

ಮೂಡುಬಿದಿರೆ: 29 ವರ್ಷಗಳ ಹಿಂದೆ ಒಂಟಿಕಟ್ಟೆಯಲ್ಲಿ ನಡೆದ ಗುಂಪು ಹಲ್ಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು ಕೋರ್ಟ್ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದಾತನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.
ಒಂಟಿಕಟ್ಟೆಯ ಹರೀಶ್ ಪೂಜಾರಿ(55)ಸೆರೆಸಿಕ್ಕಾತ. ಆರೋಪಿಗಳಾದ ಭೋಜ ಕೋಟ್ಯಾನ್, ಹರೀಶ್ ಪೂಜಾರಿ, ಜಗದೀಶ್ ಸಾಲ್ಯಾನ್, ಪ್ರಕಾಶ್, ರಾಜಣ್ಣ ಹಾಗೂ ಸಂಗಲೇ ಮುರುಗನ್ ಸೇರಿಕೊಂಡು 1995ರಲ್ಲಿ ಒಂಟಿಕಟ್ಟೆಯ ಮನೆಯೊಂದರ ಗಾರೆ ಕೆಲಸ ಮಾಡುತ್ತಿದ್ದ ಸತೀಶ್ ಪೂಜಾರಿ ಮತ್ತು ಇತರರಿಗೆ ಮರದ ದೊಣ್ಣೆಯಿಂದ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆಯೊಡ್ಡಿದ್ದ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಆರೋಪಿಗಳ ಪೈಕಿ ಹರೀಶ್ ಪೂಜಾರಿ ಮಾತ್ರ ಕೋರ್ಟ್‌ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈತ ಕೋಟೆಬಾಗಿಲಿನಲ್ಲಿ ಕೆಲಸ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಗುರುವಾರ ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.