ಭ್ರಷ್ಟ ಅಧಿಕಾರಿ ಮನೆ ಮೇಲೆ ಲೋಕಾಯಕ್ತ ದಾಳಿ; 15 ಗಂಟೆ ಕಳೆದರೂ ಮುಗಿಯದ ಪರಿಶೀಲನೆ; ರಾತ್ರಿ ಇಡೀ ನಡೆಯಲಿದೆ ಶೋಧ!

Lokayuktha
Published on

ತುಮಕೂರು: ರಾಜ್ಯದಲ್ಲಿ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸುವುದು ಮುಂದುವರಿದಿದ್ದು, ಇಂದು ಕೆಐಡಿಬಿ ಅಧಿಕಾರಿಯೊಬ್ಬರ ಮನೆಯನ್ನು ಜಾಲಾಡಿದ್ದಾರೆ. ವಿಶೇಷವೆಂದರೆ 15 ಗಂಟೆಗಳಿಂದ ನಡೆಯುತ್ತಿರುವ ಪರಿಶೀಲನೆ ಇನ್ನೂ ಮುಗಿದಿಲ್ಲ.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಅಧಿಕಾರಿ ಸಿ.ಎನ್.ಮೂರ್ತಿ ಎಂಬವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸತತ 15 ಗಂಟೆಗಳಿಂದ ಪರಿಶೀಲನೆ ನಡೆಸಿದರೂ ಮುಗಿಯದಿರುವುದು ಅಚ್ಚರಿ ಮೂಡಿಸಿದೆ. ಇಂದು ಬೆಳಗ್ಗೆ 6 ಗಂಟೆಗೇ ದಾಳಿ ನಡೆದಿದ್ದು, ಸತತ ಪರಿಶೀಲನೆ ನಡೆಯುತ್ತಿದೆ.

ತುಮಕೂರಿನ ಆರ್.ಟಿ.ನಗರದಲ್ಲಿರುವ ಸಿ.ಎನ್ ಮೂರ್ತಿ ಮನೆಯಲ್ಲಿ 15 ಮಂದಿ ಲೋಕಾಯುಕ್ತ ಅಧಿಕಾರಿಗಳು ನಿರಂತರ ಪರಿಶೀಲನೆ ನಡೆಸುತ್ತಿದ್ದಾರೆ. ಲೋಕಾಯುಕ್ತ ಎಸ್​ಪಿ ವಲೀಂ ಬಾಷಾ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ತುಮಕೂರು, ಬೆಂಗಳೂರು ಸೇರಿದಂತೆ ಹಲವೆಡೆ ಆಸ್ತಿ ಇರುವ ಮಹತ್ವದ ದಾಖಲೆಗಳು ಲಭ್ಯವಾಗಿವೆ.

ತುಮಕೂರು ಸೇರಿದಂತೆ 8 ಕಡೆ ಇರುವ ನಿವೇಶನ, ಒಂದು ವಾಸದ ಮನೆಯ ದಾಖಲೆಗಳ ಸಹಿತ 1 ಕೆ.ಜಿ.ಗೂ ಅಧಿಕ ಚಿನ್ನಾಭರಣ ಹಾಗೂ 8 ಲಕ್ಷ ರೂ. ನಗದು ಕೂಡ ಪತ್ತೆಯಾಗಿದೆ. ಲೋಕಾಯುಕ್ತ ಅಧಿಕಾರಿಗಳು ಇಲ್ಲಿ ಇಂದು ರಾತ್ರಿ ಇಡೀ ಶೋಧಕಾರ್ಯ ಮುಂದುವರಿಸಲಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net