

ಉಡುಪಿ: ವಿಧಾನಸೌಧಕ್ಕೆ ನೂರಾರು ಮಂದಿ ಪಾಸ್ ಇಲ್ಲದೆ ಹೇಗೆ ಪ್ರವೇಶಿಸಿದರು ಮತ್ತು ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುವ ಮಾನಸಿಕತೆ ಇದ್ದವರನ್ನು ಪೊಲೀಸರು ಹೇಗೆ ಒಳಗೆ ಬಿಟ್ಟರು ಎಂಬುದು ಪ್ರಶ್ನಾರ್ಥಕವಾಗಿದ್ದು, ಇದರ ಹಿಂದೆ ಬಹಳ ದೊಡ್ಡ ಷಡ್ಯಂತ್ರದ ಗುಮಾನಿ ಇದೆ. ದೇಶದಲ್ಲಿ ಗೊಂದಲ ನಿಮಾರ್ಣಕ್ಕೆ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಪ್ರಕರಣದ ಬಗ್ಗೆ ಎನ್ಐಎ ತನಿಖೆ ಮಾಡಿದರೆ ಸತ್ಯಾಸತ್ಯತೆ ಹೊರಬರಲಿದೆ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಸಭಾ ಸದಸ್ಯ ನಜೀರ್ ಅವರನ್ನು ವಿಚಾರಣೆಗೆ ಒಳಪಡಿಸಬೇಕು. ಬೆಂಬಲಿಗರು ಮತ್ತು ಯುವಕರ ಸಂಪರ್ಕ ಯಾರ ಜೊತೆ ಇದೆ ಎಂಬುದನ್ನು ತನಿಖೆ ಮಾಡಬೇಕು. ಈ ಬಗ್ಗೆ ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ. ಓಲೈಕೆ ಮಾಡುವ ಉದ್ದೇಶದಿಂದ ಕಚೇರಿ ಮತ್ತು ಮನೆಯೊಳಗೆ ಸಿದ್ದರಾಮಯ್ಯ ಯಾರನ್ನು ಬೇಕಾದರೂ ಬಿಟ್ಟುಕೊಳ್ಳುತ್ತಿದ್ದಾರೆ. ಇದರ ಹಿಂದಿರುವ ಶಕ್ತಿಯನ್ನು ಪೊಲೀಸರು ಪತ್ತೆ ಮಾಡಬೇಕು. ಭಾರತವನ್ನು ವಿಭಜನೆ ಮಾಡುವ ಮಾತನ್ನು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಆರೋಪಿಯನ್ನು ಬಂಧಿಸುವಂತೆ ಡಿಜಿಪಿಯವರನ್ನು ಕೇಳಿಕೊಂಡಿದ್ದೇನೆ ಎಂದರು.
ರಾಜಕೀಯ ವ್ಯಭಿಚಾರ
ಬಿಜೆಪಿ ವಿರುದ್ಧ ಕ್ರಾಸ್ ಓಟ್ ಮಾಡಿದವರ ಮೇಲೆ ಜನ ಕ್ರಮ ಕೈಗೊಳ್ಳುತ್ತಾರೆ. ಬಿಜೆಪಿಗೆ ಬಂದವರಿಗೆ ಒಳ್ಳೆಯ ಖಾತೆಯನ್ನು ನೀಡಲಾಗಿತ್ತು. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಮತ್ತೆ ಆ ಕಡೆ ತಿರುಗುವ ಮಾನಸಿಕತೆ ಸರಿಯಲ್ಲ. ಸೋಮಶೇಖರ್ ಬಿಜೆಪಿ ಸೇರಿದಾಗ ಯಶವಂತಪುರದಲ್ಲಿ ನಾನೇ ನಿಂತು ಚುನಾವಣೆ ಮಾಡಿದ್ದೆ. ಅವರು ನಡೆದುಕೊಂಡ ರೀತಿ ನಿಜಕ್ಕೂ ದು@ಖ ತಂದಿದೆ. ಇದೊಂದು ರೀತಿ ರಾಜಕೀಯ ವ್ಯಭಿಚಾರ ಎಂದರು.
ಎಲ್ಲಾ ಕಡೆಗೂ ಕಮಲ ಕ್ಯಾಂಡಿಡೇಟ್
ಉಡುಪಿ&ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಾಕಷ್ಟ್ಟು ಅಭಿವೃದ್ಧಿ ಮಾಡಿದ್ದೇನೆ. ಶೇ. 80 ರಿಂದ 90 ರಷ್ಟು ಜನರಿಗೆ ಕೇಂದ್ರ ಸರ್ಕಾರದ ಯೋಜನೆಗಳು ತಲುಪಿವೆ. ಆದರೆ ಪ್ರಚಾರದಲ್ಲಿ ಹಿಂದೆ ಬಿದ್ದಿದ್ದೇನೆ. ಚುನಾವಣೆಯಲ್ಲಿ ಎಲ್ಲಾ ಕಡೆಗೂ ಕಮಲ ಕ್ಯಾಂಡಿಡೇಟ್. ಯಾರು ಅಭ್ಯರ್ಥಿ ಅನ್ನೋದು ಮುಖ್ಯವಲ್ಲ. ಪೂರ್ವ ನಿಯೋಜಿತ ಭಿನ್ನಮತ ಶಮನವಾಗುತ್ತದೆ. ಹಣ ಇದ್ದವರು ಹಣ ಕೊಟ್ಟು ಏನು ಬೇಕಾದರೂ ಮಾಡಬಹುದು ಎಂದು ಭಾವಿಸಿದ್ದಾರೆ. ಹಣದ ದರ್ಪದಿಂದ ಚುನಾವಣೆ ಮಾಡಲು ಆಗಲ್ಲ ಎಂದರು.
ಚಿಕ್ಕಮಗಳೂರಿನಲ್ಲಿ ಪತ್ರ ಅಭಿಯಾನದಲ್ಲಿ ಒಂದೇ ಕೈ ಬರಹದಲ್ಲಿ ಸುಮಾರು 41 ಪತ್ರಗಳನ್ನು ಹಾಕಿದ್ದಾರೆ. ಕೇವಲ ನಾಲ್ಕೇ ಜನ ಅದನ್ನು ಪೋಸ್ಟ್ ಮಾಡಿದ್ದಾರೆ. ಪ್ರತಿಯೊಬ್ಬರು 10 ರಿಂದ 15 ಪತ್ರ ಹಿಡಿದು ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿದರು.