More

    ಮಾವಿನ ಮರದಡಿ ಕಲ್ಲಿರಿಸಿ ಮಕ್ಕಳೇ ನಂಬಿದ ಮಹಮ್ಮಾಯಿ: ಮುಂಡ್ಕೂರು ಕಜೆಯಲ್ಲಿ ಮಹಿಮೆ ತೋರಿಸಿದಳು

    ಹರಿಪ್ರಸಾದ್ ನಂದಳಿಕೆ ಕಾರ್ಕಳ
    ಸುಮಾರು 9 ಕೋಟಿ ರೂ.ವೆಚ್ಚದಲ್ಲಿ ಸಂಪೂರ್ಣ ಶಿಲಾಮಯಗೊಂಡ ಕಜೆ ಕುಕ್ಕುದಡಿ ಕ್ಷೇತ್ರವೆಂದೇ ಪ್ರಸಿದ್ಧಿ ಹೊಂದಿರುವ ಐತಿಹಾಸಿಕ ಮುಂಡ್ಕೂರು ಕಜೆ ಶ್ರೀ ಮಹಾಮ್ಮಾಯಿ ದೇವಸ್ಥಾನದಲ್ಲಿ ಫೆ.26ರಂದು ಬ್ರಹ್ಮಕಲಶಾಭಿಷೇಕ ಸಂಭ್ರಮದಿಂದ ನಡೆಯಲಿದೆ.

    ಋಷಿಮುನಿಗಳ ತಪಕ್ಕೆ ಒಲಿದ ಮಹಮ್ಮಾಯಿ

    ಗುಡ್ಡಬೆಟ್ಟು ಕಾಡಿನ ಮಧ್ಯೆ ಇರುವ ಈ ಕ್ಷೇತ್ರ ತನ್ನದೇ ಇತಿಹಾಸ ಹೊಂದಿದೆ. ಈ ಜಾಗದಲ್ಲಿ ಅನಾದಿ ಕಾಲದಲ್ಲಿ ಋಷಿಮುನಿಗಳು ಮಹಮ್ಮಾಯಿ ತಪಸ್ಸಿನಿಂದ ದೇವಿಯನ್ನು ಒಲಿಸಿಕೊಂಡಿದ್ದರು. ಮುಂದೆ ವಿಶಾಲವಾದ ಕೊಳ, ಹಿನ್ನೆಲೆಯಲ್ಲಿ ಬೃಹತ್ ಮಾವಿನ ಮರ, ಶತಮಾನಗಳ ಹಿಂದೆ ಈ ಪವಿತ್ರ ಜಾಗದಲ್ಲಿ ಆಧ್ಯಾತ್ಮಿಕ ಚಿಂತನೆಯಲ್ಲಿ ನಿರತರಾಗಿದ್ದ ಮಹರ್ಷಿಗಳು ತಮೋಗುಣ ರೂಪಿಣಿಯಾದ ಮಹಾಕಾಳಿಯನ್ನು ಕುರಿತು ತಪಸ್ಸು ಮಾಡಿದ ಸ್ಥಳವಿದು. ಅಂದು ಅವರಿಗೆ ಮಾರಿಕಾರೂಪಿಣಿಯಾದ ಶ್ರೀದೇವಿ ಸಾಕ್ಷಾತ್ಕಾರಗೊಂಡ ತಾಣವೇ ಇದೀಗ ಕಜೆ ಮಾರಿಗುಡಿಯಾಗಿ ರೂಪುಗೊಂಡಿದೆ.

    ಮಾವಿನ ಮರದಡಿ ಕಲ್ಲಿರಿಸಿ ಮಕ್ಕಳೇ ನಂಬಿದರು

    ಬಹಳ ವರ್ಷಗಳ ಹಿಂದೆ ಈ ಊರಿನಲ್ಲಿ ಮಾರಿ ಓಡಿಸುವ ಕಾರ್ಯಕ್ರಮವೊಂದನ್ನು ವೀಕ್ಷಿಸಿ ಬಂದ ಈ ಪ್ರದೇಶದ ಆರು ಮನೆಯ ಬಡ ಕೃಷಿಕ ಬಾಲಕರು ದನಕರುಗಳನ್ನು ಮೇಯಿಸುತ್ತಿದ್ದಾಗ ಇಲ್ಲಿದ್ದ ಮಾವಿನ ಮರದ ಬುಡದಲ್ಲಿ ಒಂದು ಕಲ್ಲಿರಿಸಿ ಕೋಳಿಯನ್ನು ಕೊಯ್ದು ದೇವಿಗೆ ಅರ್ಪಿಸಿ ತಮ್ಮ ಬಾಲಿಶಃ ಮುಗ್ಧ ಭಕ್ತಿಯಿಂದ ಮಹಾಮ್ಮಾಯಿಯನ್ನು ಪ್ರಾರ್ಥಿಸಿದ್ದರಂತೆ. ವರ್ಷವೊಂದು ಉರುಳಿದಾಗ ಈ ವಿಷಯವನ್ನು ಮರೆತ ಆ ಆರು ಮನೆಯವರಿಗೆ ಮೈಲಿಗೆ ರೋಗ (ಸಿಡುಬು) ಕಾಣಿಸಿಕೊಂಡಿತ್ತಂತೆ. ದೈವಜ್ಞರಲ್ಲಿ ಪ್ರಶ್ನೆ ಇರಿಸಿದಾಗ ಹಿಂದಿನ ವರ್ಷ ಬಾಲಕರು ಮಾಡಿದ ಮಾರಿಯ ಆರಾಧನೆ ಬೆಳಕಿಗೆ ಬಂತು. ಮಕ್ಕಳ ಮುಗ್ಧ ಭಕ್ತಿಗೆ ಒಲಿದು ಸುಪ್ತವಾಗಿದ್ದ ಕಾಳಿಕಾಶಕ್ತಿ ತೃಪ್ತಳಾಗಿ ಮುಂದೆಯೂ ಇದೇ ರೀತಿಯ ಪೂಜೆಯನ್ನು ಸದಾಕಾಲ ಬಯಸಿದ್ದಳು. ಅಂದಿನಿಂದ ಈ ಆರೂ ಮನೆಯವರು ಪ್ರತಿವರ್ಷ ಕರ್ಕಾಟಕ, ಕುಂಭ ಮಾಸದಲ್ಲಿ ಈ ಮಾವಿನ ಮರದ ಬುಡದಲ್ಲಿ ಚರುವಿನ ಎಡೆ ಕೋಳಿ ಕೊಯ್ದು ಆರಾಧಿಸುವ ಸಂಪ್ರದಾಯವಿದೆ.

    1823ರಲ್ಲಿ ಗುಡಿಸಲಲ್ಲಿ ನೆಲೆಯಾದಳು ತಾಯಿ

    ಮುಂದೆ ಮಹಾಮ್ಮಾಯಿ ಪ್ರೇರಣೆಯಂತೆ 1823ರಲ್ಲಿ ಈ ಕ್ಷೇತ್ರದ ಮಹಿಮೆಯನ್ನು ಮನಗಂಡ ವಿಪ್ರರೋರ್ವರ ಸೂಚನೆಯಂತೆ ಈ ಆರೂ ಮನೆಯವರು ಆ ಸ್ಥಳದಲ್ಲಿ ಒಂದು ಸಣ್ಣ ಗುಡಿಯನ್ನು ನಿರ್ಮಿಸಿ ದೇವಿ ಗದ್ದುಗೆಯನ್ನು ಪ್ರತಿಷ್ಠಾಪಿಸಿದರು. ಆಗ ಇದ್ದ ಮುಳಿಹುಲ್ಲಿನ ಗುಡಿಸಲಿನ ಗರ್ಭಗುಡಿ ಇಂದು ವಿಶಾಲ ಪ್ರದೇಶದಲ್ಲಿ ಶಿಲಾಮಯಗೊಂಡು ವಿಜೃಂಭಿಸುತ್ತಿದೆ.

    ಮಾವಿನ ಮರದಡಿ ಕಲ್ಲಿರಿಸಿ ಮಕ್ಕಳೇ ನಂಬಿದ ಮಹಮ್ಮಾಯಿ: ಮುಂಡ್ಕೂರು ಕಜೆಯಲ್ಲಿ ಮಹಿಮೆ ತೋರಿಸಿದಳು

    ಪ್ರತಿ ಮಂಗಳವಾರ ಹಾಗೂ ಶುಕ್ರವಾರ ವಿಶೇಷ ದರ್ಶನ ಸೇವೆ

    ಪ್ರತಿ ಮಂಗಳವಾರ ಹಾಗೂ ಶುಕ್ರವಾರ ವಿಶೇಷ ದರ್ಶನ ಸೇವೆಪ್ರತಿ ಮಂಗಳವಾರ ಹಾಗೂ ಶುಕ್ರವಾರ ವಿಶೇಷ ದರ್ಶನ ಸೇವೆ, ಶುಕ್ರವಾರ ಅನ್ನ ಸಂತರ್ಪಣೆ ಜರುಗುತ್ತಿರುವುದು ಕ್ಷೇತ್ರದ ವಿಶೇಷತೆ. ಈ ದರ್ಶನದಲ್ಲಿ ಸಂಕಷ್ಟ ನಿವಾರಣೆಗಾಗಿ ಪಾತ್ರಿ ಮುಖೇನ ದೇವಿ ಅಭಯ ನೀಡುವಳೆಂಬುದು ಭಕ್ತರ ನಂಬಿಕೆ. ವರ್ಷಾವಧಿ ಮಾಯಿ ಮಾರಿಪೂಜೆ, ಚಂಡಿಕಾ ಯಾಗ, ಗುಳಿಗ ಪಂಜುರ್ಲಿ ನೇಮೋತ್ಸವ, ಆಟಿ ಮಾರಿಪೂಜೆ ಹಾಗೂ ನವರಾತ್ರಿ ಮಹೋತ್ಸವ ಸಂದರ್ಭದಲ್ಲಿ ದುರ್ಗಾಷ್ಟಮಿಯಂದು ಚಂಡಿಕಾ ಯಾಗ, ದೇವಿ ದರ್ಶನ, ಸಾರ್ವಜನಿಕ ಅನ್ನಸಂತರ್ಪಣೆ ವಿಧಿವತ್ತಾಗಿ ಜರುಗುತ್ತಿವೆ.

    ಧಾರ್ಮಿಕ ಕಾರ್ಯಕ್ರಮಗಳು

    26ರಂದು ಸ್ವಸ್ತಿವಾಚನ, ಬ್ರಹ್ಮಕಲಶಾಭಿಷೇಕ ಆರಂಭವಾಗಲಿದ್ದು, ಬ್ರಹ್ಮಕುಂಭಾಭಿಷೇಕ ನೆರವೇರಲಿದೆ. ಬಳಿಕ ಪ್ರಸನ್ನ ಪೂಜೆ, ದೇವಿದರ್ಶನ, ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ ನಡೆಯಲಿದೆ. 27ರಂದು ಮೆರವಣಿಗೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ಮೆರವಣಿಗೆಯ ಮೂಲಕ ಜಾರಿಗೆಕಟ್ಟೆ-ಪೇರೂರು-ಸಚ್ಚೇರಿಪೇಟೆ ಕಟ್ಟೆಯಲ್ಲಿ ಪೂಜೆ ನಡೆದು ರಾತ್ರಿ 9ಕ್ಕೆ ಕಜೆ ಮಾರಿಗುಡಿಗೆ ಹಿಂತಿರುಗಿದ ನಂತರ ದೇವಿ ದರ್ಶನ. ರಾತ್ರಿ 10ರ ನಂತರ ಗುಳಿಗ ಪಂಜುರ್ಲಿ ದೈವಗಳ ನೇಮೋತ್ಸವ ಜರಗಲಿದೆ. 28ರಂದು ವಾರ್ಷಿಕ ಮಾರಿಪೂಜೆ, ಮಧ್ಯಾಹ್ನ 12 ಗಂಟೆ ಮಹಾಪೂಜೆ, 12.30ಕ್ಕೆ ದೇವಿ ದರ್ಶನ, ಅನುಗ್ರಹ ಪ್ರಸಾದ ವಿತರಣೆ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts