

ಚಿತ್ರದುರ್ಗ ಜಿಲ್ಲೆ ಕಾವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿದ ಪರಿಣಾಮ ಮೂವರು ಸಾವನ್ನಪ್ಪಿ, 98 ಮಂದಿ ಅಸ್ವಸ್ಥಗೊಂಡಿರುವ ಪ್ರಕರಣ ತೀವ್ರ ಆತಂಕದ ವಿಷಯವಾಗಿದ್ದು, ಶುದ್ಧ ನೀರನ್ನು ಪೂರೈಸುವಲ್ಲಿ ಆಡಳಿತಗಾರರ ವೈಫಲ್ಯವನ್ನು ಸ್ಪಷ್ಟವಾಗಿ ಸೂಚಿಸುವ ಗಂಭೀರ ಸಂಗತಿಯಾಗಿದೆ. ದೇಶಕ್ಕೆ ಸ್ವಾತಂತ್ರ್ಯ ದೊರೆತು ಏಳು ವರ್ಷಗಳೇ ಸಂದಿದ್ದರೂ, ನಾಡು ಅಭಿವೃದ್ಧಿ ಪಥದಲ್ಲಿ ದಾಪುಗಾಲು ಹಾಕಿದ್ದರೂ ಬದುಕಿಗೆ ಅತ್ಯಗತ್ಯವಾದ ಶುದ್ಧ ಕುಡಿಯುವ ನೀರನ್ನು ಎಲ್ಲರಿಗೂ ಒದಗಿಸುವಲ್ಲಿ ಸಫಲತೆ ಸಾಧಿಸದಿರುವುದು ಖೇದಕರ ಸಂಗತಿಯಾಗಿದೆ.
ಕಳೆದ ಜೂನ್ ತಿಂಗಳ ಆರಂಭದಲ್ಲಿ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮಳೆ ಅಭಾವ ಸಾಧ್ಯತೆ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಕೊರತೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದ್ದರು. ‘ಎಲ್ಲ ಜನರಿಗೂ ಶುದ್ಧ ಕುಡಿಯುವ ನೀರು ಒದಗಿಸುವುದು ಅಧಿಕಾರಿಗಳ ಜವಾಬ್ದಾರಿ. ಅನುದಾನದ ಅಗತ್ಯವಿದ್ದರೆ ಒದಗಿಸಲಾಗುವುದು. ನೆಪ ಹೇಳಿ, ಜವಾಬ್ದಾರಿಯನ್ನು ಇನ್ನೊಬ್ಬರಿಗೆ ವಹಿಸಬೇಡಿ’ ಎಂಬ ಎಚ್ಚರಿಕೆಯನ್ನೂ ಮುಖ್ಯಮಂತ್ರಿಗಳು ನೀಡಿದ್ದರು. ಹೀಗಿದ್ದರೂ ಅಧಿಕಾರಿಗಳು ಎಷ್ಟು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದಕ್ಕೆ ಪ್ರಸ್ತುತ ಘಟನೆಯೇ ಸಾಕ್ಷಿಯಾಗಿದೆ.
ಕಲುಷಿತ ನೀರಿನಿಂದ ರಾಜ್ಯದಲ್ಲಿ ಜನರು ಸಾವನ್ನಪು್ಪವ ಘಟನೆಗಳು ಆಗಾಗ್ಗೆ ವರದಿಯಾಗುತ್ತಲೇ ಇವೆ. 2021 ಅಕ್ಟೋಬರ್ ತಿಂಗಳಲ್ಲಿ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಮಕರಬ್ಬಿಯಲ್ಲಿ ಕಲುಷಿತ ನೀರು ಸೇವಿಸಿ ಆರು ಜನರು ಸಾವನ್ನಪ್ಪಿ, 200ಕ್ಕೂ ಹೆಚ್ಚು ಮಂದಿ ವಾಂತಿಬೇಧಿಯಿಂದ ಬಳಲಿದ್ದರು. 2022ರ ಜೂನ್ನಲ್ಲಿ ರಾಯಚೂರಿನಲ್ಲಿ ಕಲುಷಿತ ನಿರು ಸೇವಿಸಿ ಆರು ಮಂದಿ ಸಾವನ್ನಪ್ಪಿದ್ದರು. ಮಳೆ ಬಂದು ಪೈಪ್ ಸೋರಿಕೆಯಿಂದ ನೀರು ಕಲುಷಿತಗೊಂಡಿತ್ತು ಎನ್ನಲಾಗಿತ್ತು. ಪ್ರತಿ ಮೃತರ ಕುಟುಂಬಗಳಿಗೆ 5 ಲಕ್ಷ ರೂಪಾಯಿ ಪರಿಹಾರವನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು. ರಾಯಚೂರ ನಗರಸಭೆ ಕೂಡ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿತ್ತು. ಇದೇ ವರ್ಷದ ಜೂನ್ ತಿಂಗಳಲ್ಲಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮದಲ್ಲಿ 10 ವರ್ಷದ ಬಾಲಕಿಯೊಬ್ಬಳು ಕಲುಷಿತ ನೀರು ಸೇವಿಸಿ ಸಾವನ್ನಪ್ಪಿದ್ದಳು. ಇವು ಕುಡಿಯುವ ನೀರು ಕಲುಷಿತವಾಗುವ ಪ್ರಕರಣಗಳಾದರೆ, ಕುಡಿಯುವ ನೀರು ಸೂಕ್ತ ರೀತಿಯಲ್ಲಿ ಸರಬರಾಜು ಆಗದಿರುವ ಪ್ರಕರಣಗಳಿಗಂತೂ ರಾಜ್ಯದಲ್ಲಿ ಬರವಿಲ್ಲ. ಕೆಲವೊಂದು ಮಹಾನಗರಗಳಲ್ಲಿ ಕೂಡ ವಾರಕ್ಕೊಮ್ಮೆ ಮಾತ್ರ ನೀರು ಪೂರೈಕೆಯಾಗುವ ದುಸ್ಥಿತಿ ಎಷ್ಟೋ ವರ್ಷಗಳಿಂದ ಮನೆ ಮಾಡಿದೆ.
ಪ್ರಸ್ತುತ ಕಾವಾಡಿಗರಹಟ್ಟಿಯಲ್ಲಿ ಘಟನೆಗೆ ಕಾರಣರಾದವರನ್ನು ಬಂಧಿಸದ ಹೊರತು ಶವ ಸಂಸ್ಕಾರ ನಡೆಸುವುದಿಲ್ಲ ಎಂದು ಸ್ಥಳೀಯರು ಪಟ್ಟು ಹಿಡಿದಿದ್ದರು. ಆದರೆ, ಎಫ್ಎಸ್ಎಲ್ ವರದಿ ಆಧರಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಅಂತ್ಯಕ್ರಿಯೆ ಕೈಗೊಂಡಿದ್ದಾರೆ. ಈ ಹಿಂದಿನ ಪ್ರಕರಣಗಳನ್ನು ಗಮನಿಸಿದರೆ ಸಂಬಂಧಪಟ್ಟವರ ವಿರುದ್ಧ ಗಂಭೀರ ಕ್ರಮಗಳನ್ನು ಕೈಗೊಂಡಿರುವುದು ಕಂಡುಬರುವುದಿಲ್ಲ. ಪ್ರಕರಣ ಬಿಸಿಯಾಗಿರುವ ಸಂದರ್ಭದಲ್ಲಿ ಕಾಟಾಚಾರಕ್ಕೆ ಒಂದಿಬ್ಬರು ಅಧಿಕಾರಿಗಳನ್ನು ಅಮಾನತು ಮಾಡುವ ಹಾಗೂ ಒಂದಿಷ್ಟು ಪರಿಹಾರ ನೀಡುವ ರೂಢಿಯೇ ಮುಂದುವರಿದಿದೆ. ಕುಡಿಯುವ ನೀರಿನ ಬಗೆಗೆ ವಿಶೇಷ ಮುತುವರ್ಜಿ ತೋರಿರುವ ಮುಖ್ಯಮಂತ್ರಿಗಳು ಪ್ರಸ್ತುತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಗಂಭೀರ ಕ್ರಮ ಕೈಗೊಳ್ಳುವ ಮೂಲಕ ಮುಂದೆ ಇಂತಹ ಪ್ರಕರಣಗಳು ಮರುಕಳಿಸಿದಂತೆ ಎಚ್ಚರಿಕೆಯ ಸಂದೇಶವನ್ನು ರವಾನಿಸುವ ಅಗತ್ಯತೆ ಇದೆ.