

ED Raid Case : ನಾನು ಪರಮೇಶ್ವರ್ ಅವರ ಮನೆಗೆ ಭೇಟಿ ಮಾಡಿ ಅವರ ಜತೆ ಚರ್ಚೆ ಮಾಡಿದೆ. ನಾವು ಸಾರ್ವಜನಿಕ ಜೀವನದಲ್ಲಿದ್ದು ಬೇಕಾದಷ್ಟು ಜನ ಟ್ರಸ್ಟ್ ನಡೆಸುತ್ತಾರೆ. ಮದುವೆ ಶುಭ ಸಮಾರಂಭದಲ್ಲಿ ಅನೇಕ ಉಡುಗೊರೆಗಳು ಕೊಟ್ಟಿರಬಹುದು. ಪರಮೇಶ್ವರ್ ರವರಂತಹ ಪ್ರಭಾವಿ ವ್ಯಕ್ತಿ ಬೇರೆಯವರಿಗೆ ಸ್ಮಗ್ಲಿಂಗ್ ಮಾಡಲು ಹೇಳಲು ಸಾಧ್ಯವೇ? ಈ ರೀತಿ ಯಾವುದೇ ರಾಜಕಾರಣಿ ಹೇಳಲು ಸಾಧ್ಯವಿಲ್ಲ ಎಂದು ಪರಮೇಶ್ವರ್ ಶಿಕ್ಷಣ ಸಂಸ್ಥೆಗಳ ಮೇಲೆ ನಡೆದ ಇಡಿ ದಾಳಿ ಬಗ್ಗೆ ಮಾತನಾಡಿದರು.
ಬೆಂಗಳೂರಿನಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದರು. ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಆ ಹೆಣ್ಣು ಮಗಳು ತಪ್ಪು ಮಾಡಿದ್ದರೆ ಅದು ಆಕೆಯ ವೈಯಕ್ತಿಕ ವಿಚಾರ. ತಪ್ಪು ಸಾಬೀತಾದರೆ ಆಕೆಗೆ ಕಾನೂನು ಪ್ರಕಾರ ಶಿಕ್ಷೆಯಾಗಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಪರಮೇಶ್ವರ್ ಅವರ ಪ್ರಕರಣದಲ್ಲಿ ಅವರು ಕಾನೂನಿಗೆ ತಲೆಬಾಗುವ ವ್ಯಕ್ತಿ. ರಾಜ್ಯದ ಗೃಹ ಸಚಿವರು. ಅವರು ದೊಡ್ಡ ನಾಯಕರು. 8 ವರ್ಷ ಪಕ್ಷದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಅವರ ಬಗ್ಗೆ ನಮಗೆ ಹೆಮ್ಮೆಯಿದೆ. 1990ರಿಂದಲೂ ಅವರು ನನ್ನೊಂದಿಗೆ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ್ದಾರೆ. ಅವರು ಸಜ್ಜನ ಹಾಗೂ ಪ್ರಾಮಾಣಿಕ ರಾಜಕಾರಣಿ. ಅವರು ಯಾವುದೇ ತಪ್ಪು ಮಾಡಿಲ್ಲ ಎಂದರು.
ಪರಮೇಶ್ವರ್ ಅವರಿಗೆ ಏನಾದರೂ ಸಂದೇಶ ನೀಡುತ್ತೀರಾ ಎಂದು ಕೇಳಿದಾಗ, “ನಾನು ಅವರ ಮನೆಗೆ ಹೋಗಿ ಭೇಟಿ ಮಾಡಿದ್ದೇನೆ. ನಾವು ನಿಮ್ಮ ಪರವಾಗಿ ನಿಲ್ಲುತ್ತೇವೆ ಎಂದು ಹೇಳಿದ್ದೇನೆ” ಎಂದರು.