ನಗರ ದಟ್ಟಣೆ ನಿವಾರಣೆ: ಎಂಟು ಹೊಸ ನಗರಗಳ ಸೃಷ್ಟಿಗೆ ಕೇಂದ್ರ ಚಿಂತನೆ

Traffic (1)
Published on

ನಗರಗಳಲ್ಲಿನ ಜನದಟ್ಟಣೆಯನ್ನು ತನ್ಮೂಲಕ ಇತರ ಸಮಸ್ಯೆಗಳನ್ನು ತಗ್ಗಿಸುವ ಉದ್ದೇಶದಿಂದ ಹೊಸ ನಗರಗಳನ್ನು ರೂಪಿಸಬೇಕೆಂದು 15ನೇ ಹಣಕಾಸು ಆಯೋಗವು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ. ಸರ್ಕಾರವು ಈ ಪ್ರಸ್ತಾವದ ಪರಿಶಿಲನೆ ನಡೆಸುತ್ತಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಇಲಾಖೆಯ ಜಿ-20 ವಿಭಾಗದ ನಿರ್ದೇಶಕ ಎಂ.ಬಿ.ಸಿಂಗ್ ತಿಳಿಸಿದ್ದಾರೆ. ಬೃಹತ್ ನಗರಗಳಲ್ಲಿನ ಸಮಸ್ಯೆಗಳು, ಜನ ಮತ್ತು ವಾಹನ ದಟ್ಟಣೆ, ಮಾಲಿನ್ಯ ಇತ್ಯಾದಿ ಅವಲೋಕಿಸಿದಾಗ ಇದೊಂದು ಸೂಕ್ತ ಸಲಹೆಯಾಗಿ ಕಂಡುಬರುತ್ತದೆ.

ಹಣಕಾಸು ಆಯೋಗದ ಶಿಫಾರಸಿನ ನಂತರದಲ್ಲಿ ಹಲವು ರಾಜ್ಯಗಳು ನೂತನ ನಗರಗಳ ನಿರ್ವಣಕ್ಕೆ ಪ್ರಸ್ತಾವ ಕಳಿಸಿವೆ. ಒಟ್ಟು 26 ನಗರಗಳ ಸೃಷ್ಟಿ ಬಗ್ಗೆ ಮನವಿ ಬಂದಿದ್ದು, ಕೇಂದ್ರ ಸರ್ಕಾರವು ಇವುಗಳ ಪರಿಶೀಲನೆಯ ನಂತರ ಎಂಟು ನಗರಗಳನ್ನು ನಿರ್ವಿುಸಲು ನಿರ್ಧರಿಸಿದೆ. ಈ ಎಂಟು ನಗರಗಳು ಯಾವುವು ಎಂಬುದರ ಬಗ್ಗೆ ಸರ್ಕಾರ ಮಾಹಿತಿ ಹಂಚಿಕೊಂಡಿಲ್ಲ. ಮುಂದಿನ ದಿನಗಳಲ್ಲಿ ಈ ನಗರಗಳ ಬಗ್ಗೆ ಮತ್ತು ನಿರ್ವಣದ ಸ್ವರೂಪದ ಬಗೆಗಿನ ವಿವರಗಳನ್ನು ಸರ್ಕಾರ ನೀಡಲಿದೆ.

‘ಹಾಲಿ ನಗರಗಳು ನಾಗರಿಕರಿಗೆ ಮೂಲಸವಲತ್ತುಗಳನ್ನು ಒದಗಿಸಲು ಶಕ್ತವಾಗಿಲ್ಲ. ಇದಲ್ಲದೆ, ಹೊರವಲಯಗಳು ದಿಕ್ಕುದೆಸೆಯಿಲ್ಲದೆ ವಿಸ್ತರಣೆ ಆಗುತ್ತಿರುವುದರಿಂದಾಗಿ ಸಮಸ್ಯೆಗಳು ದಿನೇದಿನೇ ಹೆಚ್ಚುತ್ತಿವೆ. ನೂತನ ನಗರಗಳ ನಿಮಾರ್ಣ ಇದಕ್ಕೆ ತಕ್ಕಮಟ್ಟಿನ ಪರಿಹಾರವಾಗಬಲ್ಲದೆಂಬುದು ನಮ್ಮ ಆಶಾಭಾವನೆ’ ಎಂದು ಅಧಿಕಾರಿ ಹೇಳಿದ್ದಾರೆ. ಹೊಸ ನಗರಗಳ ಸೃಷ್ಟಿಯ ಆರ್ಥಿಕ ಭರಿಸುವಿಕೆ ಬಗ್ಗೆ ಹೆಚ್ಚು ಮಾಹಿತಿ ಲಭ್ಯವಾಗಿಲ್ಲವಾದರೂ, ಕೇಂದ್ರ ಸರ್ಕಾರವೇ ಪ್ರಮುಖ ಪಾತ್ರ ನಿಭಾಯಿಸಲಿದೆ ಎಂದು ಎಂ.ಬಿ.ಸಿಂಗ್ ಹೇಳಿದ್ದಾರೆ. ವಿವಿಧ ಕಾರಣಗಳಿಂದ ನಗರೀಕರಣ ಹೆಚ್ಚಿದಂತೆ ಸಮಸ್ಯೆಗಳೂ ಬೃಹತ್ ಪ್ರಮಾಣದಲ್ಲಿ ಹೆಚ್ಚಿರುವುದು ಜಾಗತಿಕವಾಗಿ ಗೋಚರಿಸುವ ವಾಸ್ತವ. ಹೀಗಾಗಿ, ರಸ್ತೆ, ನೀರು, ವಿದ್ಯುತ್ ಮುಂತಾದ ಮೂಲಸವಲತ್ತುಗಳನ್ನು ಸಹ ಪರಿಣಾಮಕಾರಿಯಾಗಿ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಜೀವನನಿರ್ವಹಣೆ ವೆಚ್ಚ ಹೆಚ್ಚಿ ಬಡ ಮತ್ತು ಮಧ್ಯಮವರ್ಗದವರ ಬವಣೆ ಹೇಳತೀರದಾಗಿದೆ.

ಇನ್ನೊಂದೆಡೆ, ಶುದ್ಧ ವಾಯುವಿನ ಕೊರತೆ ಹಾಗೂ ಮಾಲಿನ್ಯದಿಂದಾಗಿ ಆರೋಗ್ಯ ಸಮಸ್ಯೆಗಳೂ ಅಧಿಕಗೊಂಡು, ವೆಚ್ಚವೂ ಏರಿದೆ. ಇದರಿಂದಾಗಿ ವಯಸ್ಕರು ಮಾತ್ರವಲ್ಲ, ಮಕ್ಕಳೂ ಅನಾರೋಗ್ಯ ಹೊಂದುವುದು ಮಾಮೂಲಾಗಿದೆ. ಬೆಂಗಳೂರನ್ನೇ ಪ್ರಾತಿನಿಧಿಕವಾಗಿ ತೆಗೆದುಕೊಂಡರೆ, ಸಮಸ್ಯೆಗಳ ಗಾತ್ರ ಅನಾವರಣವಾಗುತ್ತದೆ. ಜನರ ಸಂಖ್ಯೆಗಿಂತ ವಾಹನಗಳ ಸಂಖ್ಯೆ ಇಲ್ಲಿ ಹೆಚ್ಚಿಗೆಯಿದ್ದು, ಟ್ರಾಫಿಕ್ ಎಂದರೆ ಜನ ಭಯಪಡುವಂತಾಗಿದೆ. ನ್ಯೂಯಾರ್ಕ್ ನಗರವಂತೂ ಗಗನಚುಂಬಿ ಕಟ್ಟಡಗಳ ಭಾರಕ್ಕೆ ಕುಸಿಯುವ ಪ್ರಕ್ರಿಯೆಗೆ ಈಡಾಗಿದೆ ಎಂದು ಅಧ್ಯಯನ ವರದಿಗಳು ಬೊಟ್ಟುಮಾಡಿವೆ. ಇಂಥ ಪರಿಸ್ಥಿತಿಯಲ್ಲಿ ನಗರಗಳ ದಟ್ಟಣೆ ತಗ್ಗಿಸಿ, ಬೆಳವಣಿಗೆಯ ವಿಕೇಂದ್ರೀಕರಣವೇ ತಕ್ಕಮಟ್ಟಿನ ಪರಿಹಾರ ಮಾರ್ಗ. ಆದರೆ ನೂತನ ನಗರಗಳ ನಿರ್ಮಾಣ ಅಷ್ಟು ಸುಲಭವಲ್ಲ. ಇದು ಭಾರಿ ಹಣಕಾಸು ಅಪೇಕ್ಷಿಸಲಿದ್ದು, ಹೇಗೆ ಭರಿಸಲಾಗುತ್ತದೆ ಮತ್ತು ನೂತನ ನಗರಗಳ ಸ್ವರೂಪ ಹೇಗಿರುತ್ತದೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net