ಹಾರಾಡಿ ಮಹಾಬಲ ಗಾಣಿಗ ಪ್ರಶಸ್ತಿ ಸ್ಥಾಪನೆ : ಯುವ ಸಂಘಟನೆ ಸಭೆಯಲ್ಲಿ ಗಿರೀಶ್ ಗಾಣಿಗ ಬೆಟ್ಲಕ್ಕಿ ಹೇಳಿಕೆ

YAKSHAGANA
Published on

ವಿಜಯವಾಣಿ ಸುದ್ದಿಜಾಲ ಕೋಟ

ಯಕ್ಷಗಾನ ಕ್ಷೇತ್ರದ ಶ್ರೇಷ್ಠ ಕಲಾವಿದ ಹಾರಾಡಿ ದಿ.ಮಹಾಬಲ ಗಾಣಿಗರ ಹೆಸರನ್ನು ಅಜರಾಮರವಾಗಿಸುವ ನಿಟ್ಟಿನಲ್ಲಿ ಗಾಣಿಗ ಯುವ ಸಂಘಟನೆ ಕೋಟ ಘಟಕ ಆಶ್ರಯದಲ್ಲಿ, ಮಹಿಳಾ ಸಂಘಟನೆ ಜಂಟಿಯಾಗಿ ಹಾರಾಡಿ ಮಹಾಬಲ ಗಾಣಿಗ ಕುಟುಂಬದ ಸಹಕಾರದೊಂದಿಗೆ ದಿ.ಹಾರಾಡಿ ಮಹಾಬಲ ಗಾಣಿಗ ಸಂಸ್ಮರಣೆ ಪ್ರಶಸ್ತಿ ಸ್ಥಾಪಿಸುವುದಾಗಿ ಕೋಟ ಘಟಕ ಗಾಣಿಗ ಯುವ ಸಂಘಟನೆ ಅಧ್ಯಕ್ಷ ಗಿರೀಶ್ ಗಾಣಿಗ ಬೆಟ್ಲಕ್ಕಿ ಹೇಳಿದರು.

ಕೋಟ ಅಘೋರೇಶ್ವರ ಸಭಾಭವನದಲ್ಲಿ ಇತ್ತೀಚೆಗೆ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿದರು. ಬಡಗಿನ ಯಕ್ಷರಂಗದ ಕಿರಾತನ ಪಾತ್ರದ ಜೋಡಿ ಕೋರೆ ಮುಂಡಾಸಿಗೆ ಹೊಸ ಆಯಾಮ ನೀಡಿದ ಕೀರ್ತಿ ಹಾರಾಡಿ ಮಹಾಬಲ ಗಾಣಿಗರಿಗೆ ಸಲ್ಲುತ್ತದೆ. ಜತೆಗೆ ಹಲವಾರು ಪಾತ್ರಗಳಿಗೆ ಅವರು ಜೀವ ತುಂಬಿದ್ದಾರೆ. ಆದರೆ ಯಕ್ಷಗಾನ ಕ್ಷೇತ್ರದಲ್ಲಿ ದಿ.ಹಾರಾಡಿ ಮಹಾಬಲ ಗಾಣಿಗರ ಹೆಸರು ಮಸುಕಾಗುತ್ತಿದೆ. ಹೀಗಾಗಿ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಶ್ರೇಷ್ಠ ಕಲಾವಿದರೊಬ್ಬರಿಗೆ ಪ್ರತಿ ವರ್ಷ ನಗದು ಪುರಸ್ಕಾರದೊಂದಿಗೆ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ ಎಂದರು.

ಸಂಘಟನೆ ಸದಸ್ಯರಾದ ಸುರೇಶ್ ಗಾಣಿಗ ಶೇವಧಿ, ನಾಗರಾಜ್ ಗಾಣಿಗ, ದಿನೇಶ್ ಗಾಣಿಗ ಕೋಟ, ಪ್ರಶಾಂತ್ ಗಾಣಿಗ, ಮಹಿಳಾ ಸಂಘದ ಅಧ್ಯಕ್ಷೆ ರೇಖಾ ಗಣೇಶ್, ಅನಿತಾ ಶ್ರೀಧರ್, ಗಣೇಶ್ ಚಿತ್ರಪಾಡಿ, ಆನಂದ ಗಾಣಿಗ ಮಾಬುಕಳ, ಹಾರಾಡಿ ಮಹಾಬಲ ಗಾಣಿಗರ ಕುಟುಂಬ ಸದಸ್ಯರಾದ ಜನಾರ್ದನ, ವಸಂತಿ ಉಪಸ್ಥಿತರಿದ್ದರು. ಸಂಘಟನೆ ಕಾರ್ಯದರ್ಶಿ ರಾಧಾಕೃಷ್ಣ ಗಾಣಿಗ ಸ್ವಾಗತಿಸಿ, ಮಾಜಿ ಅಧ್ಯಕ್ಷ ವಿಶ್ವನಾಥ ಗಾಣಿಗ ಬೆಟ್ಲಕ್ಕಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net