

ಉಳ್ಳಾಲ: ಪ್ರಧಾನಿ ಮೋದಿ ಮಹಿಳೆಯರ ಅಭಿವೃದ್ಧಿ ಕನಸು ಕಂಡು ನಿರಂತರ ಕಾರ್ಯಕ್ರಮ ರೂಪಿಸುತ್ತಿದ್ದಾರೆ. ಶೇ.33 ಮೀಸಲಾತಿ ಉತ್ತಮ ಕಾರ್ಯವಾಗಿದ್ದು ಮಹಿಳಾ ಅಭಿವೃದ್ಧಿಗೆ ಸಹಕಾರಿ ಎಂದು ಕಲಬುರಗಿ ಸರ್ಜಿಕಲ್ ಆಂಕಾಲಾಜಿಸ್ಟ್, ಪದ್ಮಶ್ರೀ ಡಾ.ವಿಜಯಲಕ್ಷ್ಮೀ ದೇಶ್ಮನೆ ಹೇಳಿದರು.
ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದೊಂದಿಗೆ ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್‌ನ ಎನ್‌ಎಸ್‌ಎಸ್ ಘಟಕದ ಆಶ್ರಯದಲ್ಲಿ ಶುಕ್ರವಾರ ಎಬಿಎಸ್‌ಎಂಐಡಿಎಸ್ ಆವಿಷ್ಕಾರ್ ಸಭಾಂಗಣದಲ್ಲಿ ‘ಮಹಿಳಾ ವಾಸ್ತವಗಳನ್ನು ಪುನಃರಚಿಸುವ ರಾಷ್ಟ್ರೀಯ ಸಮಾವೇಶ’ ಉದ್ಘಾಟಿಸಿ ಮಾತನಾಡಿದರು.
ಜಗತ್ತು ಶಾಂತಿ ಮತ್ತು ಸಂತೋಷ ಬಯಸುತ್ತಿದ್ದು ಮಹಿಳಾ ಸಬಲೀಕರಣ ಅಗತ್ಯ, ಸಾವಿತ್ರಿ ಬಾಯಿ ಪುಲೆ ಹೆಣ್ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದು ಪ್ರಧಾನಿಯೂ ಆ ಕಾರ್ಯದಲ್ಲಿ ನಿರತರಾಗಿದ್ದಾರೆ. ಮೋದಿ ಆಡಳಿತಾವಧಿಯಲ್ಲಿ ಭಾರತ ಸೂಪರ್ ಪವರ್ ಆಗುವುದರಲ್ಲಿ ಸಂಶಯವಿಲ್ಲ. ತಾನು ಕಲಬುರಗಿ ಸ್ಲಂ ಪ್ರದೇಶದಲ್ಲಿ ಹುಟ್ಟಿದೆ. ತಂದೆ ಸ್ವಾತಂತ್ರೃ ಹೋರಾಟಗಾರರಾಗಿದ್ದರೆ, ತಾಯಿ ಬೀದಿಬದಿ ಹಣ್ಣು ಮತ್ತು ತರಕಾರಿ ಮಾರಾಟ ಮಾಡುತ್ತಿದ್ದರು. ಐವರು ಸಹೋದರಿಯರು ಪಿಎಚ್.ಡಿ ಮಾಡಿ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿದ್ದರೆ, ಓರ್ವ ಸಹೋದರಿ ತಾಯಿಯ ವ್ಯವಹಾರದ ಜತೆ ನಿಂತಿದ್ದಾರೆ. ಪದ್ಮಶ್ರೀ ಪುರಸ್ಕಾರ ಕರ್ನಾಟಕ ಮತ್ತು ಕಲಬುರ್ಗಿ ಜನತೆಗೆ ಅರ್ಪಿಸಿದ್ದೇನೆ. ರೋಗಿಗಳೇ ತನಗೆ ದೇವರು. ಮಾಧ್ಯಮಗಳು ಪ್ರತಿ ಸಂದರ್ಭದಲ್ಲೂ ಕುಟುಂಬದ ಜತೆಗಿದ್ದು ಸಕಾರಾತ್ಮಕ ವರದಿ ಪ್ರಕಟಿಸಿದ್ದು ಪದ್ಮಶ್ರೀ ಪುರಸ್ಕಾರ ಲಭಿಸುವಂತೆ ಮಾಡಿತು ಎಂದರು.
ನಿಟ್ಟೆ ವಿವಿ ಕುಲಪತಿ ಪ್ರೊ.ಎಂ.ಎಸ್.ಮೂಡಿತ್ತಾಯ ಮಾತನಾಡಿ, ಐವರು ಹೆಣ್ಮಕ್ಕಳು ಪಿಎಚ್.ಡಿ ಮಾಡಿದ್ದರೆ, ಒಬ್ಬರು ಪದ್ಮಶ್ರೀ ಪಡೆಯಬೇಕಾದರೆ ಅವರ ತಾಯಿಯ ಪರಿಶ್ರಮ ಮಹತ್ತರ ಪಾತ್ರ ವಹಿಸಿದೆ. ನಿಟ್ಟೆ ವಿಶ್ವವಿದ್ಯಾಲಯ ಮಹಿಳಾ ಸಬಲೀಕರಣ ನಿಟ್ಟಿನಲ್ಲಿ ನಿರಂತರ ಕಾರ್ಯಕ್ರಮ ನಡೆಸುತ್ತಾ ಬಂದಿದೆ ಎಂದರು.
ನಿಟ್ಟೆ ವಿವಿ ಸಹಕುಲಾಧಿಪತಿ ಪ್ರೊ.ಎಂ.ಶಾಂತಾರಾಮ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಡೀನ್ ಡಾ.ಜಯಪ್ರಕಾಶ್ ಶೆಟ್ಟಿ ಸ್ವಾಗತಿಸಿದರು. ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಶಶಿಕುಮಾರ್ ಶೆಟ್ಟಿ ವಂದಿಸಿ, ಗಾಯತ್ರಿ ನಿರೂಪಿಸಿದರು.
ಪ್ರಸ್ತುತ ದಿನಗಳಲ್ಲಿ ಶಿಕ್ಷಣ, ರಾಜಕೀಯ, ಆರೋಗ್ಯ ಕ್ಷೇತ್ರದಲ್ಲಿ ಹೆಣ್ಮಕ್ಕಳು ಮುಂಚೂಣಿಯಲ್ಲಿದ್ದಾರೆ. ನಿಟ್ಟೆ ಶಿಕ್ಷಣ ಸಂಸ್ಥೆಯಲ್ಲೇ ಪ್ರತಿವರ್ಷ ಶೇ.60ರಷ್ಟು ಹೆಣ್ಮಕ್ಕಳು ದಾಖಲಾತಿ ಪಡೆಯುತ್ತಿದ್ದಾರೆ. ಕ್ರೀಡೆ ಸಹಿತ ಇತರ ಕ್ಷೇತ್ರಗಳಲ್ಲೂ ಹೆಚ್ಚಿನ ವೇತನ ಪಡೆಯುವಲ್ಲೂ ಮುಂಚೂಣಿಯಲ್ಲಿದ್ದಾರೆ. ಡಾ.ವಿಜಯಲಕ್ಷ್ಮೀ ಪದ್ಮಭೂಷಣ ಪುರಸ್ಕಾರಕ್ಕೆ ಅರ್ಹರು. ಪ್ರೊ.ಎಂ.ಶಾಂತರಾಮ್ ಶೆಟ್ಟಿ ಸಹಕುಲಾಧಿಪತಿ, ನಿಟ್ಟೆ ವಿವಿ https://www.vijayavani.net/kashikate-temple-program https://www.vijayavani.net/chinnaiah-remanded-in-custody-for-another-3-days