More

    ದಲಿತ, ರೈತ, ಕಾರ್ಮಿಕರ ಅಳಿವು, ಉಳಿವಿನ ಚುನಾವಣೆ

    ಮೈಸೂರು: ಪ್ರಸಕ್ತ ಲೋಕಸಭಾ ಚುನಾವಣೆ ನಿರ್ಣಾಯಕವಾಗಿದ್ದು, ದಲಿತ, ರೈತ, ಕಾರ್ಮಿಕ, ಅಲ್ಪಸಂಖ್ಯಾತರ ಅಳಿವು, ಉಳಿವಿನ ಚುನಾವಣೆಯಾಗಿದ್ದು, ಎಚ್ಚರಿಕೆಯಿಂದ ಮತ ಚಲಾಯಿಸಬೇಕಿದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಸಲಹೆ ನೀಡಿದರು.


    ಅಂಬೇಡ್ಕರ್ ಜಯಂತಿ ಅಂಗವಾಗಿ ದಲಿತ ಸಂಘರ್ಷ ಸಮಿತಿ ವತಿಯಿಂದ ಎಂಜಿ ರಸ್ತೆಯ ತರಕಾರಿ ಮಾರುಕಟ್ಟೆಯಲ್ಲಿ ಭಾನುವಾರ ಆಯೋಜಿಸಿದ್ದ ಭಾರತ ಸಂವಿಧಾನ-ಪ್ರಜಾಪ್ರಭುತ್ವದ ಉಳಿವಿಗಾಗಿ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದರು.


    ನರೇಂದ್ರ ಮೋದಿ 3ನೇ ಬಾರಿ ಅಧಿಕಾರಕ್ಕೆ ಬಂದರೆ ನಾವೆಲ್ಲ ಬೆಂಕಿಯಲ್ಲಿ ಬೇಯುವಂತಹ ದುಸ್ಥಿತಿಯನ್ನು ನೋಡಬೇಕಿದೆ. ಅದಕ್ಕಾಗಿ ಸಂವಿಧಾನ, ಪ್ರಜಾಪ್ರಭುತ್ವ, ಒಕ್ಕೂಟ ಭಾರತವನ್ನು ಉಳಿಸಿಕೊಳ್ಳುವ ಕೊನೆಯ ಅವಕಾಶ ದೊರೆತಿದೆ. ಇದು ತಪ್ಪಿದರೆ ಭವಿಷ್ಯದಲ್ಲಿ ಚುನಾವಣೆ ನಡೆಯುತ್ತದೆಯೋ ಇಲ್ಲವೋ ಗೊತ್ತಿಲ್ಲ ಎಂದು ಸೂಚ್ಯವಾಗಿ ಹೇಳಿದರು.


    ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದು, ನಾವು ತಲೆಯೆತ್ತಿ ನಡೆಯಬೇಕೋ ಅಥವಾ ಇವರಿಗೆ ಅಧಿಕಾರ ಕೊಟ್ಟು ನಾವು ತಲೆತಗ್ಗಿಸಿ ನಡೆಯಬೇಕೋ ಎಂಬುದು ಯೋಚಿಸಬೇಕು. ಅವರು ಮತ್ತೆ ಅಧಿಕಾರಕ್ಕೆ ಬಂದರೆ ನಾವೆಲ್ಲ ಗುಲಾಮರಾಗಿ ಬದುಕಬೇಕಾಗುತ್ತದೆ ಎಂದರು.


    ‘ಗ್ಯಾರಂಟಿಯಿಂದ ಹಳ್ಳಿ ಮಹಿಳೆಯರು ದಾರಿ ತಪ್ಪಿದ್ದಾರೆ’ ಎಂದಿರುವ ಎಚ್.ಡಿ.ಕುಮಾರಸ್ವಾಮಿ ಮಾತಿನ ಅರ್ಥವೇನು? ಇದು ತಾಯಂದಿರಿಗೆ ಮಾಡಿದ ಅಣಕ. ಇದನ್ನು ಮಹಿಳೆಯರು ಒಪ್ಪಿಕೊಳ್ಳುತ್ತಾರೆಯೇ? ಇವರು ಹೀಗೆ ಮಾತನಾಡುತ್ತಿದ್ದಾರೆ. ಇನ್ನೂ ಬಿಜೆಪಿಯವರು ಹೇಗೆ ವರ್ತಿಸುತ್ತಾರೋ ಎಂದು ಕಳವಳ ವ್ಯಕ್ತಪಡಿಸಿದರು.


    ಇದು ಟ್ರೈಲರ್ ಅಷ್ಟೇ, ಮುಂದಿನ ವರ್ಷದ ನೀಲಿನಕ್ಷೆ ತಯಾರು ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ. ಹಾಗಾದರೆ 10 ವರ್ಷ ಏನು ಮಾಡಿದ್ದೀರಿ? ಇಷ್ಟು ದಿನ ಜನರನ್ನು ಯಾಮಾರಿಸಿಕೊಂಡು ಬಂದಿರಿ? ಯಾವ ಪುರುಷಾರ್ಥಕ್ಕೆ ಮತ ಕೇಳಲು ಮೈಸೂರಿಗೆ ಬರುತ್ತಿದ್ದೀರಿ? ಎಂದು ಪ್ರಶ್ನಿಸಿದರು.

    ಬಿಜೆಪಿ ಕಾಲದಲ್ಲಿ ಭ್ರಷ್ಟಾಚಾರ ಅತಿರೇಕಕ್ಕೆ


    ಸಂಸ್ಕೃತಿ ಚಿಂತಕ ಶಿವಸುಂದರ್ ಮಾತನಾಡಿ, ಅಂಬೇಡ್ಕರ್ ಬಂದರೂ ಸಂವಿಧಾನ ಬದಲಾವಣೆ ಮಾಡಲು ಆಗಲ್ಲ ಎಂದು ಪ್ರದಾನಿ ಮೋದಿ ಹೇಳಿದ್ದಾರೆ. ಆದರೆ, ಈಗಾಗಲೇ ಸಂವಿಧಾನ ಬದಲಾಗಿದೆ. ಅಂಬೇಡ್ಕರ್ ರೂಪಿಸಿದ್ದ ಅದರ ಗುರುತು, ಚಹರೆ ಪರಿವರ್ತನೆಯಾಗಿದೆ ಎಂದು ಹೇಳಿದರು.


    ಕಾಂಗ್ರೆಸ್ ಏನು ಭ್ರಷ್ಟಾಚಾರದಿಂದ ಮುಕ್ತವಲ್ಲ. ಆದರೆ, ಬಿಜೆಪಿ ಕಾಲದಲ್ಲಿ ಭ್ರಷ್ಟಾಚಾರ ಅತಿರೇಕಕ್ಕೆ ಮುಟ್ಟಿದೆ. ಮೆಗಾ ಇಂಜನಿಯರಿಂಗ್ ಕಂಪನಿಯು ಚುನಾವಣಾ ಬಾಂಡ್ ಮೂಲಕ ಬಿಜೆಪಿಗೆ 1200 ಕೋಟಿ ರೂ.ನೀಡಿದೆ. ಇದೇ ಕಂಪನಿಗೆ ತೆಲಂಗಾಣದ ಕಾಳೇಶ್ವರ ನೀರಾವರಿ ಯೋಜನೆಯ ಗುತ್ತಿಗೆ ನೀಡಿದ್ದು, ಇದರ ಯೋಜನಾ ವೆಚ್ಚ 80 ಸಾವಿರ ಕೋಟಿ ರೂ.ಯಿಂದ 1.60 ಲಕ್ಷ ಕೋಟಿ ರೂ.ಏರಿಕೆ ಆಗಿದೆ. ಇದು ಉದಾಹರಣೆಯಷ್ಟೇ. ಇಂತಹ ಹತ್ತಾರು ಪ್ರಕರಣಗಳಿವೆ ಎಂದರು.


    ಭ್ರಷ್ಟಾಚಾರಿಗಳು ಎಂದು ಬಿಜೆಪಿ ಆರೋಪ ಮಾಡಿದ್ದ 25 ಪ್ರತಿಪಕ್ಷ ನಾಯಕರ ಪೈಕಿ 23 ಜನರು ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಅವರ ಪ್ರಕರಣಗಳನ್ನು ಸ್ಥಗಿತಗೊಳಿಸಿ, ಭ್ರಷ್ಟಾಚಾರದಿಂದ ಪರಿಶುದ್ಧಗೊಳಿಸಲಾಗಿದೆ. ಭ್ರಷ್ಟಾಚಾರಿಗಳಿಗೆ ಬಿಜೆಪಿ ವಾಷಿಂಗ್ ಮೆಷಿನ್ ಯಂತ್ರವಾಗಿದೆ. ಭ್ರಷ್ಟರು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಂತೆ ಭ್ರಷ್ಟಾಚಾರಮುಕ್ತರಾಗುತ್ತಿದ್ದಾರೆ ಎಂದು ಲೇವಡಿ ಮಾಡಿದರು.


    ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ನಾಗರಿಕರ ರಾಷ್ಟ್ರೀಯ ನೋಂದಣಿ(ಎನ್‌ಆರ್‌ಸಿ), ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿ ಬರಲಿದ್ದು, ಮುಂದಿನ ದಿನಗಳಲ್ಲಿ ದೇಶದ ನಿವಾಸಿಗಳು ನಾಗರಿಕತೆಯನ್ನು ಸಾಬೀತು ಪಡಿಸುವುದು ಕಷ್ಟಕರವಾಗಲಿದೆ. ನಾಗರಿಕತೆ ಪ್ರಮಾಣಪತ್ರ ಸಲ್ಲಿಸದಿದ್ದರೆ ಪಡಿತರ, ಶಿಕ್ಷಣ ಸೀಟು, ಮತದಾನ ಹಕ್ಕು ಸೇರಿದಂತೆ ಯಾವ ಸೌಲಭ್ಯ, ಹಕ್ಕುಗಳು ಸಿಗದಂತಾಗಲಿದೆ ಎಂದು ಹೇಳಿದರು.


    ನಟ ಪ್ರಕಾಶ್ ರೈ, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ರಂಗಾಯಣದ ಮಾಜಿ ನಿರ್ದೇಶಕ ಜನಾರ್ದನ್(ಜನ್ನಿ), ಪ್ರಗತಿಪರ ಚಿಂತಕರಾದ ಡಾ.ಎಸ್.ತುಕಾರಾಮ್, ಬಸವರಾಜ ದೇವನೂರು, ದಸಂಸದ ಜಿಲ್ಲಾ ಸಂಚಾಲಕ ಬೆಟ್ಟಯ್ಯಕೋಟೆ, ಮುಖಂಡರಾದ ಆಲಗೂಡು ಶಿವಕುಮಾರ್, ಹೆಗ್ಗನೂರು ನಿಂಗರಾಜು, ಶಂಭುಲಿಂಗಸ್ವಾಮಿ, ಬಿ.ಡಿ.ಶಿವಬುದ್ದಿ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts