

ನವದೆಹಲಿ: ರೆಸ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ (ಡಬ್ಲ್ಯುಎಫ್ಐ) ಅಧ್ಯಕ್ಷ, ಬಿಜೆಪಿಯ ಸಂಸದರೂ ಆಗಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ಲೈಂಗಿಕ ಕಿರುಕುಳದ ಆರೋಪ ಮಾಡಿ, ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನಾನಿರತ ಕುಸ್ತಿಪಟುಗಳಿಗೆ ಕೇಂದ್ರ ಕ್ರೀಡಾ ಸಚಿವರು ಕಿವಿಮಾತೊಂದನ್ನು ಹೇಳಿದ್ದಾರೆ.
ಪ್ರತಿಭಟನಾನಿರತ ಕುಸ್ತಿಪಟುಗಳನ್ನು ದೆಹಲಿ ಪೊಲೀಸರು ಒತ್ತಾಯಪೂರ್ವಕವಾಗಿ ತೆರವುಗೊಳಿಸಿದ ದೃಶ್ಯಗಳು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಆ ಬಳಿಕ ತಮಗೆ ನ್ಯಾಯ ಸಿಗಲಿಲ್ಲ ಎಂದು ಬೇಸರಗೊಂಡ ಕುಸ್ತಿಪಟುಗಳು ತಾವು ಗೆದ್ದ ಪದಕಗಳನ್ನು ಗಂಗಾನದಿಗೆ ಎಸೆಯಲು ಕೂಡ ಮುಂದಾಗಿದ್ದರು. ಈ ಎಲ್ಲದರ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ಕುಸ್ತಿಪಟುಗಳಿಗೆ ಕಿವಿಮಾತು ಹೇಳಿದ್ದಾರೆ.
ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ನಡೆಸುತ್ತಿರುವ ತನಿಖೆ ಪೂರ್ಣಗೊಳ್ಳುವವರೆಗೂ ಪ್ರತಿಭಟನಾನಿರತ ಕುಸ್ತಿಪಟುಗಳು ಸ್ವಲ್ಪ ಕಾಯಬೇಕು. ನಾವೆಲ್ಲರೂ ಕ್ರೀಡೆ ಮತ್ತು ಕ್ರೀಡಾಪಟುಗಳ ಪರವಾಗಿ ಇದ್ದೇವೆ. ಆದರೆ ಕುಸ್ತಿಪಟುಗಳು ತಮ್ಮ ಭವಿಷ್ಯಕ್ಕೆ ಹಾನಿಯಾಗುವಂಥ ಹೆಜ್ಜೆ ಇಡಬಾರದು ಎಂದು ಸಲಹೆ ನೀಡಿದ್ದಾರೆ.
ಡಬ್ಲ್ಯುಎಫ್ಐ ಅಧ್ಯಕ್ಷ ಸ್ಥಾನಕ್ಕೆ ಶೀಘ್ರದಲ್ಲೇ ಚುನಾವಣೆ ನಡೆಯಲಿದೆ. ಸಂಬಂಧಿತ ಎಲ್ಲ ಕ್ರಮಗಳೂ ನಡೆಯುತ್ತಿವೆ ಹಾಗೂ ದೇಶದ ಕಾನೂನು ನಿಯಮಗಳಿಗೆ ಅನುಸಾರ ತನಿಖೆಯೂ ನಡೆಯಲಿದೆ. ನೀವು ಸುಪ್ರೀಂ ಕೋರ್ಟ್, ರೆಸ್ಲಿಂಗ್ ಅಸೋಸಿಯೇಷನ್ ಹಾಗೂ ಪೊಲೀಸರನ್ನು ನಂಬಬೇಕು, ಈ ವಿಷಯದಲ್ಲಿ ನಾವೂ ಸೂಕ್ತ ತನಿಖೆ ನಡೆಸುತ್ತಿದ್ದೇವೆ ಎಂದು ಕ್ರೀಡಾ ಸಚಿವರು ಹೇಳಿದ್ದಾರೆ.