ಇಂಜಿನಿಯರಿಂಗ್​ ಮತ್ತು ವೈದ್ಯಕೀಯ ಶಿಕ್ಷಣ ನವೆಂಬರ್​-ಡಿಸೆಂಬರ್​ನಲ್ಲಿ ಆರಂಭ?

iit
Published on

ನವದೆಹಲಿ: ಕೋವಿಡ್​-19 ಪಿಡುಗಿನ ಹಿನ್ನೆಲೆಯಲ್ಲಿ ಇಂಜಿನಿಯರಿಂಗ್​ ಮತ್ತು ವೈದ್ಯಕೀಯ ಶಿಕ್ಷಣದ ಮೊದಲ ವರ್ಷದ ಶಿಕ್ಷಣ ನವೆಂಬರ್​ನಿಂದ ಹಾಗೂ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಮತ್ತು ರಾಷ್ಟ್ರೀಯ ತಂತ್ರಜ್ಞಾನ (ಎನ್​ಐಟಿ) ಕಾಲೇಜುಗಳ ಮೊದಲ ವರ್ಷದ ಶಿಕ್ಷಣ ಡಿಸೆಂಬರ್​ನಲ್ಲಿ ಆರಂಭವಾಗುವ ಸಾಧ್ಯತೆ ಇದೆ.

ಕೋವಿಡ್​-19 ಪಿಡುಗಿನ ಹಿನ್ನೆಲೆಯಲ್ಲಿ ಪ್ರವೇಶ ಪರೀಕ್ಷೆಗಳು ವಿಳಂಬವಾಗಿರುವ ಕಾರಣ ಕಾಲೇಜುಗಳ ಪ್ರವೇಶ ಪ್ರಕ್ರಿಯೆ ಕೂಡ ವಿಳಂಬವಾಗುತ್ತಿದೆ. ಇದರಿಂದಾಗಿ ಎಂಬಿಬಿಎಸ್​ ಮತ್ತು ಬಿಡಿಎಸ್​ಗಳ ಪ್ರವೇಶ ಕಾರ್ಯಕ್ರಮದ ಪರಿಷ್ಕೃತ ದಿನಾಂಕವನ್ನು ಕೇಂದ್ರ ಆರೋಗ್ಯ ಸಚಿವಾಲಯ ನಿಗದಿಪಡಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ ಐಐಟಿ ಸೇರಿ ಎಲ್ಲ ರಾಜ್ಯಗಳ ವಿಶ್ವವಿದ್ಯಾಲಯಗಳು ಕೂಡ ಮೊದಲ ವರ್ಷದ ಪ್ರವೇಶಕ್ಕೆ ಹೊಸ ವೇಳಾಪಟ್ಟಿಯನ್ನು ಸಿದ್ಧಪಡಿಸಿಕೊಳ್ಳುತ್ತಿವೆ ಎಂದು ಹೇಳಿದ್ದಾರೆ.

ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಜೆಇಇ ಮೇನ್​ ಪರೀಕ್ಷೆಯನ್ನು ಸೆಪ್ಟೆಂಬರ್​ 1ರಿಂದ 6ವರೆಗೆ ನಡೆಸಿದ 10 ಅಥವಾ 11ರಂದು ಫಲಿತಾಂಶ ಪ್ರಕಟಿಸಲಿದೆ. ಇದಾದ ಬಳಿಕ ಮೊದಲ ವರ್ಷದ ಬಿಟೆಕ್​ ಪ್ರವೇಶದ ಕೌನ್ಸೆಲಿಂಗ್​ ಹಾಗೂ ಸೀಟು ಹಂಚಿಕೆ ಪ್ರಕ್ರಿಯೆ ಆರಂಭವಾಗಲಿದೆ.

ವೈದ್ಯಕೀಯ ಶಿಕ್ಷಣದ ಪ್ರವೇಶಕ್ಕಾಗಿ ನೀಟ್​ ಪರೀಕ್ಷೆಯನ್ನು ಸೆ.13ರಂದು ಆಯೋಜಿಸಲಾಗುತ್ತಿದೆ. ಫಲಿತಾಂಶ ಪ್ರಕಟಿಸಲು ಕನಿಷ್ಠ 15ರಿಂದ 20 ದಿನಗಳು ಬೇಕಾಗುತ್ತವೆ. ಆದ್ದರಿಂದ ಅಕ್ಟೋಬರ್​ ಮಧ್ಯ ಭಾಗದಿಂದ ಸೀಟುಗಳ ಹಂಚಿಕೆ ಪ್ರಕ್ರಿಯೆ ನಡೆಸಲಾಗುವುದು. ಅಂದರೆ ಮೊದಲ ವರ್ಷದ ತರಗತಿಗಳು ನವೆಂಬರ್​ನಿಂದ ಆರಂಭವಾಗಲಿವೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net