More

    ಅಂಚೆ ಸಿಬ್ಬಂದಿಗೆ ಕನ್ನಡ ಬರಲ್ಲ!

    -ಪುರುಷೋತ್ತಮ ಪೆರ್ಲ ಕಾಸರಗೋಡು

    ಜಿಲ್ಲೆಯ ಕನ್ನಡ ಪ್ರದೇಶಗಳಲ್ಲಿ ಕಾರ್ಯಾಚರಿಸುತ್ತಿರುವ ಅಂಚೆ ಕಚೇರಿಗಳಲ್ಲಿ ಕನ್ನಡ ಬಾರದ ಮಲಯಾಳಿ ಸಿಬ್ಬಂದಿಯನ್ನು ನೇಮಿಸುತ್ತಿರುವುದರಿಂದ ಗ್ರಾಮೀಣ ಪ್ರದೇಶದ ಜನತೆಗೆ ಸಂಕಷ್ಟ ಎದುರಾಗುತ್ತಿದೆ.

    ಕೆಲತಿಂಗಳಿನಿಂದ ಕಾಸರಗೋಡು, ಮಂಜೇಶ್ವರ ತಾಲೂಕಿನ ವಿವಿಧ ಅಂಚೆ ಕಚೇರಿಗಳಲ್ಲಿ ಸ್ಥಳೀಯರ ಬದಲು ದಕ್ಷಿಣ ಕೇರಳದ ಸಿಬ್ಬಂದಿಯನ್ನು ನೇಮಿಸಿರುವುದರಿಂದ ಈ ಸಿಬ್ಬಂದಿಗೆ ಭಾಷಾ ಸಮಸ್ಯೆ ಎದುರಾಗುತ್ತಿದೆ. ಇದರಿಂದ ಅಂಚೆ ಕಚೇರಿಗೆ ಭೇಟಿ ನೀಡುವ ಮಲಯಾಳ ಅರಿಯದ ಜನಸಾಮಾನ್ಯರು ಕೆಲವೊಮ್ಮೆ ಕೆಲಸ ಅರ್ಧಕ್ಕೆ ಬಿಟ್ಟು ವಾಪಸಾಗಬೇಕಾದ ಸ್ಥಿತಿಯೂ ಎದುರಾಗುತ್ತಿದೆ.

    ದಕ್ಷಿಣ ಕೇರಳದವರೇ ಹೆಚ್ಚು

    ಮುಖ್ಯವಾಗಿ ಗ್ರಾಮೀಣ ಡಾಕ್ ಸೇವಕ್(ಜಿಡಿಎಸ್) ಹುದ್ದೆಗಳಿಗೆ ದಕ್ಷಿಣ ಕೇರಳದವರನ್ನೇ ಹೆಚ್ಚಾಗಿ ಕಾಸರಗೋಡು ಜಿಲ್ಲೆಗೆ ನಿಯೋಜಿಸಲಾಗುತ್ತಿದೆ. ಅಂಚೆ ಕಚೇರಿಗಳಲ್ಲಿ ಈ ಹಿಂದೆ ಪೋಸ್ಟ್‌ಮ್ಯಾನ್ ಆಗಿ ಸ್ಥಳೀಯರನ್ನೇ ನಿಯೋಜಿಸುತ್ತಿದ್ದುದರಿಂದ ಗ್ರಾಮೀಣ ಪ್ರದೇಶದ ಜನತೆಗೆ ಯಾವುದೇ ಸಮಸ್ಯೆ ಇಲ್ಲದೆ ಅಂಚೆ ಕಚೇರಿಗಳಲ್ಲಿ ವ್ಯವಹಾರ ನಡೆಸುತ್ತಿದ್ದರೆ, ಪ್ರಸಕ್ತ ಗ್ರಾಮೀಣ ಪ್ರದೇಶದಿಂದ ಆಗಮಿಸುವ ಹಿರಿಯರೊಂದಿಗೆ ಮಲಯಾಳಿ ಸಿಬ್ಬಂದಿ ಒರಟುತನದಿಂದ ವರ್ತಿಸುತ್ತಿರುವ ಆರೋಪ ಕೇಳಿಬರುತ್ತಿದೆ.

    ಅನುಚಿತ ವರ್ತನೆ ಆರೋಪ

    ಪೆರ್ಲ ಅಂಚೆ ಕಚೇರಿಗೆ ಇತ್ತೀಚೆಗೆ ರಿಜಿಸ್ಟರ್ಡ್ ಅಂಚೆ ಪಡೆಯಲು ಆಗಮಿಸಿದ ಮಹಿಳೆಯೊಬ್ಬರ ಜತೆ ಸಿಬ್ಬಂದಿ ಅನುಚಿತವಾಗಿ ವರ್ತಿಸಿರುವ ಬಗ್ಗೆ ಆ ಮಹಿಳೆ ತಮಗಾದ ನೋವನ್ನು ತೋಡಿಕೊಂಡಿದ್ದಾರೆ. ತಾನು ತುಳು ಭಾಷೆಯಲ್ಲಿ ಮಾತನಾಡಿದ್ದು, ಇದನ್ನು ಅರ್ಥೈಸಿಕೊಳ್ಳಲಾಗದ ಮಲಯಾಳಿ ಸಿಬ್ಬಂದಿ ನನ್ನೊಂದಿಗೆ ತಾತ್ಸಾರದಿಂದ ವರ್ತಿಸಿ, ಭಾಷೆಯ ಬಗ್ಗೆಯೂ ಅವಹೇಳನ ಮಾಡಿ ಹೊರಕಳಿಸಿರುವುದಾಗಿ ಮಹಿಳೆ ದೂರಿದ್ದಾರೆ. ಗ್ರಾಮೀಣ ಪ್ರದೇಶದಿಂದ ಆಗಮಿಸುವವರ ಜತೆ ಅಂಚೆ ಸಿಬ್ಬಂದಿ ನಿರ್ಲಕ್ಷೃ ಹಾಗೂ ಉಡಾಫೆಯಿಂದ ವರ್ತಿಸುತ್ತಿದ್ದಾರೆ ಎಂಬುದಾಗಿ ಅಂಚೆ ಕಚೇರಿಗೆ ಆಗಮಿಸುವ ಗ್ರಾಹಕರು ತಮ್ಮ ಅಳಲು ವ್ಯಕ್ತಪಡಿಸುತ್ತಿದ್ದಾರೆ.

    ಗಡಿನಾಡ ಕನ್ನಡಿಗರಿಗಿಲ್ಲ ಪ್ರಾತಿನಿಧ್ಯ

    ಭಾಷಾ ಅಲ್ಪಸಂಖ್ಯಾತ ಪ್ರದೇಶದ ಕನ್ನಡಿಗರಿಗಿರುವ ಸಂವಿಧಾನಾತ್ಮಕ ಸವಲತ್ತು ಕಾಸರಗೋಡಿನ ಕನ್ನಡಿಗರಿಗೆ ಅಂಚೆ ಇಲಾಖೆ ನಡೆಸುವ ಪರೀಕ್ಷೆಗಳಲ್ಲಿ ಲಭಿಸುತ್ತಿಲ್ಲ. ಈ ಬಗ್ಗೆ ಅಂಚೆ ಇಲಾಖೆಯನ್ನು ಪ್ರಶ್ನಿಸಿದರೆ, ರಾಜ್ಯವ್ಯಾಪ್ತಿಯಾಗಿ ಆಯ್ಕೆ ಪ್ರಕ್ರಿಯೆ ನಡೆಸುತ್ತಿರುವುದರಿಂದ ಕಾಸರಗೋಡಿನ ಕನ್ನಡಿಗರನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುತ್ತಿಲ್ಲ ಎಂಬ ಉತ್ತರ ಲಭಿಸುತ್ತದೆ. ಇದರಿಂದ ಗಡಿನಾಡ ಕನ್ನಡಿಗರು ಮಲಯಾಳಿಗಳಿಗಾಗಿ ನಡೆಸುವ ಪರೀಕ್ಷೆಗಳಲ್ಲಿ ಪಾಲ್ಗೊಳ್ಳಬೇಕು. ಇದಕ್ಕೆ ಮಲಯಾಳ ಭಾಷೆ ಕಡ್ಡಾಯವಾಗಿ ಅರಿತಿರಬೇಕಾಗಿದ್ದರಿಂದ ಅಂಚೆ ಇಲಾಖೆ ನಡೆಸುವ ಪರೀಕ್ಷೆಗಳಲ್ಲಿ ಕನ್ನಡಿಗರು ಸೋಲುತ್ತಾರೆ. ಈ ಬಗ್ಗೆ ಕನ್ನಡಪರ ಸಂಘಟನೆಗಳು ಧ್ವನಿಯೆತ್ತಬೇಕಾದ ಅನಿವಾರ್ಯತೆಯಿದೆ. ಸಂಸದರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿ ಕಾಸರಗೋಡಿನ ಕನ್ನಡಿಗರಿಗೆ ಕನ್ನಡದಲ್ಲೇ ಪ್ರತ್ಯೇಕ ಪರೀಕ್ಷೆ ನಡೆಸುವ ಅಥವಾ ಮಲಯಾಳ ಜತೆಗೆ ಕನ್ನಡ ಪ್ರಶ್ನೆಪತ್ರಿಕೆಯನ್ನೂ ನೀಡುವ ವ್ಯವಸ್ಥೆ ಮಾಡಿ, ಗಡಿನಾಡ ಕನ್ನಡಿಗರಿಗಿರುವ ಸಂವಿಧಾನಾತ್ಮಕ ಸವಲತ್ತು ಒದಗಿಸಿಕೊಡಲು ಶ್ರಮಿಸುವಂತೆ ಕನ್ನಡಿಗ ಉದ್ಯೋಗಾರ್ಥಿಗಳ ಹೆತ್ತವರು ಆಗ್ರಹಿಸಿದ್ದಾರೆ.

    ಭಾಷೆ ಬಗೆಗಿನ ಗೊಂದಲದಿಂದ ಜನಸಾಮಾನ್ಯರಿಗೆ ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಸಿಬ್ಬಂದಿ ಕಾರ್ಯಾಚರಿಸಬೇಕು. ಈ ಬಗ್ಗೆ ಎಲ್ಲ ಅಂಚೆ ಕಚೇರಿ ಸಿಬ್ಬಂದಿಗೂ ಮನವರಿಗೆ ಮಾಡಲಾಗುವುದು.
    -ಶೀಲಾ, ಅಂಚೆ ಅಧೀಕ್ಷಕಿ, ಕಾಸರಗೋಡು ಜಿಲ್ಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts