

ಕರೊನಾ ಲಾಕ್ಡೌನ್ ಶುರುವಾದಾಗಿನಿಂದ ಅತೀ ಹೆಚ್ಚು ಹೆಸರು ಕೇಳಿದವರಲ್ಲಿ ಸೋನು ಸೂದ್ ಅವರ ಹೆಸರೂ ಒಂದು. ಈಗಾಗಲೇ ಮುಂಬೈನಲ್ಲಿ ಬೇರೆ ಬೇರೆ ಊರಿನವರನ್ನು ಅವರ ಊರಿಗೆ ಕಳುಹಿಸಿದ್ದರು. ಸಾಕಷ್ಟು ಜನರ ಹಸಿವನ್ನೂ ನಿಗಿಸಿದ್ದರು. ಅಷ್ಟೇ ಅಲ್ಲ ಉದ್ಯೋಗ ಇಲ್ಲದವರಿಗೆ ಉದ್ಯೋಗ ನೀಡುವ ಕೆಲಸಕ್ಕೂ ಸೋನು ಮುಂದಾಗಿದ್ದಾರೆ. ಇದೀಗ ಮೌಂಟೆನ್ ಮ್ಯಾನ್ಗೂ ಸೋನು ಅಭಯ ಹಸ್ತ ಚಾಚಿದ್ದಾರೆ.
ಹೌದು, ಬಾಲಿವುಡ್ಲ್ಲಿ ಮಾಂಜಿ ಹೆಸರಿನ ಸಿನಿಮಾ ಕೆಲ ವರ್ಷಗಳ ಹಿಂದೆ ಬಿಡುಗಡೆ ಆಗಿತ್ತು. ಆ ಸಿನಿಮಾದಲ್ಲಿ ಬಾಲಿವುಡ್ ನಟ ನವಾಜುದ್ದೀನ್ ಸಿದ್ಧೀಕಿ ದಶರಥ ಮಾಂಜಿ ಪಾತ್ರವನ್ನು ನಿರ್ವಹಿಸಿದ್ದರು. ಇದೀಗ ಅದೇ ಅಸಲಿ ದಶರಥ ಮಾಂಜಿ ಪರಿಸ್ಥಿತಿ ಹದಗೆಟ್ಟಿದೆ.
ಹಣಕಾಸಿನ ಸಮಸ್ಯೆಯಿಂದ ಆ ಕುಟುಂಬ ಪರದಾಡುತ್ತಿರುವ ವಿಚಾರ ಸ್ಥಳೀಯ ಪತ್ರಿಕೆಗಳಲ್ಲಿ ಸುದ್ದಿಯಾಗಿದೆ. ಇತ್ತೀಚೆಗೆ ದಶರಥ ಮಾಂಜಿ, ಮೊಮ್ಮಗಳ ಚಿಕಿತ್ಸೆಗಾಗಿ ಮೆಡಿಕಲ್ ಲೋನ್ ಪಡೆದುಕೊಂಡಿದ್ದರು. ಇದೀಗ ಅದನ್ನು ಸಕಾಲಕ್ಕೆ ತೀರಿಸಲೂ ಕುಟುಂಬದಿಂದ ಸಾಧ್ಯ ಆಗುತ್ತಿಲ್ಲ. ಈ ಬಗ್ಗೆ ಪತ್ರಿಕೆಯಲ್ಲಿ ಸುದ್ದಿ ಬಂದಿದ್ದೇ ತಡ, ಅದನ್ನು ಗಮನಿಸಿದ ಸೋನು ನೆರವಿಗೆ ಧಾವಿಸಿದ್ದಾರೆ.
ಇನ್ನು ಇತ್ತೀಚೆಗಷ್ಟೇ ಕಾರ್ಮಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ, ಸೋನು ಒಂದು ಹೊಸ ಆ್ಯಪ್ ಬಿಡುಗಡೆ ಮಾಡಿದ್ದರು. ಪ್ರವಾಸಿ ರೋಜ್ಗಾರ್ ಎಂಬ ಈ ಆ್ಯಪ್ನಲ್ಲಿ ಯಾವ್ಯಾವ ಊರಿನಲ್ಲಿ ಏನೆಲ್ಲಾ ಕೆಲಸಗಳಿವೆ ಎಂಬ ಮಾಹಿತಿ ಸಹ ಇದೆ. ಅಗತ್ಯವಿರುವವರು ಆ ಆ್ಯಪ್ ಬಳಸಿಕೊಂಡು, ಸೂಕ್ತ ಕೆಲಸಗಳನ್ನು ಹುಡುಕಿಕೊಳ್ಳಬಹುದಾಗಿದೆ. (ಏಜೆನ್ಸೀಸ್)