಂತ್ರಿಯಾಗಿದ್ದರು.
ರಾಜ್ಯದ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿಗೆ ಕೇಂದ್ರದ ಅತ್ಯುನ್ನತ ಗೌರವ ಸಿಕ್ಕಿದೆ. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಅವರ ಜನತಾ ದಳ ಯುನೈಟೆಡ್ ಪಕ್ಷದ ದೀರ್ಘಕಾಲದಿಂದ ಪ್ರಶಸ್ತಿ ನೀಡಬೇಕೆಂದು ಬೇಡಿಕೆ ಇಟ್ಟಿತ್ತು. ಇಂದು ಆ ಬೇಡಿಕೆ ಈಡೇರಿದೆ.
ಬಿಹಾರ ರಾಜ್ಯವು 40 ಸಂಸದೀಯ ಸ್ಥಾನಗಳನ್ನು ಹೊಂದಿದೆ. ಲೋಕಸಭಾ ಚುನಾವಣೆಗೂ ಮುನ್ನ ಮಾಜಿ ಮುಖ್ಯಮಂತ್ರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಿರುವುದು ಅಲ್ಲಿನ ಜನರನ್ನು ಮೆಚ್ಚಿಸುವ ಜಾಣ ನಡೆ ಎಂದು ರಾಜಕೀಯ ವಲಯದಲ್ಲಿ ಬಹಳ ಚರ್ಚೆಯಾಗುತ್ತಿದೆ. (ಏಜೆನ್ಸೀಸ್)