

ಲಖನೌ: ಪಿಕ್ ಅಪ್ ಟ್ರಕ್ಗೆ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ನಡೆದಿದೆ.
ಘಟನೆಯು ಬಲಿಯಾ ಜಿಲ್ಲೆಯ ಸುಗರ್ ಛಾಪ್ರಾ ಪ್ರದೇಶದ ಬಳಿ ನಡೆದಿದ್ದು, ಗಾಯಗೊಂಡವರ ಪೈಕಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೇವರಂಜನ್ , ಜೀಪಿನಲ್ಲಿದ್ದವರು ದೋಕ್ತಿ ಗ್ರಾಮದವರು ಎಂದು ತಿಳಿದು ಬಂದಿದ್ದು, ಮಾಸುಂಪುರ್ ಗ್ರಾಮದಲ್ಲಿ ಕಾರ್ಯಕ್ರಮವನ್ನು ಮುಗಿಸಿಕೊಂಡು ವಾಪಸ್ ಆಗುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಬೆಳಗಿನ ಜಾವ 3:30ರ ಸುಮಾರಿಗೆ ಅಪಘಾತ ಸಂಭವಿಸಿದೆ.
ಗಾಯಗೊಂಡವರ ಪೈಕಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ವಾರಣಾಸಿಗೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅಧಿಕಾರಿಗಳು ಸಲ್ಲಿಸುವ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೇವರಂಜನ್ ತಿಳಿಸಿದ್ದಾರೆ.