More

    ಮಾನವರ ಹೃದಯದಲ್ಲಿ ದೇವರ ವಾಸ

    ಹೊಳಲ್ಕೆರೆ: ದೇವರು ಎಲ್ಲಿದ್ದಾನೆಂದು ಕ್ಷೇತ್ರ, ಗುಡಿ ಎಂಬುದಾಗಿ ಹಲವರು ತೋರಿಸಿದರು. ಆದರೆ, ಬಸವಣ್ಣ ಅವರ ಪ್ರಕಾರ ಎಲ್ಲಿಯೂ ಹುಡುಕುವ ಅಗತ್ಯವಿಲ್ಲ. ಎಲ್ಲರ ಹೃದಯದಲ್ಲಿದ್ದಾನೆ ಎಂದು ಮುರುಘಾಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.

    ಹೊಳಲ್ಕೆರೆ ತಾಲೂಕಿನ ನಂದನಹೊಸೂರು ಗ್ರಾಮದಲ್ಲಿ ಮಂಗಳವಾರ ಲೋಕಾರ್ಪಣೆಗೊಂಡ ಶಕ್ತಿದೇವತೆ ಕರಿಯಮ್ಮ ದೇವಿ ನೂತನ ದೇಗುಲ, ವಿಗ್ರಹ ಪ್ರತಿಷ್ಠಾಪನೆ, ಗೋಪುರ ಕಳಸಾರೋಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಮುರುಘಾಮಠದಿಂದ 1960ರಲ್ಲಿ ದಸರಾ, ಆನಂತರ ಬಸವ ಜಯಂತಿ, ಶರಣ ಸಂಗಮ ಕಾರ್ಯಕ್ರಮ ಪ್ರಥಮವಾಗಿ ಆರಂಭವಾದ ಕೀರ್ತಿ ನಂದನಹೊಸೂರು ಗ್ರಾಮಸ್ಥರಿಗೆ ಸಲ್ಲುತ್ತದೆ. ಇಲ್ಲಿರುವ ಎಲ್ಲರೂ ದೇವರಷ್ಟೇ ಮುರುೇಶನನ್ನೂ ಕೂಡ ಭಕ್ತಿಯಿಂದ ಆರಾಧಿಸುತ್ತಾರೆ. ಹೀಗಾಗಿ ಇದೊಂದು ಭಕ್ತಿಯ ಸಾಮ್ರಾಜ್ಯವಾಗಿದೆ ಎಂದು ಬಣ್ಣಿಸಿದರು.

    ದೇವರು ಸದಾಕಾಲ ಚರ್ಚೆಯಾಗುವ ವಿಷಯವಾಗಿದೆ. ಐದ್ಹತ್ತು ನಿಮಿಷ ಗಾಳಿ ನಿಲ್ಲಿಸಿದರೆ, ಯಾರೂ ಬದುಕಲಾರರು. ಒಳಿತನ್ನು ಮಾಡುವ ಮೂಲಕ ಮಹಾದೇವ ಆಗಬೇಕೆ ಹೊರತು ಕೆಡಕನ್ನು ಮಾಡುತ್ತ ದಾನವನಾಗಬಾರದು ಎಂದು ಸಲಹೆ ನೀಡಿದರು.

    ಡಾ.ಶಾಂತವೀರ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿ, ಪ್ರತಿ ಊರಿಗೊಂದು ದೇಗುಲ ಇರಬೇಕು. ಆದರೆ, ಗಲ್ಲಿ-ಗಲ್ಲಿಗೂ, ಜಾತಿಗೊಂದು ಅಗತ್ಯವಿಲ್ಲ. ದೇವರ ವಿಚಾರದಲ್ಲಿ ತೋರುವ ಸಂಭ್ರಮ, ಆಸಕ್ತಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ನೀಡದಿರುವುದು ದೊಡ್ಡ ದುರಂತ. ಇದು ಆಗಬಾರದು ಎಂದು ಸಲಹೆ ನೀಡಿದರು.

    ಬಿಜೆಪಿ ಮುಖಂಡ ಎಂ.ಸಿ.ರಘುಚಂದನ್ ಮಾತನಾಡಿ, ಈ ಗ್ರಾಮದಿಂದಲೇ ನಾನು ಮುಖಂಡನಾಗಿ ಹೊರಹೊಮ್ಮಲು ಗ್ರಾಮಸ್ಥರ ಸಹಕಾರ ಕಾರಣವಾಗಿದೆ. 2018ರಿಂದ 2023 ರವರೆಗೂ ಹೊಳಲ್ಕೆರೆ ಕ್ಷೇತ್ರದ 174 ಕ್ಕೂ ಹೆಚ್ಚು ದೇಗುಲ ನಿರ್ಮಾಣಕ್ಕೆ ಶಾಸಕರು ಅನುದಾನ ಮಂಜೂರು ಮಾಡಿದ್ದಾರೆ. ಇಲ್ಲಿನ ಗಲ್ಲಿ-ಗಲ್ಲಿಗೂ ಕಾಂಕ್ರಿಟ್ ರಸ್ತೆ, ಶಾಲೆಗಳ ಅಭಿವೃದ್ಧಿಗೆ ಕ್ರಮವಹಿಸಲಾಗಿದೆ ಎಂದು ಹೇಳಿದರು.

    ಎಂ.ಚಂದ್ರಪ್ಪ ಅವರು ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಏನು ಎಂಬುದು ಜನತೆಗೆ ಗೊತ್ತಿದೆ. ಮಿತ್ರರು-ಶತ್ರುಗಳು ಯಾರೇ ಅಭಿವೃದ್ಧಿ ಕಾರ್ಯ ಮಾಡಿರಲಿ, ಅದನ್ನು ಸ್ಮರಿಸುವ ಕೆಲಸ ಮಾಡಬೇಕೆ ಹೊರತು ಕೇವಲ ದೂಷಿಸುವುದರಿಂದ ಯಾರಿಗೂ ಪ್ರಯೋಜನವಿಲ್ಲ ಎಂದು ಸಲಹೆ ನೀಡಿದರು.

    ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಹೊಳಲ್ಕೆರೆ ತಾಪಂ ಮಾಜಿ ಸದಸ್ಯ ಮೂಡಲಗಿರಿಯಪ್ಪ ಇತರರಿದ್ದರು.

    ನಂದನಹೊಸೂರು ಐತಿಹಾಸಿಕ ಮಾತ್ರವಲ್ಲ, ಸಾಮಾಜಿಕವಾಗಿಯೂ ಹೆಸರಾಗಿದೆ. ಕುಂಚಿಟಿಗ ಸಮುದಾಯಕ್ಕೂ ಇಲ್ಲಿಗೂ ಅವಿನಾಭಾವ ಸಂಬಂಧ ಇದೆ.
    ಎಂ.ಪಿ.ಪ್ರವೀಣ್, ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ

    ದೇಗುಲ ನಿರ್ಮಾಣಕ್ಕೆ ಶಾಸಕ ಎಂ.ಚಂದ್ರಪ್ಪ 25 ಲಕ್ಷ, ಎಂಎಲ್ಸಿ ಕೆ.ಎಸ್.ನವೀನ್ 4 ಲಕ್ಷ ರೂ. ಅನುದಾನ ಮಂಜೂರು ಮಾಡಿದ್ದಾರೆ. ಗ್ರಾಮದ ಸಮಸ್ತರೂ ಕೂಡ ಅಗತ್ಯ ಸಹಕಾರ ನೀಡಿದ್ದರಿಂದಾಗಿ ದೇಗುಲ ಉತ್ತಮವಾಗಿ ಮೂಡಿಬಂದಿದೆ.
    ಜಿ.ಎಚ್.ಶಿವಕುಮಾರ್, ವಕೀಲ

    ಅಯೋಧ್ಯೆ ಶ್ರೀರಾಮಮಂದಿರ ಲೋಕಾರ್ಪಣೆ ಬಳಿಕ ನಂದನಹೊಸೂರಿನಲ್ಲಿ ಕರಿಯಮ್ಮ ದೇವಿಯ ನೂತನ ದೇಗುಲ ಲೋಕಾರ್ಪಣೆಯಾಗಿದೆ. ಇದನ್ನು ಧಾರ್ಮಿಕ ಶ್ರದ್ಧಾ-ಭಕ್ತಿಯ ಕೇಂದ್ರವನ್ನಾಗಿಸೋಣ.
    ಎನ್.ಎಸ್.ರಮೇಶ, ನಿವೃತ್ತ ಪಿಡಬ್ಲುೃಡಿ ಮುಖ್ಯ ಇಂಜಿನಿಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts