More

    ಸಂಪಾದಕೀಯ | ರೈತಸ್ನೇಹಿ ಕ್ರಮ; ವಿಶ್ವದಲ್ಲೇ ಅತಿದೊಡ್ಡ ಧಾನ್ಯ ಸಂಗ್ರಹ ಸೌಲಭ್ಯ ಯೋಜನೆ

    ವಿಶ್ವದಲ್ಲಿಯೇ ಅತಿದೊಡ್ಡ ಧಾನ್ಯ ಸಂಗ್ರಹ ವ್ಯವಸ್ಥೆಯನ್ನು ಸಹಕಾರಿ ವಲಯದಲ್ಲಿ ಸೃಷ್ಟಿಸುವ ಉದ್ದೇಶದ 1 ಲಕ್ಷ ಕೋಟಿ ರೂಪಾಯಿಯ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿರುವುದು ದೇಶದ ಆಹಾರ ಭದ್ರತೆ ಬಲಪಡಿಸುವ, ಬೆಳೆ ಹಾನಿ ಕಡಿಮೆ ಮಾಡುವ, ರೈತರ ಆದಾಯ ವೃದ್ಧಿಸುವ ಬಹುಆಯಾಮದ ಕ್ರಮವಾಗಿ ಗೋಚರಿಸುತ್ತದೆ. ಮುಂದಿನ ಐದು ವರ್ಷಗಳಲ್ಲಿ ಸಹಕಾರಿ ವಲಯದಲ್ಲಿ 700 ಲಕ್ಷ ಟನ್ ಧಾನ್ಯ ಸಂಗ್ರಹ ಸಾಮರ್ಥ್ಯ ಸೌಲಭ್ಯಗಳನ್ನು ರೂಪಿಸಲು ಮುಂದಾಗಿರುವುದು ಗ್ರಾಮೀಣ ಭಾರತದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಕೂಡ ನೆರವಾಗಬಹುದಾಗಿದೆ. ದೇಶದಲ್ಲಿ ವಾರ್ಷಿಕವಾಗಿ ಅಂದಾಜು 3,100 ಲಕ್ಷ ಟನ್ ಆಹಾರ ಧಾನ್ಯ ಉತ್ಪಾದಿಸಲಾಗುತ್ತದೆ. ಆದರೆ, ಶೇಖರಣಾ ಸಾಮರ್ಥ್ಯವು ಒಟ್ಟು ಉತ್ಪಾದನೆಯ ಶೇಕಡಾ 47ರಷ್ಟು ಮಾತ್ರ ಇದೆ.

    ಪ್ರಸ್ತುತ ದೇಶದಲ್ಲಿ ಒಟ್ಟು ಧಾನ್ಯ ಸಂಗ್ರಹಣಾ ಸಾಮರ್ಥ್ಯ ಅಂದಾಜು 1,450 ಲಕ್ಷ ಟನ್ ಇದೆ. ಈಗ ಉದ್ದೇಶಿತ 700 ಲಕ್ಷ ಟನ್ ಸಂಗ್ರಹಣಾ ಸಾಮರ್ಥ್ಯ ವ್ಯವಸ್ಥೆ ರೂಪಿಸುವ ಗುರಿಯನ್ನು ಸಾಧಿಸಿದರೂ ಒಟ್ಟು ಸಾಮರ್ಥ್ಯವು 2,150 ಲಕ್ಷ ಟನ್​ಗೆ ತಲುಪುತ್ತದೆ. ಆಗಲೂ 950 ಲಕ್ಷ ಟನ್ ಆಹಾರ ಸಂಗ್ರಹಣೆ ಸೌಲಭ್ಯದ ಕೊರತೆ ಉಂಟಾಗುತ್ತದೆ. ಮುಂದಿನ ದಿನಗಳಲ್ಲಿ ಇಳುವರಿ ಪ್ರಮಾಣವನ್ನು ಅಧಿಕಗೊಳಿಸುವ ಮೂಲಕ ಕೃಷಿ ಉತ್ಪಾದನೆಯನ್ನು ವ್ಯಾಪಕವಾಗಿ ಹೆಚ್ಚಿಸಲು ಕೇಂದ್ರ ಸರ್ಕಾರವು ಸಾಕಷ್ಟು ಕ್ರಮಗಳನ್ನು ಕೈಗೊಂಡಿರುವುದರಿಂದ ಸಂಗ್ರಹಕ್ಕೆ ಇನ್ನಷ್ಟು ಸೌಕರ್ಯಗಳ ಅಗತ್ಯ ಕೂಡ ಉಂಟಾಗಬಹುದಾಗಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಉತ್ಪಾದನೆಗಿಂತ ಶೇಖರಣೆ ಸಾಮರ್ಥ್ಯ ಹೆಚ್ಚಿನ ಪ್ರಮಾಣದಲ್ಲಿದೆ. ಜಾಗತಿಕವಾಗಿ ಐದನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ರೂಪುಗೊಂಡಿರುವ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿ ತಲುಪಬೇಕಾದರೆ ಕೃಷಿ ವಲಯದಲ್ಲಿ ಹೆಚ್ಚಿನ ಸಾಧನೆ ಅಗತ್ಯವಿದೆ.

    ಏಕೆಂದರೆ, ಭಾರತ ಈಗಲೂ ಕೃಷಿ ಪ್ರಧಾನ ರಾಷ್ಟ್ರವಾಗಿಯೇ ಉಳಿದುಕೊಂಡಿದೆ. ಅಭಿವೃದ್ಧಿಶೀಲ ರಾಷ್ಟ್ರವಾಗಿ ಭಾರತ ಪ್ರಗತಿ ಹೊಂದಿದರೂ ದೇಶದ ಶೇ. 58ರಷ್ಟು ಜನರ ಜೀವನೋಪಾಯವು ಕೃಷಿ ಕ್ಷೇತ್ರವನ್ನು ಅವಲಂಬಿಸಿದೆ. ಆದರೆ, ಒಟ್ಟಾರೆ ದೇಶದ ಆರ್ಥಿಕತೆಯಲ್ಲಿ ಕೃಷಿ ಆದಾಯದ ಪಾಲು 2020-21ರಲ್ಲಿ ಶೇ. 20.1; 2021-22ರಲ್ಲಿ ಶೇ. 19 ಹಾಗೂ 2022-23ರಲ್ಲಿ ಶೇ. 18.3 ಆಗಿದೆ. ಅಂದರೆ ಒಟ್ಟು ದೇಶದ ಜನಸಂಖ್ಯೆಯಲ್ಲಿ ಅರ್ಧಕ್ಕಿಂತ ಹೆಚ್ಚಿನ ಜನರು ಕೃಷಿಯನ್ನು ಅವಲಂಬಿಸಿದ್ದರೂ ಒಟ್ಟು ದೇಶಿಯ ಉತ್ಪನ್ನದಲ್ಲಿ (ಜಿಡಿಪಿ) ಕೃಷಿ ಕ್ಷೇತ್ರದ ಪಾಲು ಕಾಲು ಭಾಗದಷ್ಟೂ ಇಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಕೃಷಿ ಕ್ಷೇತ್ರದ ಬೆಳವಣಿಗೆಗೆ ಹಲವಾರು ಯೋಜನೆ, ಕಾರ್ಯಕ್ರಮಗಳ ಮೂಲಕ ಪ್ರೋತ್ಸಾಹ ನೀಡುತ್ತಿದೆ. ಈ ಸಾಲಿನ ಬಜೆಟ್​ನಲ್ಲಿ 1,25,036 ಕೋಟಿ ರೂಪಾಯಿಗಳನ್ನು ಕೃಷಿ ವಲಯಕ್ಕೆ ಮೀಸಲಿಟ್ಟಿದೆ. ಗ್ರಾಮೀಣ ಭಂಡಾರಣ ಯೋಜನೆ ಅನ್ವಯ ಆಹಾರ ಧಾನ್ಯಗಳ ಸಂಗ್ರಹ ಸೌಲಭ್ಯ ಹೆಚ್ಚಿಸಲು ಮುಂದಾಗಿರುವುದು ರೈತರ ಆದಾಯ ವೃದ್ಧಿಗೆ ಸಹಕಾರಿಯಾಗಲಿದೆ. ಆಹಾರ ಧಾನ್ಯಗಳು ಹಾಳಾಗದಂತೆ ಸಂಗ್ರಹಿಸಿ, ಹೆಚ್ಚಿನ ಬೆಲೆ ಬಂದಾಗ ಮಾರುವ ಮೂಲಕ ಆದಾಯ ವೃದ್ಧಿಸಿಕೊಳ್ಳಲು ನೆರವಾಗಲಿದೆ ಎಂದು ನಿರೀಕ್ಷಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts