

ನವದೆಹಲಿ: ಅಬಕಾರಿ ನೀತಿ ಜಾರಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ಗೆ ಜಾರಿ ನಿರ್ದೇಶನಾಲಯ ಎಂಟನೇ ಬಾರಿಗೆ ನೊಟಿಸ್ ಜಾರಿ ಮಾಡಿದೆ.
ಮಾರ್ಚ್ 16ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ಮಾಡಲಾಗಿರುವ ಸಮನ್ಸ್ನಲ್ಲಿ ಸೂಚಿಸಲಾಗಿದೆ. ಅಬಕಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ಗೆ ಜಾರಿ ಮಾಡಲಾಗಿರುವ ಆರನೇ ನೋಟಿಸ್ ಇದಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಏಳು ಬಾರಿ ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಗೆ ಕೇಜ್ರಿವಾಲ್ ಹಾಜರಾಗುತ್ತಿಲ್ಲ ಎಂದು ಆರೋಪಿಸಿ ED ನ್ಯಾಯಾಲಯಕ್ಕೆ ದೂರು ಸಲ್ಲಿಸಿತ್ತು. ನ್ಯಾಯಾಲಯ ಆದೇಶಿಸಿದರೆ ಮಾತ್ರ ವಿಚಾರಣೆಗೆ ಹಾಜರಾಗುವುದಾಗಿ ಕೇಜ್ರಿವಾಲ್ ತಿಳಿಸಿದ್ದರು.
ಈ ಹಿಂದೆ ನವೆಂಬರ್ 02, ಡಿಸೆಂಬರ್ 21, ಜನವರಿ 03, 18 ಹಾಗೂ ಫೆಬ್ರವರಿ 02, 16ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ನೋಟಿಸ್ ಜಾರಿ ಮಾಡಿತ್ತು. ಆದರೆ, ಇದಕ್ಕೆ ಪ್ರತಿಕ್ರಿಯಿಸಿದ ಕೇಜ್ರಿವಾಲ್ ಇದೊಂದು ಸುಳ್ಳು ಪ್ರಕರಣವಾಗಿದ್ದು, ತಾವು ವಿಚಾರಣೆಗೆ ಹಾಜರಾಗುವುದಿಲ್ಲ ಎಂದಿದ್ದರು.