ಕಾಲಮಿತಿಯಲ್ಲಿ ಸಮಸ್ಯೆಗೆ ಸ್ಪಂದನೆ : ಕುಂದಾಪುರ ಜನಸ್ಪಂದನ ಸಭೆಯಲ್ಲಿ ಶಾಸಕ ಕೊಡ್ಗಿ ಸಲಹೆ

janaspandana
ಕುಂದಾಪುರದಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಉದ್ಘಾಟಿಸಿದರು
Published on

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

ಸಾಮಾನ್ಯ ಕೆಲಸಕ್ಕೂ ಜನರು ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಒಂದು ಅರ್ಜಿ ಕೊಟ್ಟರೆ ಒಂದೆರಡು ವರ್ಷ ಕಳೆದರೂ ಇತ್ಯರ್ಥ ಆಗುವುದಿಲ್ಲ. ಅಧಿಕಾರಿಗಳು ಕಾಲಮಿತಿ ಹಾಕಿಕೊಂಡು ಕ್ರಮಬದ್ಧವಾಗಿ ಕೆಲಸ ಮಾಡಿದರೆ ಜನರಿಗೆ ಆಗುತ್ತಿರುವ ತೊಂದರೆ ತಪ್ಪಿಸಬಹುದು ಎಂದು ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

ಜಿಲ್ಲಾಡಳಿತ, ಜಿಪಂ ಉಡುಪಿ, ತಾಲೂಕು ಆಡಳಿತ, ತಾಪಂ ಹಾಗೂ ಪುರಸಭೆ ಕುಂದಾಪುರ ಸಹಯೋಗದೊಂದಿಗೆ ಕುಂದಾಪುರದಲ್ಲಿ ಸೋಮವಾರ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿನಿತ್ಯದ ಕೆಲಸಗಳನ್ನು ಸುಗಮವಾಗಿಸಲು ಜಿಲ್ಲಾಡಳಿತ ಯೋಜನೆ ಹಾಕಿಕೊಳ್ಳಬೇಕು. ಸರ್ಕಾರಿ ಕಚೇರಿಗಳಲ್ಲಿ ಜನಸಾಮಾನ್ಯರ ಕೆಲಸ ಏಕೆ ವಿಳಂಬ ಆಗುತ್ತಿದೆ ಹಾಗೂ ಏನು ತೊಂದರೆ ಇದೆ ಎಂಬುದರ ಬಗ್ಗೆ ಜಿಲ್ಲಾಡಳಿತ ಗಂಭೀರ ಚಿಂತನೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು ಎಂದರು.

ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ., ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಎಸ್.ಆರ್., ಜಿಪಂ ಉಪಕಾರ್ಯದರ್ಶಿ ರಾಧಾಕೃಷ್ಣ ಅಡಿಗ, ತಾಪಂ ಕಾರ್ಯನಿರ್ವಹಣಾಧಿಕಾರಿ ಶಶಿಧರ ಉಪಸ್ಥಿತರಿದ್ದರು. ಕುಂದಾಪುರ ತಹಸೀಲ್ದಾರ್ ಶೋಭಾಲಕ್ಷ್ಮೀ ಸ್ವಾಗತಿಸಿ, ಕಂದಾಯ ನಿರೀಕ್ಷಕ ರಾಘವೇಂದ್ರ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

ಮಾತಿನ ಚಕಮಕಿ

ಸಾರ್ವಜನಿಕರು ಅಹವಾಲು ಸಲ್ಲಿಸುವ ಸಂದರ್ಭ ಮೈಕ್ ನೀಡುವಂತೆ ಕಾಂಗ್ರೆಸ್ ಮುಖಂಡರು ಹಾಗೂ ಪತ್ರಕರ್ತರು ಜಿಲ್ಲಾಧಿಕಾರಿ ಹಾಗೂ ಶಾಸಕರಲ್ಲಿ ಮನವಿ ಮಾಡಿದರು. ಸ್ಪಂದನೆ ದೊರೆಯದಿದ್ದಾಗ ಮಾಧ್ಯಮ ಪ್ರತಿನಿಧಿಗಳು ಒಟ್ಟಾಗಿ ವೇದಿಕೆ ಮುಂಭಾಗ ತೆರಳಿದರು. ಈ ಸಂದರ್ಭ ಪೊಲೀಸ್ ವರಿಷ್ಠಾಧಿಕಾರಿ ಏರುಧ್ವನಿಯಲ್ಲಿ, ‘ಜನರು ಕೆಳಗೆ ಬಂದಾಗ ಸಮಸ್ಯೆ ಬಗ್ಗೆ ಕೇಳಿ, ಇಲ್ಲಿ ಹೇಳಲು ಆಗುವುದಿಲ್ಲ’ ಎಂದು ಗದರಿದರು. ಈ ವೇಳೆ ಮಾತಿನ ಚಕಮಕಿ ನಡೆಯಿತು. ‘ಸಭೆಯಲ್ಲಿ ಜನರ ಸಮಸ್ಯೆ ಏನು? ಅದಕ್ಕೆ ಏನು ಪರಿಹಾರ ದೊರೆತಿದೆ… ಎಂಬುದರ ಬಗ್ಗೆ ವರದಿ ಮಾಡಲು ಬಂದಿರುವುದೇ ಹೊರತು, ನಿಮ್ಮ ಭಾಷಣ ವರದಿ ಮಾಡಲು ಅಲ್ಲ’ ಎಂದು ಮಾಧ್ಯಮ ಪ್ರತಿನಿಧಿಗಳು ಕಾರ್ಯಕ್ರಮ ಬಹಿಷ್ಕರಿಸಿ ಹೊರನಡೆದರು. ಆದರೂ ಇಬ್ಬರು ಶಾಸಕರೂ ಈ ಬಗ್ಗೆ ಧ್ವನಿ ಎತ್ತಲಿಲ್ಲ.

ಸಾರ್ವಜನಿಕರ ಅಸಮಾಧಾನ

ಈ ರೀತಿ ಜನರ ಸಮಸ್ಯೆ ಕೇಳುವುದಿದ್ದರೆ ತಹಸೀಲ್ದಾರ್ ಕಚೇರಿಯಲ್ಲೋ, ಎಸಿ ಕಚೇರಿಯಲ್ಲೋ ಸಭೆ ನಡೆಸಬಹುದಿತ್ತು. ಇಷ್ಟು ದೊಡ್ಡ ಸಭಾಂಗಣದಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ಜನಸ್ಪಂದನ ಕಾರ್ಯಕ್ರಮ ನಡೆಸುವ ಅವಶ್ಯಕತೆ ಏನಿತ್ತು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿತ್ತು. ಸರ್ಕಾರಕ್ಕೆ ವರದಿ ನೀಡಲು ಕಾಟಾಚಾರಕ್ಕೆ ಇಂತಹ ಜನಸ್ಪಂದನ ಕಾರ್ಯಕ್ರಮ ಮಾಡಲಾಗಿದೆಯೇ ಹೊರತು ಜನರ ಸಮಸ್ಯೆಗೆ ಸ್ಪಂದಿಸಲು, ಸಮಸ್ಯೆ ಬಗೆಹರಿಸಲು ಅಲ್ಲ ಎಂಬ ಮಾತೂ ಸಾರ್ವಜನಿಕರಿಂದ ಕೇಳಿ ಬಂದಿತು.

ಜನಸ್ಪಂದನ ಕಾರ್ಯಕ್ರಮಕ್ಕೆ ಪ್ರಚಾರದ ಕೊರತೆ ಕಾಣುತ್ತಿದೆ. ಸಭೆಯಲ್ಲಿ ಅಧಿಕಾರಿಗಳು ಮಾತ್ರ ಕಾಣುತ್ತಿದ್ದಾರೆ. ಜನಸಾಮಾನ್ಯರ ಸಂಖ್ಯೆ ಕಡಿಮೆ ಇದೆ. ಜನಸ್ಪಂದನ ಉತ್ತಮ ಕಾರ್ಯಕ್ರಮವಾಗಿದ್ದು ಇಡೀ ಜಿಲ್ಲೆಯ ಅಧಿಕಾರಿಗಳು ಇಲ್ಲೇ ಇರುವುದರಿಂದ ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸಬಹುದು.-ಕಿರಣ್ ಕುಮಾರ್ ಕೊಡ್ಗಿ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net