More

    ಗೊಂದೋಳು ಸೇವೆ ಪ್ರಿಯೆ ಜೋಡು ಗದ್ದುಗೆ ದೇವಿ ಶ್ರೀ ದುರ್ಗಾಪರಮೇಶ್ವರಿ ಅಮ್ಮ ಆಲಯದಲ್ಲಿ ಸಂಭ್ರಮ

    ಅನಂತ ನಾಯಕ್ ಮುದ್ದೂರು ಕೊಕ್ಕರ್ಣೆ
    ಬ್ರಹ್ಮಾವರ ತಾಲೂಕಿನ ಕರ್ಜೆ ಗ್ರಾಪಂ ವ್ಯಾಪ್ತಿಯ ಹಲುವಳ್ಳಿ ಗ್ರಾಮದ ರಮ್ಯ ಮನೋಹರ ಪ್ರಕೃತಿಯ ಮಡಿಲಿನ ನೂಜಿ ಎಂಬಲ್ಲಿ ಶತಮಾನದ ಹಿಂದೆ ಪ್ರತಿಷ್ಠಾಪಿಸಲ್ಪಟ್ಟ ಮರಾಠಿ ಸಮುದಾಯದವರಿಂದ ಪೂಜಾ ಕೈಂಕರ್ಯ ಸ್ವೀಕರಿಸಿ, ನಂಬಿದಂತಹ ಭಕ್ತರ ಸಕಲ ಅಭೀಷ್ಟಾರ್ಥ ನೆರವೇರಿಸುತ್ತಿರುವ ದೇವಿ ಶ್ರೀ ದುರ್ಗಾಪರಮೇಶ್ವರಿ ಜೋಡು ಗದ್ದುಗೆ ಅಮ್ಮ.

    ಮೂಲತಃ 33ನೇ ಶಿರೂರು ಗ್ರಾಮದಲ್ಲಿದ್ದು ಕ್ರಮೇಣ ಹಲುವಳ್ಳಿ ಗ್ರಾಮದ ಕಂಚಿಗಾರಬೆಟ್ಟುವಿನಲ್ಲಿ ನೆಲೆನಿಂತು ನಂಬಿದವರ ಪಾಲಿಗೆ ಇಷ್ಟ ದೇವತೆಯಾಗಿದ್ದಾಳೆ. ಮನೆಯಂಗಳದ ಪುಟ್ಟ ಗುಡಿಯಲ್ಲಿ ಗದ್ದುಗೆ ಪೀಠದಲ್ಲಿ ವಿರಾಜಮಾನಳಾಗಿ ಕಾಲಾವಧಿಯ ಪೂಜೆ ಪುನಸ್ಕಾರಗಳನ್ನು ಹಾಗೂ ಭಕ್ತರು ತಮ್ಮ ಕಷ್ಟ ಕಾಲದಲ್ಲಿ ಹೇಳಿಕೊಂಡ ತನ್ನ ಇಷ್ಟವಾದ ಗೊಂದೋಳು(ಪಂಚ ದೀವಟಿಗೆ) ಸೇವೆಗಾಗಿ ಹರಕೆ ಹೊತ್ತವರ ವಾಸ ಸ್ಥಳಕ್ಕೆ ಹೋಗಿ ಸಂತೃಪ್ತಿಯಿಂದ ಸ್ವೀಕರಿಸಿ ಭಕ್ತರ ಪಾಲಿಗೆ ಅಭೀಷ್ಟ ದೇವತೆಯಾಗಿ ಅಭಯರೂಪಿಯಾಗಿದ್ದಾಳೆ. ಕ್ಷೇತ್ರದ ಅಣತಿ ದೂರದಲ್ಲಿ ಪರಿವಾರ ನಾಗಬ್ರಹ್ಮ ಸ್ಥಾನ, ನೂಜಿ ಗೋಪಾಲಕೃಷ್ಣ ಮಠ ಹಾಗೂ ದೇವಿಯ ಸನ್ನಿಧಿಯಲ್ಲಿ ದೈವಗಳಾದ ವರ್ತೆ ಪಂಜುರ್ಲಿ-ಕಲ್ಲುರ್ಟಿ-ಕಲ್ಕುಡ, ಯಕ್ಷಿ ಮಂತ್ರಗಣ ಹಾಗೂ ಪರಿವಾರ ದೈವಗಳು ನೆಲೆಸಿದ ಪುಣ್ಯ ಕ್ಷೇತ್ರವಾಗಿದೆ.

    ದೇವಿ ಸನ್ನಿಧಿ ಪುಟ್ಟ ಗುಡಿ ಕಾಲ ಕ್ರಮೇಣ ಶಿಥಿಲಾವಸ್ಥೆಗೆ ತಲುಪಿದ ಸಂದರ್ಭ ಮತ್ತು ಹೆಚ್ಚಾದ ಭಕ್ತ ಸಮೂಹಕ್ಕೆ ಪೂಜೆ ಅವಕಾಶ ಒದಗಿಸಿಕೊಡುವ ನಿಟ್ಟಿನಲ್ಲಿ ನಂಬಿದ ಭಕ್ತರು, ದಾನಿಗಳು ಮತ್ತು ಗದ್ದುಗೆ ಮನೆಯವರ ಸಹಕಾರದೊಂದಿಗೆ 2012ನೇ ಇಸವಿಯಲ್ಲಿ ಪ್ರಸ್ತುತ ಇರುವ ದೇವಸ್ಥಾನ ನಿರ್ಮಿಸಿ ಶ್ರೀ ದೇವಿ ಗದ್ದುಗೆ ಅಮ್ಮನವರನ್ನು ಪುನರ್‌ಪ್ರತಿಷ್ಠಾಪನೆ ಮಾಡಲಾಯಿತು.

    ಬಿಂಬಾಧಿವಾಸ, ಪ್ರತಿಷ್ಠಾಹೋಮ: ಮಾರ್ಚ್ 2ರಂದು ಬೆಳಗ್ಗೆ ಗಣಯಾಗ, ತುಳಸಿ ಪ್ರತಿಷ್ಠೆ, ಸಂಜೆ ಗೇಹ ಸ್ವೀಕಾರ, ಪ್ರಾರ್ಥನೆ, ವಾಸ್ತು ಪೂಜಾ ಹೋಮ, ಬಲಿದಾನ, ಬಿಂಬಾಧಿವಾಸ ಪೂಜೆ, ಪ್ರತಿಷ್ಠಾಪನಾ ಹೋಮ, ಪ್ರಸಾದ ವಿತರಣೆ, ಸಂಜೆ ಸಾಂಸಕ್ರತಿಕ ವೈವಿಧ್ಯ ನಡೆಯಲಿದೆ. ಮಾಜಿ ಶಾಸಕ ಕೆ.ರಘುಪತಿ ಭಟ್ ಕಾರ್ಯಕ್ರಮ ಉದ್ಘಾಟಿಸುವರು. ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣ ನಾಯ್ಕ ಕೆ. ಅಧ್ಯಕ್ಷತೆ ವಹಿಸುವರು. ಅನ್ನಸಂತರ್ಪಣೆ, ಯಕ್ಷಗಾನ ನಡೆಯಲಿರುವುದು.

    ಗೊಂದೋಳು ಸೇವೆ ಪ್ರಿಯೆ ಜೋಡು ಗದ್ದುಗೆ ದೇವಿ ಶ್ರೀ ದುರ್ಗಾಪರಮೇಶ್ವರಿ ಅಮ್ಮ ಆಲಯದಲ್ಲಿ ಸಂಭ್ರಮ

    ಪ್ರತಿಷ್ಠಾಪನಾ ವಿಧಿಗಳು

    ಮಾ.3ರಂದು ಬೆಳಗ್ಗೆ ಪ್ರತಿಷ್ಠಾಪನಾ ವಿಧಿಗಳು, ಬಿಂಬ ಪ್ರತಿಷ್ಠಾಪನೆ ಮತ್ತು ಜೀವ ಕುಂಭಾಭಿಷೇಕ, ಅಷ್ಠೋತ್ತರ ಶತಕಲಶ ಸ್ಥಾಪನೆ, ಪ್ರಧಾನಾಧಿವಾಸ ಹೋಮಾದಿಗಳು, ಚಂಡಿಕಾಯಾಗ, ಕಲಶಾಭಿಷೇಕ, ಮಹಾಪೂಜೆ, ದರ್ಶನ, ಪ್ರಸಾದ ವಿತರಣೆ, ಮಹಾಅನ್ನಸಂತರ್ಪಣೆ, ಭಕ್ತಿ ಸುಧೆ, ಶ್ರೀದುರ್ಗಾಪರಮೇಶ್ವರಿ ಗದ್ದುಗೆ ಭಜನಾ ಮಂಡಳಿಯವರಿಂದ ಕುಣಿತ ಭಜನೆ, ರಂಗಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಧಾರ್ಮಿಕ ಸಭಾ ಕಾರ್ಯಕ್ರಮದ ದೀಪ ಪ್ರಜ್ವಲನೆ ಶಾಸಕ ಯಶ್‌ಪಾಲ್ ಸುವರ್ಣ ನೆರವೇರಿಸುವರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣ ನಾಯ್ಕ ಕೆ. ಅಧ್ಯಕ್ಷತೆ ವಹಿಸುವರು. ವಿದ್ವಾನ್ ಸೀತಾರಾಮ ಅಡಿಗರಿಂದ ಧಾರ್ಮಿಕ ಉಪನ್ಯಾಸ, ಅನ್ನಸಂತರ್ಪಣೆ, ಶ್ರೀಅಂಬಾ ಭವಾನಿ ಮರಾಠಿ ಸಾಂಸ್ಕೃತಿಕ ಕಲಾ ವೇದಿಕೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

    ಮಾರ್ಚ್ 4ರಂದು ಸಂಜೆ ಭಜನೆ, ಅಲಂಕಾರ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಮಾರ್ಚ್ 5ರಂದು ಸಂಜೆ ದೇವತಾ ಪ್ರಾರ್ಥನೆ, ಅನ್ನಸಂತರ್ಪಣೆ, ಗೊಂದೋಲು ಸೇವೆ, ಪ್ರಸಾದ ವಿತರಣೆ ಮುಂತಾದ ಕಾರ್ಯಕ್ರಮ ಜರುಗಲಿರುವುದು ಎಂದು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣ ನಾಯ್ಕ ಕೆ. ಮತ್ತು ಆಡಳಿತ ಮಂಡಳಿಯ ಅಧ್ಯಕ್ಷ ರಾಜೇಶ್ ನಾಯ್ಕ ನೂಜಿ ತಿಳಿಸಿದ್ದಾರೆ.

    ನಿತ್ಯ ಪೂಜೆ, ತುಲಾಭಾರ

    ನೂತನವಾಗಿ ಪ್ರತಿಷ್ಠಾಪಿಸಲ್ಪಟ್ಟ ದೇವಸ್ಥಾನದಲ್ಲಿ ನಿತ್ಯ ಪೂಜೆ, ಸಂಕ್ರಮಣ ಪೂಜೆ, ತುಲಾಭಾರ ಸೇವೆ, ಹೂವಿನಪೂಜೆ, ಕುಂಕುಮಾರ್ಚನೆ, ವರಮಹಾಲಕ್ಷ್ಮೀ ಪೂಜೆ ಹಾಗೂ ವಿಜೃಂಭಣೆಯ ನವರಾತ್ರಿ ಉತ್ಸವ, ಚಂಡಿಕಾಹೋಮ, ಮಹಾಅನ್ನಸಂತರ್ಪಣೆ, ಕಾರ್ತಿಕ ದೀಪೋತ್ಸವ ಸಂಪನ್ನಗೊಳ್ಳುತ್ತಾಬರುತ್ತಿದೆ. ಶ್ರೀ ದೇವಿಯ ಕಾರ್ಣಿಕ ಶಕ್ತಿಯು ಸಾವಿರಾರು ಭಕ್ತರ ಹರಕೆ, ಪೂಜೆ, ಪ್ರಾರ್ಥನೆಗಳಿಗೊಲಿದು ಇಷ್ಟಾರ್ಥ ನೆರವೇರಿಸುತ್ತಿರುವುದು ಅಕ್ಷರಶಃ ಸತ್ಯ ಎನ್ನುವುದು ನಂಬಿದ ಭಕ್ತರ ಮಾತು.

    1ರಂದು ಹಸಿರು ಹೊರೆ ಕಾಣಿಕೆ

    ಮಾರ್ಚ್ 1ರಂದು ಸಂಜೆ 4ರಿಂದ ಕರ್ಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಹಸಿರು ಹೊರೆ ಕಾಣಿಕೆ ಹೊರಡಲಿರುವುದು. ಸೀತಾರಾಮ ಅಡಿಗ ಹಲುವಳ್ಳಿ ಮಠ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿರುವುದು.

    ದೇವಸ್ಥಾನ ಪುನರ್‌ಪ್ರತಿಷ್ಠೆಗೊಂಡು 11 ವರ್ಷ ಸಂದಿದ್ದು, 12ನೇ ವರ್ಷಕ್ಕೆ ಬ್ರಹ್ಮಕಲಶೋತ್ಸವ ನಡೆಸಲಾಗುತ್ತಿದೆ. ಆಡಳಿತ ಮಂಡಳಿ, ಜೀರ್ಣೋದ್ಧಾರ ಸಮಿತಿ ಮತ್ತು ಭಕ್ತರ ಸಂಕಲ್ಪದಂತೆ ಗರ್ಭಗುಡಿ ನವೀಕರಣ, ಸುತ್ತುಪೌಳಿ ವಿಸ್ತರಣೆ, ಮೇಲ್ಛಾವಣಿ ಉನ್ನತೀಕರಣ ಕಾರ್ಯಗಳು ನಡೆದಿವೆ. ನಂಬಿದ ಭಕ್ತರ ಇಷ್ಟಾರ್ಥ ಪೂರೈಸುವವಳು ಈ ದೇವಿ.
    -ಕೃಷ್ಣ ನಾಯ್ಕ ಕೆ.
    ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts