

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಹಗರಣಕ್ಕೆ ಸಂಬಂಧಿಸಿದಂತೆ ಆರೋಪಕ್ಕೆ ಒಳಗಾಗಿ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಒಳಪಟ್ಟಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸದ್ಯಕ್ಕಂತೂ ನಿರಾಳರಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಏಕೆಂದರೆ ಜಾರಿ ನಿರ್ದೇಶನಾಲಯ (ಇ.ಡಿ.) ನಾಳೆಯೂ ವಿಚಾರಣೆಗೆ ಬರುವಂತೆ ಸೂಚಿಸಿದೆ.
ಹಗರಣಕ್ಕೆ ಸಂಬಂಧಿಸಿದಂತೆ ಜೂ. 13ರಂದು ಇ.ಡಿ. ರಾಹುಲ್ ಗಾಂಧಿಯ ವಿಚಾರಣೆ ಆರಂಭಿಸಿದ್ದು, ಸತತ ಮೂರು ದಿನ ವಿಚಾರಣೆ ನಡೆದಿತ್ತು. ಇಂದಿನ ವಿಚಾರಣೆ ನಾಲ್ಕನೇ ದಿನದ್ದಾಗಿದ್ದು, ನಾಳೆಯೂ ವಿಚಾರಣೆಗೆ ಬರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಹಗರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಇದುವರೆಗೆ ಒಟ್ಟು ಸುಮಾರು 40 ಗಂಟೆಗಳ ಕಾಲ ಇ.ಡಿ. ವಿಚಾರಣೆ ಒಳಪಟ್ಟಿದ್ದಾರೆ. ಕಳೆದ ಸೋಮವಾರ, ಮಂಗಳವಾರ, ಬುಧವಾರ ಒಟ್ಟು 30 ಗಂಟೆಗಳ ವಿಚಾರಣೆಗೆ ಒಳಪಟ್ಟಿದ್ದ ರಾಹುಲ್ಗೆ, ತಾಯಿ ಸೋನಿಯಾ ಅನಾರೋಗ್ಯ ಹಿನ್ನೆಲೆಯಲ್ಲಿ ವಿಚಾರಣೆಯಿಂದ ಒಂದಷ್ಟು ಮುಕ್ತಿ ಸಿಕ್ಕಿತ್ತು.
ಆದರೆ ಇಂದು ಮತ್ತೆ ವಿಚಾರಣೆಗೆ ಒಳಪಡಿಸಿರುವ ಇ.ಡಿ. ನಾಳೆಗೂ ವಿಚಾರಣೆ ಮುಂದುವರಿಸುವುದಾಗಿ ಹೇಳಿದೆ. ಇನ್ನು ನಿನ್ನೆ ರಾಹುಲ್ ಗಾಂಧಿ ಜನ್ಮದಿನವಿದ್ದು, ಸತತ ವಿಚಾರಣೆ, ತಾಯಿಯ ಅನಾರೋಗ್ಯ, ಕೇಸ್ ಕುರಿತ ಆತಂಕ ಎಲ್ಲವೂ ಸೇರಿ ಹುಟ್ಟುಹಬ್ಬದ ಖುಷಿಯನ್ನೇ ಮಂಕಾಗಿಸಿದ್ದವು.