

ಚೆನ್ನೈ: ಸಿನಿಮಾ ರಂಗದಲ್ಲಿ ಸೂಪರ್ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ರಜಿನಿಕಾಂತ್, ತಮಿಳು ಸಿನಿರಸಿಕರ ಪಾಲಿಗೆ ನೆಚ್ಚಿನ ತಲೈವಾ ಆಗಿದ್ದಾರೆ. ರಾಜಕೀಯಕ್ಕೆ ಧುಮುಕಿ ಅಷ್ಟೇ ವೇಗದಲ್ಲಿ ರಾಜಕೀಯದಿಂದ ಹಿಂದಕ್ಕೆ ಸರಿದ ರಜಿನಿಕಾಂತ್ ಸದ್ಯ ಸಿನಿಮಾ ಕಡೆ ಗಮನ ಹರಿಸಿದ್ದಾರೆ.
ಜಗತ್ತಿನ ಬಹುತೇಕ ರಾಷ್ಟ್ರವನ್ನು ಸುತ್ತಿರುವ, ದೊಡ್ಡ ದೊಡ್ಡ ಪ್ರತಿಭೆಗಳನ್ನು ಕಂಡಿರುವ ಹಾಗೂ ಎಲ್ಲ ರೀತಿಯ ಕ್ಯಾಮೆರಾಗಳನ್ನು ಎದುರಿಸಿರುವ ತಲೈವಾ, ಈ ಒಂದು ವಿಚಾರದಲ್ಲಿ ತುಂಬಾ ಹೆದರುತ್ತಾರಂತೆ. ಯಾವುದು ಆ ವಿಚಾರ ಅಂತೀರಾ. ಲೋಕಸಭಾ ಚುನಾವಣೆಗೆ ಇನ್ನೂ ಕೆಲವೇ ದಿನಗಳು ಬಾಕಿರುವುದು ನಿಮಗೆಲ್ಲರಿಗೂ ತಿಳಿದೇ ಇದೆ. ಹೀಗಾಗಿ ಚುನಾವಣೆ ಫೀವರ್ ಶುರುವಾಗಿದೆ. ಆದರೆ, ಚುನಾವಣೆ ಬಂತೆಂದರೆ ಸಾಕು ರಜಿನಿಕಾಂತ್ಗೆ ಭಯ ಶುರುವಾಗುತ್ತದೆಯಂತೆ.
ಹೌದು, ಚುನಾವಣೆ ಸಂದರ್ಭದಲ್ಲಿ ಬಾಯಿ ತೆರೆಯಲು ರಜಿನಿಕಾಂತ್ ಹೆದರುತ್ತಾರಂತೆ. ಅದರರ್ಥ ಕ್ಯಾಮೆರಾಗಳ ಮುಂದೆ ಮಾತನಾಡಲು ರಜಿನಿಗೆ ಭಯವಾಗುತ್ತದೆಯಂತೆ. ಇತ್ತೀಚೆಗೆ ಚೆನ್ನೈನ ವಡಪಳನಿಯಲ್ಲಿ ನಿರ್ಮಾಣವಾಗಿರುವ ಆಸ್ಪತ್ರೆಯ ಉದ್ಘಾಟನೆಗೆ ಬಂದಿದ್ದ ಸಮಯದಲ್ಲಿ ರಜಿನಿ ಈ ಮಾತುಗಳನ್ನಾಡಿದ್ದಾರೆ.
ಚುನಾವಣೆಗಳು ಸಮೀಪದಲ್ಲಿರುವಾಗ ನಾವು ಹೇಳುವ ಪ್ರತಿಯೊಂದು ಮಾತುಗಳನ್ನು ಸುಲಭವಾಗಿ ತಿರುಚಬಹುದು. ಒಂದೇ ಬಾರಿಗೆ ಇಷ್ಟೊಂದು ಕ್ಯಾಮೆರಾಗಳನ್ನು ನೋಡಿದಾಗ ಉಸಿರಾಡಲು ಕೂಡ ಭಯವಾಗುತ್ತದೆ. ಯಾವುದೇ ಉದ್ಘಾಟನೆಯಲ್ಲಿ ಭಾಗವಹಿಸಲು ಸಹ ಹೆದರಿಕೆಯಾಗುತ್ತದೆ. ಉದ್ಘಾಟನೆಯ ಬಳಿಕ ಪ್ರಚಾರ ಹೇಗಿರುತ್ತದೆ ಅಂದರೆ, ಈ ಸಂಸ್ಥೆಯಲ್ಲಿ ರಜಿನಿ ಹೂಡಿಕೆ ಮಾಡಿದ್ದಾರೆ. ಕೆಲವು ವರ್ಷಗಳ ಹಿಂದೆ ಇದೇ ವೈದ್ಯರು ರಜಿನಿಗೆ ದೊಡ್ಡ ಶಸ್ತ್ರಚಿಕಿತ್ಸೆ ಮಾಡಿದರು. ಈ ಆಸ್ಪತ್ರೆ ಉದ್ಘಾಟನೆಗೆ ಅದೇ ಕಾರಣ. ರಜಿನಿ ಅವರನ್ನು ಮತ್ತೆ ಬದುಕಿಸಿದರು ಎಂದೆಲ್ಲ ಹೇಳುತ್ತಾರೆ. ಹೀಗಾಗಿ ಯಾವುದೇ ವೇದಿಕೆಗೆ ಹೋದರೆ ಕ್ಯಾಮೆರಾಗಳ ಮುಂದೆ ಮಾತನಾಡಲು ಭಯವಾಗುತ್ತದೆ ಎಂದು ರಜಿನಿ ಹೇಳಿದರು.
ರಜನಿಕಾಂತ್ ಅವರ ಸಿನಿಮಾ ವಿಚಾರಕ್ಕೆ ಬರುವುದಾರೆ, ವೆಟ್ಟೈಯಾನ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇದನ್ನು ಟಿಜೆ ಜ್ಞಾನವೇಲ್ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಫಹದ್ ಫಾಸಿಲ್, ರಾಣಾ ದಗ್ಗುಬಾಟಿ ಮತ್ತು ಮಂಜು ವಾರಿಯರ್ ಸೇರಿದಂತೆ ದೊಡ್ಡ ತಾರಾಗಣವಿದೆ. ಈ ಚಿತ್ರದ ಚಿತ್ರೀಕರಣ ಕಳೆದ ವರ್ಷ ಅಕ್ಟೋಬರ್‌ನಲ್ಲಿ ತಿರುವನಂತಪುರದಲ್ಲಿ ಆರಂಭವಾಯಿತು. ಮುಂದಿನ ಶೆಡ್ಯೂಲ್‌ಗಾಗಿ ರಜನಿ ಮತ್ತು ಅವರ ತಂಡ ಶೀಘ್ರದಲ್ಲೇ ತಿರುವನಂತಪುರಂ ತಲುಪಲಿದೆ ಎಂದು ವರದಿಯಾಗಿದೆ. (ಏಜೆನ್ಸೀಸ್)