

ಮುಂಬೈ; ಮಾಲಿವುಡ್ನಲ್ಲಿನ ಅತಿರೇಕದ ಲೈಂಗಿಕ ದೌರ್ಜನ್ಯವನ್ನು ತೋರಿಸುವ ವರದಿಯು ವಿವಿಧ ವೃತ್ತಿಪರ ಪರಿಸರದಲ್ಲಿ ಮಹಿಳೆಯರು ಎದುರಿಸುತ್ತಿರುವ ಪರಿಸ್ಥಿತಿಗಳ ಬಗ್ಗೆ ವಿಶಾಲವಾದ ಸಂಭಾಷಣೆ ಹುಟ್ಟುಹಾಕಿದೆ. ಹೇಮಾ ಸಮಿತಿ ವರದಿ ಬಂದ ಬಳಿಕ ಸಿನಿಮಾರಂಗದ ಹಲವು ನಟಿಯರು ಸಿನಿಮಾ ಸೆಟ್ಗಳಲ್ಲಿ ತಾವು ಅನುಭವಿಸಿದ ಲೈಂಗಿಕ ದೌರ್ಜನ್ಯದ ಅಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸುತ್ತಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಿರ್ಮಾಪಕಿ ಏಕ್ತಾ ಕಪೂರ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ತಮ್ಮ ಮುಂಬರುವ ಚಿತ್ರ 'ದಿ ಬಕಿಂಗ್ಹ್ಯಾಮ್ ಮರ್ಡರ್ಸ್' ಟ್ರೈಲರ್ ಬಿಡುಗಡೆ ಸಮಾರಂಭದ ಬಳಿಕ ಹೇಮಾ ಸಮಿತಿ ವರದಿ ಮಾತನಾಡಿದ ಅವರು, ಮಹಿಳೆಯರ ಸುರಕ್ಷತೆ ಕೇವಲ ಚಿತ್ರರಂಗದ ಸಮಸ್ಯೆಯಲ್ಲ. ಅದು ಪ್ರತಿಯೊಂದು ಕೆಲಸದ ಸ್ಥಳದ ಸಮಸ್ಯೆಯಾಗಿದೆ. ನಾವು ಇದನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಮಹಿಳೆಯರು ಮುಂದೆ ಬಂದು ಸುರಕ್ಷಿತ ಮತ್ತು ಸಮಾನ ಕೆಲಸದ ಸ್ಥಳವನ್ನು ರಚಿಸಲು ಸಹಾಯ ಮಾಡಬೇಕು ಎಂದು ತಿಳಿಸಿದರು.
ಕೆಲಸದಲ್ಲಿ, ಯಾವುದೇ ಸ್ಥಳದಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣ ನಿರ್ಮಿಸಲು ಪ್ರಜ್ಞಾಪೂರ್ವಕ ಪ್ರಯತ್ನ ಅಗತ್ಯವಾಗಿದೆ. ನಾವು ಮಹಿಳೆಯರನ್ನು ಮುನ್ನಡೆಸಬೇಕು. ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಮುಂದೆ ಬರಬೇಕು ಹಾಗೂ ಪುರುಷರಿಗೆ ಸರಿಸಮಾನರಾಗಿ ನಾಯಕತ್ವ ವಹಿಸಬೇಕು. ಯಾವುದೇ ವ್ಯವಸ್ಥೆಯಲ್ಲಿ ದೊಡ್ಡ ಭಾಗದ ವೃತ್ತಿಪರ ಉದ್ಯೋಗಗಳನ್ನು ಮುನ್ನಡೆಸುವ ಜವಾಬ್ದಾರಿಯನ್ನು ಮಹಿಳೆಯರಿಗೂ ನೀಡಬೇಕು. ಇದು ನಡೆದರೆ ಲೈಂಗಿಕ ದೌರ್ಜನ್ಯ ಘಟಮೆಗಳು ಕಡಿಮೆಯಾಗುತ್ತವೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.
ಏಕ್ತಾ ಕಪೂರ್ ನಿರ್ಮಿಸುತ್ತಿರುವ ದಿ ಬಕಿಂಗ್ಹ್ಯಾಮ್ ಮರ್ಡರ್ಸ್ ಚಿತ್ರದಲ್ಲಿ ಕರೀನಾ ಕಪೂರ್ ಖಾನ್ ಮುಖ್ಯ ಪಾತ್ರದಲ್ಲಿದ್ದಾರೆ. ಈ ಚಿತ್ರವನ್ನು ಹನ್ಸಲ್ ಮೆಹ್ತಾ ನಿರ್ದೇಶಿಸಿದ್ದಾರೆ ಮತ್ತು ಈ ಚಿತ್ರವು ಸೆಪ್ಟೆಂಬರ್ 13 ರಂದು ಬಿಡುಗಡೆಯಾಗಲಿದೆ.(ಏಜೆನ್ಸೀಸ್)