

ನವದೆಹಲಿ: ‘IC 814- ದಿ ಕಂದಹಾರ್ ಹೈಜಾಕ್' ವೆಬ್ ಸರಣಿಯ ಆರಂಭಿಕ ಹಕ್ಕು ನಿರಾಕರಣೆಯನ್ನು ನವೀಕರಿಸಲಾಗಿದ್ದು. ಇದೀಗ ಸರಣಿಯ ಹಕ್ಕು ನಿರಾಕರಣೆಯಲ್ಲಿ ವಿಮಾನವನ್ನು ಅಪಹರಿಸಿದ ಭಯೋತ್ಪಾದಕರ ನಿಜವಾದ ಹೆಸರನ್ನೂ ಬರೆಯಲಾಗುವುದು ಎಂದು ನೆಟ್ಫ್ಲಿಕ್ಸ್ ಭಾರತದ ಕಂಟೆಂಟ್ ಹೆಡ್ ಮೋನಿಕಾ ಶೆರ್ಗಿಲ್ ತಿಳಿಸಿದ್ದಾರೆ.
ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಸಂಜಯ್ ಜಾಜು ಅವರೊಂದಿಗಿನ ಭೇಟಿಯ ನಂತರ ಶೆರ್ಗಿಲ್ ಅವರು ಈ ಬದಲಾವಣೆಯ ವಿಚಾರವನ್ನು ಹೇಳಿದರು. ಸರಣಿಯಲ್ಲಿನ ಕೋಡ್ ಹೆಸರುಗಳು ನಿಜವಾದ ಘಟನೆಯ ಸಮಯದಲ್ಲಿ ಬಳಸಿದ ಹೆಸರುಗಳನ್ನು ಪ್ರತಿಬಿಂಬಿಸುತ್ತವೆ. ಭಾರತವು ಕಥೆ ಹೇಳುವ ಶ್ರೀಮಂತ ಸಂಸ್ಕೃತಿಯನ್ನು ಹೊಂದಿದೆ. ಆ ಕಥೆಗಳು ಮತ್ತು ಅವುಗಳ ಅಧಿಕೃತ ಪ್ರಾತಿನಿಧ್ಯವನ್ನು ಪ್ರದರ್ಶಿಸಲು ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.
ಸಿರೀಸ್ನಲ್ಲಿ ಅಪಹರಣಕಾರರಿಗೆ ಬಳಸಿದ ಹಿಂದು ಕೋಡ್ ಹೆಸರುಗಳು ಮತ್ತು ಅವರಲ್ಲಿ ಕೆಲವರಿಗೆ ನೀಡಲಾದ ಮಾನವ ಮುಖಗಳು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ವಿವಾದ ಉಂಟಾದ ಬಳಿಕ ಸ್ಪಷ್ಟಿಕರಣ ನೀಡುವಂತೆ ಸಚಿವಾಲಯವು ಮೋನಿಕಾ ಶೆರ್ಗಿಲ್ ಅವರಿಗೆ ಸಮನ್ಸ್ ನೀಡಿತ್ತು. IC-814: ಕಂದಹಾರ್ ಹೈಜಾಕ್ ವೆಬ್ ಸರಣಿ 1999ರಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದೆ. ವಾಸ್ತವವಾಗಿ ನೇಪಾಳದ ಕಠ್ಮಂಡುವಿನಿಂದ ನವದೆಹಲಿಗೆ ಬರುತ್ತಿದ್ದ ಇಂಡಿಯನ್ ಏರ್ಲೈನ್ಸ್ ವಿಮಾನ ಸಂಖ್ಯೆ ಐಸಿ 814 ಅನ್ನು ಭಯೋತ್ಪಾದಕರು ಹೈಜಾಕ್ ಮಾಡಿದ್ದರು. ಈ ವಿಮಾನವನ್ನು ವಿವಿಧ ಸ್ಥಳಗಳ ಮೂಲಕ ಅಫ್ಘಾನಿಸ್ತಾನದ ಕಂದಹಾರ್ಗೆ ಕೊಂಡೊಯ್ಯಲಾಗಿತ್ತು.
ಹೈಜಾಕ್ ಆಗಿದ್ದ ವಿಮಾನದಲ್ಲಿದ್ದ ಪ್ರಯಾಣಿಕರ ಪ್ರಾಣಕ್ಕೆ ಬದಲಾಗಿ ಭಯೋತ್ಪಾದಕರ ಬೇಡಿಕೆಗಳನ್ನು ಭಾರತ ಸರ್ಕಾರವು ಒಪ್ಪಿಕೊಳ್ಳಬೇಕಾಯಿತು. ಆ ಸಮಯದಲ್ಲಿ ಭಾರತೀಯ ಜೈಲಿನಲ್ಲಿದ್ದ ಮೌಲಾನಾ ಮಸೂದ್ ಅಜರ್, ಒಮರ್ ಸಯೀದ್ ಶೇಖ್ ಮತ್ತು ಮುಷ್ತಾಕ್ ಅಹ್ಮದ್ ಜರ್ಗರ್ ಎಂಬ ಮೂವರು ಭಯೋತ್ಪಾದಕರನ್ನು ಬಿಡುಗಡೆ ಮಾಡುವುದು ಈ ಬೇಡಿಕೆಗಳಲ್ಲಿ ಒಂದಾಗಿತ್ತು. ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೆ ಈ ಮೂವರು ಭಾರತದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಘಟನೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ರಿಲೀಸ್ ಆಗಿರುವ ವೆಬ್ ಸರಣಿಯಲ್ಲಿ ಅಪಹರಣಕಾರರು ಘಟನೆಯ ಉದ್ದಕ್ಕೂ ತಮ್ಮ ನಿಜವಾದ ಹೆಸರುಗಳ ಬದಲಿಗೆ ಕೋಡ್ ಹೆಸರನ್ನು ಬಳಸುತ್ತಾರೆ. ಅಲ್ಲದೆ ಈ ಅಪಹರಣದಲ್ಲಿ ISI ಪಾಲ್ಗೊಳ್ಳಿವಿಕೆ ಇಲ್ಲ ಎಂಬುದನ್ನು ಬಿಂಬಿಸಲಾಗಿದೆ. ವೆಬ್ಸರಣಿಯಲ್ಲಿ ಭಯೋತ್ಪಾದಕರೊಂದಿಗಿನ ಮಾತುಕತೆಯನ್ನು ಕಾಮಿಡಿಯಾಗಿ ತೋರಿಸಲಾಗಿದೆ. ವರದಿ ಪ್ರಕಾರ ಅಪಹರಣಕಾರರ ನಿಜವಾದ ಹೆಸರುಗಳು ಇಬ್ರಾಹಿಂ ಅಥರ್, ಸನ್ನಿ ಅಹ್ಮದ್ ಖಾಜಿ, ಜಹೂರ್ ಇಬ್ರಾಹಿಂ, ಶಾಹಿದ್ ಅಖ್ತರ್ ಮತ್ತು ಸೈಯದ್ ಶಾಕಿರ್ ಆಗಿದೆ.ಆದರೆ ಸರಣಿಯಲ್ಲಿ ಬರ್ಗರ್, ಚೀಫ್, ಶಂಕರ್ ಮತ್ತು ಭೋಲಾ ಎಂನ ಕೋಡ್ ಹೆಸರನ್ನು ಬಳಸಿದ್ದಾರೆ.ಈ ಕಾರಣದಿಂದಾಗಿ ನೆಟ್ಫ್ಲಿಕ್ಸ್-ಬಾಲಿವುಡ್ ಅನ್ನು ಬಹಿಷ್ಕರಿಸಿ ಎಂಬ ಹ್ಯಾಶ್ಟ್ಯಾಗ್ನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲು ಆರಂಭಿಸಿದರು.(ಏಜೆನ್ಸೀಸ್)