ವರ್ಕ್​ ಫ್ರಂ ಹೋಮ್​ ಕೇಳಿದ್ದೀರಿ, ಇದೀಗ ಶೂಟ್ಸ್​ ಫ್ರಂ ಹೋಮ್​ ಶುರು...

Erica-
Published on

ಕರೊನಾ ಹಾವಳಿಯಿಂದ ಸಿನಿಮಾ ಇಂಡಸ್ಟ್ರಿ ತತ್ತರಿಸಿ ಹೋಗಿದೆ. ಇತ್ತ ಧಾರಾವಾಹಿ ಕ್ಷೇತ್ರ ಈಗಷ್ಟೇ ಸುಧಾರಿಸಿಕೊಳ್ಳುತ್ತಿದೆ. ಲಾಕ್​ಡೌನ್​ ಸಡಿಲವಾದ ಬೆನ್ನಲ್ಲೇ ಚಿತ್ರೀಕರಣಕ್ಕೆ ಅನುಮತಿ ನೀಡಲಾಗಿದೆ. ಆದರೂ ಅಲ್ಲೊಂದು ಇಲ್ಲೊಂದು ಕರೊನಾ ಪ್ರಕರಣಗಳು ವರದಿಯಾಗುತ್ತಿವೆ. ಇದೀಗ ಹಿಂದಿಯ ಖ್ಯಾತ ಧಾರಾವಾಹಿ ತಂಡದ ಮೂರು ಮಂದಿಗೆ ಕರೊನಾ ಬಂದ ಹಿನ್ನೆಲೆಯಲ್ಲಿ, ಇಡೀ ತಂಡ ಆತಂಕದಲ್ಲಿ ಶೂಟಿಂಗ್​ ಮಾಡಿಕೊಳ್ಳುತ್ತಿದೆ.

ಹೌದು, ಕಸೌತಿ ಜಿಂದಗಿ ಕಾಯ್ ಧಾರಾವಾಹಿ ಸೆಟ್​ನಲ್ಲಿನ ಇಬ್ಬರು ಮತ್ತು ಕಲಾವಿದ ಪಾರ್ಥ ಸಮರ್ಥಗೆ ಕರೊನಾ ವೈರಸ್​ ದೃಢಪಟ್ಟಿತ್ತು. ಬಳಿಕ ಇತ್ತೀಚಿನ ಮತ್ತೊಂದು ವರದಿಯಲ್ಲಿ ನೆಗೆಟಿವ್​ ಬಂದಿದ್ದರಿಂದ ಪಾರ್ಥ ಕ್ವಾರಂಟೈನ್​ನಲ್ಲಿದ್ದಾರೆ. ಹೀಗಿರುವಾಗಲೇ ಧಾರಾವಾಹಿಯ ನಾಯಕಿ ಎರಿಕಾ ಫರ್ನಾಂಡಿಸ್​ ಕರೊನಾ ಹಾವಳಿಯಿಂದ ತಪ್ಪಿಸಿಕೊಳ್ಳಲು ಹೊಸ ನಿರ್ಧಾರಕ್ಕೆ ಬಂದಿದ್ದಾರೆ. ಅವರ ಭಾಗದ ಚಿತ್ರೀಕರಣವನ್ನು ಅವರ ಮನೆಯಲ್ಲಿಯೇ ಚಿತ್ರೀಕರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಇನ್ನು ಧಾರಾವಾಹಿ ವಿಚಾರಕ್ಕೆ ಬರುವುದಾದರೆ, ನಿರ್ದೇಶನ, ಛಾಯಾಗ್ರಹಣ, ಮೇಕಪ್​ ಸೇರಿ ಹಲವು ವಿಭಾಗಗಳಲ್ಲಿ ಪರಿಣತಿ ಹೊಂದಿರುವುದರಿಂದ ಅವರ ಭಾಗದ ಚಿತ್ರೀಕರಣವನ್ನು ಅವರೇ ಮಾಡಲಿದ್ದಾರಂತೆ. ಸಹಕಲಾವಿದರಿಲ್ಲದೆ ನಟನೆ ಮಾಡಿ ಅದರ ದೃಶ್ಯಾವಳಿಗಳನ್ನು ಕಳುಹಿಸುವುದಾಗಿ ಹೇಳಿಕೊಂಡಿದ್ದಾರೆ. ಸದ್ಯ ಪಾಸಿಟಿವ್​ ಬಂದವರು ಕ್ವಾರಂಟೈನ್​ನಲ್ಲಿದ್ದು, ಅವರೆಲ್ಲರ ವರದಿ ನೆಗೆಟಿವ್​ ಬಂದ ಬಳಿಕವಷ್ಟೇ ಸೆಟ್​ಗೆ ಹಾಜರಾಗಲಿದ್ದಾರಂತೆ ಎರಿಕಾ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net