ರಾಷ್ಟ್ರೀಯ ಹೆದ್ದಾರಿ ಬಳಿ ಕಾಡಾನೆ ಕಾಟ

mundaje elephant
ಕಾಡಾನೆ ದಾಳಿ ನಡೆಸಿ ಕೃಷಿ ಹಾನಿಗೊಳಿಸಿರುವುದು.
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆಯ ಕಾಪಿನ ಬಾಗಿಲು ಎಂಬಲ್ಲಿ ಬುಧವಾರ ರಾತ್ರಿ ಕಾಡಾನೆ ಸಂಚಾರ ನಡೆಸಿ ಲತಾ ಜಿ.ಭಿಡೆಯವರ ಮನೆಯಂಗಳಲ್ಲಿದ್ದ ಬಾಳೆ ಗಿಡಗಳನ್ನು ನಾಶಪಡಿಸಿದೆ.

ಮಧ್ಯರಾತ್ರಿ 12.30ರ ತನಕ ಮನೆಯವರು ಎಚ್ಚರವಿದ್ದು, ಆ ಬಳಿಕ ಕಾಡಾನೆ ಸಂಚರಿಸಿದೆ. ಇವರ ಮನೆ ರಾಷ್ಟ್ರೀಯ ಹೆದ್ದಾರಿಯಿಂದ 50 ಮೀಟರ್ ದೂರದಲ್ಲಿದ್ದು, ಈ ಪರಿಸರದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ನಡೆಯುತ್ತಿರುವ ಸ್ಥಳದ ಮೂಲಕವೇ ಹೆದ್ದಾರಿಯಿಂದ ಆನೆ ಮನೆಯಂಗಳಕ್ಕೆ ಬಂದಿದೆ. ಹೆದ್ದಾರಿಯ ಚರಂಡಿ, ತಡೆಗೋಡೆ ಕೆಲಸಗಳು ನಡೆಯುತ್ತಿದ್ದು ಅಲ್ಲಿ ಯಾವುದೇ ರೀತಿ ಹಾನಿ ಉಂಟು ಮಾಡದೆ ಕಾಡಾನೆ ಮುಂದೆ ಸಾಗಿದೆ.

ಮಂಗಳವಾರ ರಾತ್ರಿ ಚಾರ್ಮಾಡಿಯ ಕೋಡಿ ಹಿತ್ತಿಲು ಎಂಬಲ್ಲಿ ಕಾಡಾನೆ ಕಂಡು ಬಂದಿದ್ದು ಬುಧವಾರ ಬೆಳಗ್ಗೆ ಇಲ್ಲಿಯ ಹೊಸಮಠದ ರಬ್ಬರ್ ತೋಟದಲ್ಲಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಕಾಡಿಗೆ ಅಟ್ಟಿತ್ತು. ಬುಧವಾರ ರಾತ್ರಿ ಇಲ್ಲಿನ ಮಾರಂಗಾಯ ಪರಿಸರದಲ್ಲಿ ರಾತ್ರಿ 9ರ ಹೊತ್ತಿಗೆ ಕಾಡಾನೆ ಇರುವುದು ಸ್ಥಳೀಯರಿಗೆ ಕಂಡುಬಂದಿತ್ತು. ಬಳಿಕ ಬೆಳಗಿನ ಜಾವ ಅನ್ನಾರು ಪರಿಸರದಲ್ಲಿ ಕಾಡಾನೆ ಓಡಾಟ ನಡೆಸಿದೆ.

ಎರಡು ಆನೆಗಳು

ಚಾರ್ಮಾಡಿ ಪರಿಸರ ಮತ್ತು ಮುಂಡಾಜೆಗೆ 12 ಕಿ.ಮೀ. ಅಂತರವಿದ್ದು, ಎರಡು ಕಡೆ ಕಂಡುಬಂದ ಸಲಗ ಒಂದೇ ಆಗಿರಬಹುದೇ ಅಥವಾ ಎರಡು ಸಲಗಗಳು ಬೇರೆ ಬೇರೆಯಾಗಿ ಓಡಾಟ ನಡೆಸುತ್ತಿವೆಯೇ ಎಂಬ ಶಂಕೆ ವ್ಯಕ್ತವಾಗಿದೆ. ಮೃತ್ಯುಂಜಯ ನದಿ ದಾಟಿ ದುಂಬೆಟ್ಟು ಮೂಲಕ ಹೋಗಿರುವ ಕಾಡಾನೆ ಚಿಬಿದ್ರೆ ಅಥವಾ ಕಡಿರುದ್ಯಾವರ ಕಡೆ ಹೋಗಿರುವ ಸಾಧ್ಯತೆ ಇದೆ. ಒಟ್ಟಾರೆಯಾಗಿ ಪರಿಸರದ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net