ಶಿಕ್ಷಕರ ಬೇಡಿಕೆ ಪರಿಗಣಿಸಿ: ಶಿಕ್ಷಣೇತರ ಚಟುವಟಿಕೆಗಳಿಂದ ಶಿಕ್ಷಕರಿಗೆ ಮುಕ್ತಿ ಯಾವಾಗ?

Teacher (2)
Published on

ಶಿಕ್ಷಣದ ಗುಣಮಟ್ಟ ಕುಸಿತದ ಬಗ್ಗೆ ಹಲವು ಸಂದರ್ಭಗಳಲ್ಲಿ ಕಳವಳ ವ್ಯಕ್ತವಾಗುತ್ತದೆ. ಸುಧಾರಣೆ ಬಗ್ಗೆ ಚರ್ಚೆಗಳೂ ನಡೆಯುತ್ತವೆ. ಆದರೆ ಪರಿಹಾರ ಕಂಡುಕೊಳ್ಳಲು ಮಾತ್ರ ಸರ್ಕಾರ ಆಸಕ್ತಿ ತೋರುತ್ತಿಲ್ಲ ಎಂಬ ಮಾತುಗಳು ಶಿಕ್ಷಕರ ಸಂಘಟನೆಗಳಿಂದ ವ್ಯಕ್ತವಾಗುತ್ತಿವೆ. ಗುಣಮಟ್ಟ ಸುಧಾರಣೆಗೆ ಮೂಲಸೌಕರ್ಯ ಕಲ್ಪಿಸುವುದು ಒಂದು ಕಡೆಯಾದರೆ, ಬೋಧನೆ ಕೆಲಸಕ್ಕೆ ನೇಮಕಗೊಂಡಿರುವ ಶಿಕ್ಷಕರನ್ನು ಅನ್ಯ ಕರ್ತವ್ಯಗಳಿಗೆ ನಿಯೋಜನೆ ಮಾಡುವುದನ್ನು ಕಡಿಮೆ ಮಾಡಬೇಕು. ಹಾಗೂ ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂಬುದು ಮತ್ತೊಂದು. ಇದಕ್ಕೆ ಪೂರಕವಾಗಿ ಇನ್ನೂ ಹಲವು ವಿಷಯಗಳು ಇವೆ.

ಶಿಕ್ಷಣ ಕ್ಷೇತ್ರವೇ ಇರಲಿ, ಬೇರೆ ಕ್ಷೇತ್ರವೇ ಇರಲಿ ಯಾವುದಾದರೂ ಹೊಸ ಯೋಜನೆ ಅನುಷ್ಠಾನಕ್ಕೆ ಬಂದಾಗ ಶಿಕ್ಷಕರ ಮೇಲೆ ಹೆಚ್ಚುವರಿ ಕೆಲಸದ ಹೊಣೆ ಬೀಳುತ್ತಿದೆ. ಇಲಾಖೆಯ ಇತರ ಚಟುವಟಿಕೆಗಳಿಗೆ ಶಿಕ್ಷಕರನ್ನು ನಿಯೋಜನೆ ಮಾಡಬಾರದು ಎಂದೇನೂ ಇಲ್ಲ. ಆದರೆ ಅವರ ಮೂಲ ಕರ್ತವ್ಯವಾಗಿರುವ ಬೋಧನೆಗೆ ಅಡ್ಡಿಯಾಗುವಂತೆ ಶಿಕ್ಷಣೇತರ ಚಟುವಟಿಕೆಗಳಿಗೆ ನಿಯೋಜನೆ ಮಾಡುತ್ತಿರುವುದು ಶೈಕ್ಷಣಿಕ ಕ್ಷೇತ್ರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಶಿಕ್ಷಕರ ಮೇಲೆ ದಾಖಲಾತಿ ನಿರ್ವಹಣೆಯ ಹೊರೆ ಹೆಚ್ಚುತ್ತಿದೆ. ನಿರಂತರ ತರಬೇತಿ ಚಟುವಟಿಕೆಗಳು ಬೋಧನಾ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿವೆ. ಚುನಾವಣೆ ಕೆಲಸದ ಹೊರ ಕಡಿಮೆ ಮಾಡಲು ಬಿಎಲ್​ಒ ಹುದ್ದೆಗಳಿಂದ ಮುಕ್ತಗೊಳಿಸಬೇಕು ಎಂಬ ಬೇಡಿಕೆಗೆ ಸಹಮತ ವ್ಯಕ್ತವಾಗಿದ್ದರೂ ಕಾರ್ಯರೂಪಕ್ಕೆ ಬರುತ್ತಿಲ್ಲ.

ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಹೊಸ ತಾಲೂಕುಗಳ ರಚನೆಯಾದ ನಂತರ ಎಲ್ಲ ಇಲಾಖೆಗಳ ಕಚೇರಿಗಳು ಆರಂಭವಾಗಿವೆ ಆದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳು ಇದುವರೆಗೆ ಆರಂಭವಾಗಿಲ್ಲ. ಶಿಕ್ಷಕರ ಜಿಲ್ಲಾ ತರಬೇತಿ ಕೇಂದ್ರಗಳಲ್ಲಿರುವ ಹೆಚ್ಚುವರಿ ಹುದ್ದೆಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಸ್ಥಳಾಂತರ ಮಾಡಿದರೆ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂಬ ಶಿಕ್ಷಕರ ಸಂಘದ ಅಭಿಪ್ರಾಯಕ್ಕೆ ಮನ್ನಣೆ ಸಿಗಬೇಕು.

ಪ್ರಾಥಮಿಕ ಹಂತದಿಂದ ಉಪನ್ಯಾಸಕ ಹುದ್ದೆವರೆಗೆ ಬಡ್ತಿ ವಿಚಾರದಲ್ಲಿ ಸ್ಪಷ್ಟತೆ ಇರಲಿ ಎಂಬುದು ಶಿಕ್ಷಕರ ಅಭಿಪ್ರಾಯ. ಯಾರಿಗೂ ಅನ್ಯಾಯವಾಗದಂತೆ ಕಾಲಮಿತಿ ಬಡ್ತಿ ನಿಗದಿಪಡಿಸಬೇಕು. ವೃಂದ ಮತ್ತು ನೇಮಕಾತಿ ನಿಯಮ ತಿದ್ದುಪಡಿಯಾಗಬೇಕು. ಎನ್​ಪಿಎಸ್ ರದ್ದುಪಡಿಸಬೇಕು. ಗ್ರಾಮೀಣ ಕೃಪಾಂಕ ಆಧಾರದ ಮೇಲೆ ನೇಮಕಗೊಂಡಿರುವ ಶಿಕ್ಷಕರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂಬುದು ಶಿಕ್ಷಕರ ಪ್ರಮುಖ ಬೇಡಿಕೆಗಳ ಪಟ್ಟಿಯಲ್ಲಿವೆ. ಎನ್​ಇಪಿಯನ್ನು ರದ್ದುಗೊಳಿಸುವ ನಿರ್ಧಾರ ಕೈಗೊಂಡಿರುವುದರಿಂದ ಪ್ರಾಥಮಿಕ ಶಿಕ್ಷಣ ಹಂತ, ಪ್ರೌಢಶಿಕ್ಷಣ ಹಂತ ಹಾಗೂ ಕಾಲೇಜು ಹಂತಗಳನ್ನು ಈ ಹಿಂದಿನಂತೆಯೇ ಮುಂದುವರಿಸುವ ಬಗ್ಗೆ ಸಂಘಟನೆಯೊಂದಿಗೆ ಚರ್ಚೆ ಮಾಡಬೇಕು ಎಂಬ ಬೇಡಿಕೆ ಶಿಕ್ಷಕರದ್ದು. ಕಾರ್ಯಸಾಧುವಾದ ಬೇಡಿಕೆಗಳನ್ನು ಸರ್ಕಾರ ಈಡೇರಿಸುವ ಪ್ರಯತ್ನ ಮಾಡಬೇಕು.

ಪ್ರಸ್ತುತ ದಿನಗಳಲ್ಲಿ ಶಿಕ್ಷಕರಿಗೆ ಶಿಕ್ಷಣೇತರ ಚಟುವಟಿಕೆಗಳೇ ಹೆಚ್ಚಾಗುತ್ತಿರುವದನ್ನು ಯಾರೂ ಅಲ್ಲಗಳೆಯುವುದಿಲ್ಲ. ಶೈಕ್ಷಣಿಕ ಗುಣಮಟ್ಟ ಸುಧಾರಣೆ ಮತ್ತು ಅದಕ್ಕೆ ಪೂರಕವಾದ ಶಿಕ್ಷಕರ ಬೇಡಿಕೆಗಳನ್ನು ಸರ್ಕಾರ ಪರಿಗಣಿಸುವುದು ಒಳಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net