

ವಿಜಯವಾಣಿ ಸುದ್ದಿಜಾಲ ಬದಿಯಡ್ಕ
ದೈವವನ್ನು ಆರಾಧಿಸುವಂತೆ ದೈವನರ್ತಕರನ್ನು ಗೌರವಿಸುವ ಪರಿಪಾಠ ಸಮಾಜದಲ್ಲಿ ಬರಬೇಕು. ತನ್ನ ಸೇವೆಯನ್ನು ನಿಷ್ಠೆಯಿಂದ ಮಾಡುವ ಮನೋಭಾವ ಪ್ರತಿಯೊಬ್ಬ ದೈವನರ್ತಕರಲ್ಲಿರಬೇಕು. ದೈವನರ್ತಕರು ಸಂಸ್ಕೃತಿಯನ್ನು ತಲೆಮಾರಿನಿಂದ ತಲೆಮಾರಿಗೆ ಕೊಂಡೊಯ್ಯುವ ಧರ್ಮದ ಪ್ರತಿನಿಧಿಗಳು ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದರು ಹೇಳಿದರು.
ತನ್ನ ಪಂಚಮ ಚಾತುರ್ಮಾಸ್ಯದ ಸಂದರ್ಭ ಆಯೋಜಿಸಲಾದ ಸಮಾರಂಭದಲ್ಲಿ ಶ್ರೀ ಎಡನೀರು ಮಠದಲ್ಲಿ ಪ್ರಸಿದ್ಧ ದೈವನರ್ತಕ ರಾಜನ್ ಪಣಿಕ್ಕರ್‌ಗೆ ಅನುಗ್ರಹಿಸಿ ಮಾತನಾಡಿದರು.
ದೈವದ ತೊಡಂಗಲ್‌ನಲ್ಲಿ ಆ ದೈವದ ಚರಿತ್ರೆ ಹೇಳಲಾಗುತ್ತಿದೆ. ದೈವದ ಕಥೆ ಪರಂಪರೆಯಿಂದ ಮುಂದಿನ ಜನಾಂಗಕ್ಕೆ ಮುಂದುವರಿಯುತ್ತಿದೆ. ನಿಷ್ಠಾವಂತ ಅಧಿಕಾರಿಯಾಗಿ ಕಲೆಯ ಬಗ್ಗೆ ಅನುಭವ ಹೊಂದಿದ ಪೊಲೀಸ್ ಅಧಿಕಾರಿ ನಮ್ಮೊಂದಿಗಿದ್ದಾರೆ ಎಂದರು.
ಅಡಿಶನಲ್ ಎಸ್‌ಪಿ ಡಾ.ಬಾಲಕೃಷ್ಣನ್ ಮುಖ್ಯ ಅತಿಥಿಯಾಗಿ ಮಾತನಾಡಿದರು. ಉಮೇಶ್ ನರಿಕಡಪ್ಪು ಸ್ವಾಗತಿಸಿದರು. ಸೂರ್ಯನಾರಾಯಣ ಭಟ್ ಎಡನೀರು ಕಾರ್ಯಕ್ರಮ ನಿರೂಪಿಸಿದರು. ಸತೀಶ್ ಎಡನೀರು ವಂದಿಸಿದರು.
ದೈವದ ಅನುಗ್ರಹ ಪಡೆದ ರಾಜನ್ ಪಣಿಕ್ಕರ್ ಭಕ್ತಿ ಶ್ರದ್ಧೆಯಿಂದ ತಮ್ಮ ಕರ್ತವ್ಯ ನಿಷ್ಠೆಯಿಂದ ನಿರ್ವಹಿಸುತ್ತಿದ್ದಾರೆ. ಅವರನ್ನು ಮಠದಲ್ಲಿ ಗೌರವಿಸುತ್ತಿರುವುದು ಶ್ಲಾಘನೀಯ. ಯಕ್ಷಗಾನ, ಕಥಕ್ಕಳಿಗೆ ವಿಶೇಷ ಸಾಮ್ಯತೆಯಿದೆ. ಯಕ್ಷಗಾನ ಎಡನೀರು ಮಠದ ಮುಖಮುದ್ರೆಯಾಗಿದೆ. ಆದರೂ ಯಕ್ಷಗಾನದೊಂದಿಗೆ ಕಥಕ್ಕಳಿಯನ್ನು ತಮ್ಮ ಚಾತುರ್ಮಾಸ್ಯದ ಅವಧಿಯಲ್ಲಿ ಅಳವಡಿಸಿಕೊಂಡಿರುವುದು ಗಮನಾರ್ಹ ವಿಚಾರ. ಡಾ.ಬಾಲಕೃಷ್ಣನ್ ಅಡಿಶನಲ್ ಎಸ್‌ಪಿ