ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಭೇಟಿ ನೀಡಿದರು. ಹರಿನಾರಾಯಣದಾಸ ಆಸ್ರಣ್ಣ ಅವರು ಈಶ್ವರಪ್ಪ ಅವರಿಗೆ ದೇವರ ಶೇಷ ವಸ್ತ್ರ ಪ್ರಸಾದ ನೀಡಿದರು.
ಬಳಿಕ ಮಾತನಾಡಿದ ಈಶ್ವರಪ್ಪ, ಈ ಬಾರಿ ಶಿವಮೊಗ್ಗದಲ್ಲಿ ಮೊದಲ ಬಾರಿಗೆ ಕಂಬಳ ನಡೆಸುತ್ತಿದ್ದೇವೆ. ಕಂಬಳ ತುಳುನಾಡಿನ ಜನಪದ ಕ್ರೀಡೆಯಾಗಿದ್ದು ಆರಾಧನೆ ರೂಪವನ್ನು ಪಡೆದಿದೆ. ಶಿವಮೊಗ್ಗದ ಜನತೆಗೆ ಈ ಕ್ರೀಡೆಯನ್ನು ಪರಿಚಯಿಸಲು ತುಂಬಾ ಸಂತೋಷವಾಗುತ್ತಿದೆ. ಸುಮಾರು 10 ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದರು.
ಈಶ್ವರಪ್ಪನವರ ಮಗ, ಕಂಬಳ ಸಮಿತಿ ಕಾರ್ಯಾಧ್ಯಕ್ಷ ಕಾಂತೇಶ್ ಮಾತನಾಡಿ, ಕಂಬಳ ಅದ್ಧೂರಿಯಾಗಿ ನಡೆಸಲು ಉದ್ದೇಶಿಸಿದ್ದು, ಈಗಾಗಲೇ ಸುಮಾರು 15 ಎಕರೆ ಜಾಗವನ್ನು ಗುರುತಿಸಿದ್ದೇವೆ. ಪಾರ್ಕಿಂಗ್‌ಗಾಗಿ ಪ್ರತ್ಯೇಕ ಜಮೀನಿನ ವ್ಯವಸ್ಥೆ ಮಾಡಲಾಗುತ್ತಿದ್ದು, ಶಿವಮೊಗ್ಗದ ಇತಿಹಾಸದಲ್ಲೇ ಮೊದಲ ಬಾರಿಗೆ ಕಂಬಳ ನಡೆಯುತ್ತಿದೆ ಎಂದರು.
ಜಿಲ್ಲಾ ಕಂಬಳ ಸಮಿತಿ ಉಪಾಧ್ಯಕ್ಷ ಲೋಕೇಶ್ ಮುಚ್ಚೂರು ಕಲ್ಕುಡೆ, ಸಮಿತಿ ಸದಸ್ಯರು ಇದ್ದರು.