ಉದ್ಯಮಿಗಳಿಂದ 7 ಶಾಲೆ ದತ್ತು :ಬೈಂದೂರು ಕ್ಷೇತ್ರದ ಅಭಿವೃದ್ಧಿಗೆ ಸಾಗರದಾಚೆಯ ಸ್ಪಂದನೆ

schools
ಶಾಸಕ ಗುರುರಾಜ್ ಗಂಟಿಹೊಳೆ ಅವರನ್ನು ದುಬೈಯಲ್ಲಿ ಗೌರವಿಸಲಾಯಿತು. ಉದ್ಯಮಿ ವಕ್ವಾಡಿ ಪ್ರವೀಣ್ ಶೆಟ್ಟಿ, ಗ್ರೀನ್ ವ್ಯಾಲಿ ಸಂಸ್ಥಾಪಕ ಮೀರನ್, ರಮೀ ಗ್ರೂಪ್ ಮಾಲಕ ವರದರಾಜ್ ಶೆಟ್ಟಿ, ಪ್ರಮುಖರಾದ ಗೋಪಾಲ್ ಶೆಟ್ಟಿ, ವೆಂಕಟೇಶ್ ಕಿಣಿ, ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು
Published on

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್, ಶಿರೂರು ಅಸೋಸಿಯೇಷನ್ ದುಬೈ, ಕುಂದಾಪುರ ದೇವಾಡಿಗ ಮಿತ್ರ ದುಬೈ ಜಂಟಿಯಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಂಗವಾಗಿ ದುಬೈಗೆ ಭೇಟಿ ನೀಡಿದ ಶಾಸಕ ಗುರುರಾಜ್ ಗಂಟಿಹೊಳೆ ಮನವಿಗೆ ಸ್ಪಂದಿಸಿದ 7 ಮಂದಿ ದಾನಿಗಳು 7 ಶಾಲೆ ದತ್ತು ಪಡೆಯಲು ಮುಂದಾಗಿದ್ದಾರೆ.

ಕ್ಷೇತ್ರದ, ಜಿಲ್ಲೆಯ ಪ್ರಮುಖರೊಂದಿಗೆ ಮಾತುಕತೆ ನಡೆಸಿದ ಶಾಸಕ ಗುರುರಾಜ್ ಗಂಟಿಹೊಳೆ, ಬೈಂದೂರಿನ ಸರ್ಕಾರಿ ಶಾಲೆಗಳ ಅಭಿವೃದ್ಧಿಯ ರೂಪುರೇಷೆ ತೆರೆದಿಟ್ಟರು. ಸಮೃದ್ಧ ಬೈಂದೂರು ಕನಸಿಗೆ ಪೂರಕವಾಗಿರುವ ಸಮೃದ್ಧ ಗ್ರಾಮ ಮತ್ತು 300 ಟ್ರೀಸ್ ಯೋಜನೆ ಕುರಿತು ಮಾಹಿತಿ ನೀಡಿ, ಕಾರ್ಯಕ್ರಮಗಳಿಗೆ ಸಹಕಾರ ಕೋರಿದರು. ಶಾಸಕರ ಬದ್ಧತೆ ಹಾಗೂ ಕಾರ್ಯನಿಷ್ಠೆಗೆ ಪ್ರಮುಖರು ಮೆಚ್ಚುಗೆ ವ್ಯಕ್ತಪಡಿಸಿದರು. ಅನೇಕರು ಹಲವು ರೀತಿಯಲ್ಲಿ ಕೊಡುಗೆ ನೀಡುವುದಾಗಿ ಮತ್ತು ಅಭಿವೃದ್ಧಿಗೆ ಸಹಕರಿಸುವುದಾಗಿ ಬೆಂಬಲ ಸೂಚಿಸಿದ್ದಾರೆ.

ದುಬೈ ಉದ್ಯಮಿಗಳು ಹಾಗೂ ಸಂಘ ಸಂಸ್ಥೆಗಳು ಗುರುರಾಜ್ ಗಂಟಿಹೊಳೆ ಅವರನ್ನು ಗೌರವಿಸಿದರು. ಉದ್ಯಮಿ ವಕ್ವಾಡಿ ಪ್ರವೀಣ್ ಶೆಟ್ಟಿ, ಗ್ರೀನ್ ವ್ಯಾಲಿ ಸಂಸ್ಥಾಪಕ ಮೀರನ್, ರಮೀ ಗ್ರೂಪ್ ಮಾಲಕ ವರದರಾಜ್ ಶೆಟ್ಟಿ, ಪ್ರಮುಖರಾದ ಗೋಪಾಲ್ ಶೆಟ್ಟಿ, ವೆಂಕಟೇಶ್ ಕಿಣಿ, ಸುರೇಶ್ ಶೆಟ್ಟಿ, ಕೃಳ್ಣ ಪ್ರಸಾದ್ ಅಡ್ಯಂತಾಯ, ಅರುಣ್ ಕುಮಾರ್ ಶಿರೂರು ಉಪಸ್ಥಿತರಿದ್ದರು.

ಶಿರೂರು ಮಾದರಿ ಗ್ರಾಮ

ಸರ್ಕಾರಿ ಶಾಲೆ ಅಭಿವೃದ್ಧಿ ಜತೆಗೆ ಶಿರೂರು ಅಸೋಸಿಯೇಷನ್ ದುಬೈ ವತಿಯಿಂದ ಶಿರೂರು ಗ್ರಾಮವನ್ನು ಮಾದರಿ ಗ್ರಾಮವಾಗಿ ರೂಪಿಸುವ ಸಂಕಲ್ಪ ಮಾಡಿದರು. ಬೈಂದೂರು ವಿದ್ಯಾರ್ಥಿಗಳ ವಿದ್ಯಾನಿಧಿಗೆ ಸಹಕರಿಸುವ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net