More

    ಸುಪ್ರೀತಾ ಮೊಗದಲ್ಲಿ ಮೂಡಿದ ನಗು

    ಹೇಮನಾಥ್ ಪಡುಬಿದ್ರಿ
    20 ವರ್ಷಗಳಿಂದ ಮೂಲಸೌಕರ್ಯವಿಲ್ಲದೆ ನೊಂದಿದ್ದ ಪರಿಶಿಷ್ಟ ಪಂಗಡದ ಕುಟುಂಬವೊಂದಕ್ಕೆ ಸಮಸ್ಯೆ ಗಮನಕ್ಕೆ ಬಂದ 33 ದಿನಗಳಲ್ಲೇ ನೀರು ವಿದ್ಯುತ್ ಸಂಪರ್ಕ ಕೊಡಿಸಿದ ಕಾಪು ತಹಸೀಲ್ದಾರ್ ಜನಮನ್ನಣೆಗೆ ಪಾತ್ರರಾಗಿದ್ದಾರೆ.

    ಕಾಪು ತಾಲೂಕಿನ ಬಡಾ ಗ್ರಾಮದ ಅದಮಾರಿನ ಪರಿಶಿಷ್ಟ ಪಂಗಡದ ಕಾಲನಿಯೊಂದರಲ್ಲಿ ಸಂಬಂಧಿಗಳದ್ದೆ 7 ಮನೆಗಳಿದ್ದು, ಸುಪ್ರೀತಾ ಪದವೀಧರೆ ಯುವತಿ ತಂದೆ ತಾಯಿಯ ಕುಟುಂಬವೂ ಸೇರಿದೆ. ಹಿಂದೆ ಈ ಮನೆಗಳಿಗೆ ಭಾಗ್ಯಜ್ಯೋತಿ ವಿದ್ಯುತ್ ಸಂಪರ್ಕವಿತ್ತು. ಕಾಲಕ್ರಮೇಣ ಗಾಳಿಮಳೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿತು. ಆಸ್ತಿಗೆ ಸಂಬಂಧಿಸಿ ಒಂದು ಮನೆಯವರ ಆಕ್ಷೇಪ ಎದುರಾಗಿ ಸಂಪರ್ಕ ಮರು ಸ್ಥಾಪಿಸಲಾಗದೆ ಕುಟುಂಬ ತೊಂದರೆಗೆ ಸಿಲುಕಿತ್ತು. ಸಮಸ್ಯೆ ಕುರಿತಂತೆ ಕುಟುಂಬದವರು ಗ್ರಾಪಂ ಗಮನಕ್ಕೆ ತಂದರು. ಗ್ರಾಮಾಡಳಿತ ಸಮಸ್ಯೆ ಬಗೆಹರಿಸಲು ಸಾಕಷ್ಟು ಪ್ರಯತ್ನಿಸಿತ್ತು. ವಿದ್ಯುತ್ ಸಂಪರ್ಕಕ್ಕಾಗಿ ಎರಡು ಮೂರು ಬಾರಿ ಕಂಬ ಅಳವಡಿಸಲು ಪ್ರಯತ್ನಿಸಿದರೂ ಅಡೆತಡೆ ಎದುರಾಗಿತ್ತು.

    ಕುಂದುಕೊರತೆ ಸಭೆಯಲ್ಲಿ ಕಣ್ಣೀರಿಟ್ಟಿದ ಸುಪ್ರೀತಾ

    ತಹಸೀಲ್ದಾರ್ ಪ್ರತಿಭಾ ಆರ್. ಅಧ್ಯಕ್ಷತೆಯಲ್ಲಿ ಕಾಪು ತಾಲೂಕು ಆಡಳಿತ ಸೌಧ ಸಭಾಂಗಣದಲ್ಲಿ ಜನವರಿ 20ರಂದು ನಡೆದ 2023-24ನೇ ಸಾಲಿನ ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಹಿತರಕ್ಷಣಾ ಹಾಗೂ ಕುಂದುಕೊರತೆ ಸಭೆಯಲ್ಲಿ ಯುವತಿ ಸುಪ್ರೀತಾ ಸಮಸ್ಯೆ ತೋಡಿ ಕಣ್ಣೀರಿಟ್ಟಾಗ ಸಂಬಂಧಪಟ್ಟ ಇಲಾಖೆಗೆ ಸಮಸ್ಯೆ ಪರಿಹಾರಕ್ಕೆ ಸಭೆಯಲ್ಲೇ ಖಡಕ್ ಸೂಚನೆ ನೀಡಿದ್ದರು.

    ಸುಪ್ರೀತಾ ಮೊಗದಲ್ಲಿ ಮೂಡಿದ ನಗು

    ಸಭೆ ನಡೆದ ದಿನವೇ ತಹಸೀಲ್ದಾರ್ ಸುಪ್ರೀತಾ ಮನೆಗೆ ತೆರಳಿದರು

    ಸಭೆ ನಡೆದ ದಿನವೇ ತಹಸೀಲ್ದಾರ್ ಬಡಾ ಪಿಡಿಒ ಸತೀಶ್ ಆರ್.ಜಿ ಹಾಗೂ ಗ್ರಾಮಾಡಳಿತಾಧಿಕಾರಿ ಜಗದೀಶ್ ಅವರೊಂದಿಗೆ ಸುಪ್ರೀತಾ ಮನೆಗೆ ತೆರಳಿ ಪರಿಶೀಲನೆಯನ್ನೂ ನಡೆಸಿದ್ದರು. ಆ ಸಂದರ್ಭ ಅಲ್ಲಿನ ವಸ್ತುಸ್ಥಿತಿಯನ್ನು ಯುವತಿ ಅವರಿಗೆ ವಿವರಿಸಿದರು. ತಕ್ಷಣ ಕಾರ್ಯಪ್ರವೃತ್ತರಾದ ತಹಸೀಲ್ದಾರ್ ಕರೆಂಟ್- ನೀರು ನೀಡದ ಇಲಾಖೆಗಳನ್ನು ತರಾಟೆಗೆ ತೆಗೆದುಕೊಂಡರು. ಹಂತ-ಹಂತವಾಗಿ ಮನೆಯ ಮುಂದೆ ನಲ್ಲಿ ನೀರಿನ ಸಂಪರ್ಕ, 5 ವಿದ್ಯುತ್ ಕಂಬ ಅಳವಡಿಸಿ ಬೀದಿದೀಪ ಹಾಕಿಸಲಾಯಿತು. ಮನೆಯೊಳಗೆ ವಿದ್ಯುತ್ ಸಂಪರ್ಕ ಒದಗಿಸಲು ಇದ್ದ ತೊಡಕುಗಳನ್ನೂ ನಿವಾರಿಸಿ ಅದನ್ನು ಮಾಡಿಸುವಲ್ಲಿ ಯಶಸ್ವಿಯಾದರು. ಬಳಿಕ ಸುಸ್ಥಿತಿಯಲ್ಲಿಲ್ಲದ ಶೌಚಗೃಹವನ್ನೂ ದುರಸ್ತಿ ಮಾಡಿ ಬಳಸಲು ಅನುವು ಮಾಡಿಕೊಟ್ಟರು. ಇದರಿಂದ ಕಣ್ಣೀರಿಡುತ್ತಿದ್ದ ಸುಪ್ರೀತಾ ಮೊಗದಲ್ಲಿ ನಗು ತುಂಬಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮೂಲಸೌಲಭ್ಯ ದೊರೆಯಬೇಕು ಎನ್ನುವ ಇಚ್ಛೆ ಹೊಂದಿರುವ ತಹಸೀಲ್ದಾರ್ ಕಾಪುವಿನಲ್ಲಿ ಅಧಿಕಾರ ಸ್ವೀಕರಿಸಿ ನೂರು ದಿನಗಳಲ್ಲೇ ತನ್ನ ಕಾರ್ಯವೈಖರಿಯಿಂದ ಸಾರ್ವಜನಿಕರಿಂದಲೂ ಪ್ರಶಂಸೆಗೆ ಪಾತ್ರರಾಗಿದ್ದಾರೆ.

    ಈ ಹಿಂದೆ ಎಷ್ಟೇ ಪ್ರಯತ್ನಪಟ್ಟರೂ ಮೂಲಸೌಕರ್ಯ ಪಡೆಯಲು ಸಾಧ್ಯವಾಗಿಲ್ಲ. ತಹಸೀಲ್ದಾರ್ ಪ್ರತಿಭಾರವರ ದಿಟ್ಟ ಪ್ರಯತದಿಂದಾಗಿ ಇಂದು ಎಲ್ಲ ಸಾಕಾರಗೊಂಡಿದೆ. ಅವರಿಂದಾಗಿ ನನ್ನ ಬಾಳಿಗೆ ಬೆಳಕು ಬಂದಂತಾಗಿದೆ. ಇಂತಹ ಅಧಿಕಾರಿಗಳಿಂದ ಶೋಷಿತರಾದ ನಮಗೆ ಜೀವನೋತ್ಸಾಹ ತುಂಬಿದಂತಾಗಿದೆ. ಜಮೀನಿನ ಗಡಿಗುರುತು ಮಾಡಲಾಗಿದ್ದು, ನಮ್ಮ ಪಾಲಿನ ಜಮೀನು ಸಿಕ್ಕಲ್ಲಿ ವಸತಿ ನಿರ್ಮಾಣ ಮಾಡುವ ಇರಾದೆಯೂ ಇದೆ.
    -ಸುಪ್ರೀತಾ ಪರಿಶಿಷ್ಟ ಪಂಗಡ ಯುವತಿ

    ಗ್ರಾಮ ಆಡಳಿತಾಧಿಕಾರಿ ಜಗದೀಶ್ ಹಾಗೂ ಪಿಡಿಒ ಸತೀಶ್ ಮತ್ತು ಕಂದಾಯ ನಿರೀಕ್ಷಕ ಇಜ್ಜಾರ್ ಸಾಬಿರ್ ಸಹಕಾರ, ಮೇಲಧಿಕಾರಿಗಳ ಮಾರ್ಗದರ್ಶನ, ಕಚೇರಿ ಸಿಬ್ಬಂದಿಯವರ ಪರಿಶ್ರಮ ಹಾಗೂ ಸಾರ್ವಜನಿಕರ ಸಹಕಾರದಿಂದಾಗಿ ಇದು ಸಾಧ್ಯವಾಗಿದೆ.
    -ಪ್ರತಿಭಾ ಆರ್. ತಹಸೀಲ್ದಾರ್ ಕಾಪು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts